.ಟೊಮೆಟೋಗೆ ಮತ್ತೆ ಬಂತು ಚಿನ್ನದ ಬೆಲೆ

| Published : Jun 19 2024, 01:00 AM IST

ಸಾರಾಂಶ

ಜಿಲ್ಲೆಯಲ್ಲಿ ಈಗಾಗಲೇ ಸುಗ್ಗಿ ಪ್ರಾರಂಭವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಆವಕ ತೀರ ಕಡಿಮೆಯಾಗಿದೆ. ಸುಗ್ಗಿಯಲ್ಲಿ ಪ್ರತಿದಿನ ೨೫,೦೦೦ ಕ್ವಿಂಟಾಲ್‌ಗೂ ಆಧಿಕ ಆವಕ ಆಗುತ್ತದೆ, ಆದರೆ ಇಳುವರಿ ಕಡಿಮೆಯಾಗಿರುವುದರಿಂದ ಕೇವಲ ೧೦,೫೦೦ ಕ್ವಿಂಟಾಲ್

ಕನ್ನಡಪ್ರಭ ವಾರ್ತೆ ಕೋಲಾರಹವಾಮಾನ ವೈಪರಿತ್ಯದಿಂದ ಟೊಮೆಟೋ ಇಳುವರಿ ಕಡಿಮೆಯಾಗಿದೆ. ಏಷ್ಯಾ ಖಂಡದಲ್ಲೇ ಅತಿ ದೊಡ್ಡ ಟೊಮೆಟೋ ಮಾರುಕಟ್ಟೆಯಾಗಿರುವ ಕೋಲಾರ ಎಪಿಎಂಸಿಯಲ್ಲಿ ಟೊಮೆಟೋ ಸೇರಿ ಇತರ ತರಕಾರಿ ವಹಿವಾಟು ಹೆಚ್ಚಿದೆ. ಪ್ರಸ್ತುತವಾಗಿ ಇನ್ನಿತರ ತರಕಾರಿಗಳಿಗಿಂತ ಟೊಮೆಟೋಗೆ ಬೇಡಿಕೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಸುಗ್ಗಿ ಪ್ರಾರಂಭವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಆವಕ ತೀರ ಕಡಿಮೆಯಾಗಿದೆ. ಸುಗ್ಗಿಯಲ್ಲಿ ಪ್ರತಿದಿನ ೨೫,೦೦೦ ಕ್ವಿಂಟಾಲ್‌ಗೂ ಆಧಿಕ ಆವಕ ಆಗುತ್ತದೆ, ಆದರೆ ಇಳುವರಿ ಕಡಿಮೆಯಾಗಿರುವುದರಿಂದ ಕೇವಲ ೧೦,೫೦೦ ಕ್ವಿಂಟಾಲ್ ಆವಕ ಆಗುತ್ತಿದೆ. ಇದರಿಂದಾಗಿ ೧೫ ಕೆಜಿ ಬಾಕ್ಸ್ ೪೦೦ಯಿಂದ ೭೦೦ ರೂ.ವರೆಗೆ ಮಾರಾಟವಾಗುತ್ತಿದೆ. ಟೊಮೆಟೋ ಬೆಳೆಯಲು ನೀರಿಲ್ಲ

ತೀವ್ರ ಬರದಿಂದ ಟೊಮೆಟೋ ಬೆಳೆದವರ ಸಂಖ್ಯೆ ಕಡಿಮೆಯಾಗಿದೆ. ಕೆರೆಗಳಲ್ಲಿ ನೀರು ಬತ್ತಿದ ಕಾರಣ ಕೊಳವೆ ಬಾವಿಗಳಲ್ಲೂ ಸಹ ನೀರಿನ ಪ್ರಮಾಣ ಕುಸಿದಿದ್ದರಿಂದ ಟೊಮೆಟೋ ನಾಟಿ ಮಾಡುವುದು ಕುಸಿದಿದೆ, ಬರಗಾಲದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿ ಬೆಳೆ ಸಂರಕ್ಷಣೆ ಮಾಡುವುದು ಬೆಳೆಗಾರರಿಗೆ ಸವಾಲಿನ ಕೆಲಸವಾಗಿತ್ತು. ಆಗ ನೀರಿನ ಕೊರತೆ ಇತ್ತು ಎಂಬುದು ಬಿಟ್ಟರೆ ರೋಗಗಳ ಬಾಧೆ ಅಷ್ಟೇನು ಇರಲಿಲ್ಲ.

ಆದರೆ ನೀರಿನ ಮಟ್ಟದಲ್ಲಿ ಇಳುವರಿ ಸಿಗುತ್ತಿರಲಿಲ್ಲ. ಈಗ ಜಿಲ್ಲೆಯಲ್ಲಿ ೧೦/೧೫ ದಿನಗಳಲ್ಲಿ ಹವಾಮಾನ ವೈಫರೀತ್ಯದಿಂದ ಟೊಮೆಟೋ ಬೆಳೆ ಸಂರಸುವುದು ಕಷ್ಟವಾಗುತ್ತಿದೆ. ಮೋಡ ಮುಸುಕಿನ ವಾತಾವರಣದಿಂದ ಬೆಳೆಗೆ ಅಂಗಮಾರಿ, ಎಲೆ ಮುದುಡು ರೋಗ, ಕಾಂಡ ಕೋರಕ, ನುಸಿ ರೋಗ ಬಾಧೆ ಬಾಧಿಸುತ್ತಿದೆ. ಎಷ್ಟೇ ಔಷಧ ಸಿಂಪಡಣೆ ಮಾಡಿದರೂ ರೋಗ ಹತೋಟಿಗೆ ಬರುತ್ತಿಲ್ಲ. ಲಭ್ಯವಿರುವ ಸಾಲನ್ನು ಕೊಯ್ಲು ಮಾಡಿಕೊಂಡು ಉಳಿದದ್ದನ್ನು ಹಾಗೆಯೇ ಬಿಡುವ ಪರಿಸ್ಥಿತಿ ಎದುರಾಗಿದೆ.ವಾಣಿಜ್ಯ ಬೆಳೆ ಟೊಮೆಟೋಜಿಲ್ಲೆಯಲ್ಲಿ ಒಟ್ಟು ೯೬,೮೦೫ ಹೆಕ್ಟೇರ್ ತೋಟಗಾರಿಕೆ ಪ್ರದೇಶವಿದ್ದು, ಆ ಪೈಕಿ ೪೮,೬೨೯ ಹೆಕ್ಟೇರ್ ಪ್ರದೇಶದಲ್ಲಿ ಹಣ್ಣಿನ ಬೆಳೆಗಳನ್ನು ಹಾಗೂ ೪೦,೫೭೧ ಹೆಕ್ಟೇರ್ ಪ್ರದೇಶದಲ್ಲಿ ತರಕಾರಿ ಬೆಳೆ ಬೆಳೆಯುತ್ತಾರೆ. ಜಿಲ್ಲೆಯ ಬಹುತೇಕ ರೈತರು ಟೊಮೆಟೋ ಬೆಳೆಯನ್ನು ವಾಣಿಜ್ಯ ಬೆಳೆಯನ್ನಾಗಿಸಿಕೊಂಡಿದ್ದು, ಸುಗ್ಗಿ ಹೊರತುಪಡಿಸಿ ಬೇರೆ ಸಮಯದಲ್ಲೂ ಟೊಮೆಟೋ ಬೆಳೆಯುವ ರೈತರಿದ್ದಾರೆ. ಫೆಬ್ರವರಿ, ಮಾರ್ಚ್‌ನಲ್ಲಿ ಟೊಮೆಟೋ ಸಸಿ ನಾಟಿ ಮಾಡಿದ್ದರೆ ಮೇ ತಿಂಗಳಿನಲ್ಲಿ ಫಸಲು ಕೊಯ್ಲಿಗೆ ಬರುತ್ತಿತ್ತು.

ತಾಪಮಾನ ಹೆಚ್ಚಳ, ಬೆಳೆ ಕುಸಿತ

ಬಿಸಿಲಿನ ತಾಪಮಾನ ಹೆಚ್ಚಾಗಿದ್ದ ಕಾರಣ ನಾಟಿ ಮಾಡಿದ ಸಸಿಗಳನ್ನು ರಕ್ಷಣೆ ಮಾಡಲಾಗದೆ ಬೆಳೆಗಾರರು ಕಂಗಾಲಾಗಿದ್ದ ಪರಿಣಾಮ ಆವಕ ಕಡಿಮೆಯಾಗಿದೆ. ಅಂತೆಯೇ, ಸ್ಥಿತಿವಂತ ರೈತರು ನೇಟ್ ಹೌಸ್ ಹಾಗೂ ಪಾಲಿ ಹೌಸ್‌ನಲ್ಲಿ ಬೆಳೆ ತೆಗೆದಿರುವ ರೈತರಿಗೆ ಮಾತ್ರ ಲಾಭ ಸಿಗುತ್ತಿದೆ. ಸತತವಾಗಿ ಮೋಡ ಮುಸುಕಿನ ವಾತಾವರಣ ಇರುವುದರಿಂದ ಇದು ಟೊಮೆಟೋ ಬೆಳೆಯ ಮೇಲೆ ಪರಿಣಾಮ ಬೀರುತ್ತಿದೆ. ಬಿಳಿ ನೋಣ, ಅಂಗಮಾರಿ ರೋಗ ಹರಡುವ ಲಕ್ಷಣಗಳು ಹೆಚ್ಚಾಗಿದ್ದು, ರೋಗ ನಿಯಂತ್ರಣ ಮಾಡುವುದು ರೈತರಿಗೆ ಸವಾಲಾಗಿದೆ.

ಸಿಎಂಆರ್ ಮಂಡಿ ಮಾಲೀಕ ಶ್ರೀನಾಥ್‌ ಹೇಳುವಂತೆ, ಮಾರ್ಚ್ ಹಾಗೂ ಮೇ ತಿಂಗಳಲ್ಲಿ ೧೮ರಿಂದ ೨೮ ತಾಪಮಾನ ಇದ್ದರೆ ಮಾತ್ರ ಟೊಮೆಟೋ ಬೆಳೆ ಬೆಳೆಯಲು ಸಾಧ್ಯ, ಆದರೆ ಈ ಬಾರಿ ೩೭ರಿಂದ ೩೮ ಡಿಗ್ರಿ ತಾಪಮಾನ ಜೊತೆಗೆ ನೀರಿನ ಕೊರತೆಯಿಂದ ಟೊಮೆಟೋ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ.