ಉಡುಪಿ: ಸೆಲೂನ್ ಕಾರ್ಮಿಕನ ಮೇಲೆ ತಲವಾರ್‌ನಿಂದ ಹಲ್ಲೆಗೆ ಯತ್ನ

| Published : Jun 19 2024, 01:00 AM IST

ಉಡುಪಿ: ಸೆಲೂನ್ ಕಾರ್ಮಿಕನ ಮೇಲೆ ತಲವಾರ್‌ನಿಂದ ಹಲ್ಲೆಗೆ ಯತ್ನ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರಿನ ಸೆಲೂನೊಂದರಲ್ಲಿ ಕೆಲಸ ನಿರ್ವಹಿಸಿಕೊಂಡಿರುವ ಚರಣ್‌ ಯು. (18) ಎಂಬಾತನ ಮೇಲೆ ಯುವಕರ ತಂಡವೊಂದು ಹಲ್ಲೆ ನಡೆಸಿದೆ

ಕನ್ನಡಪ್ರಭ ವಾರ್ತೆ ಉಡುಪಿ

ಕೆಲವು ದಿನಗಳ ಹಿಂದೆ ಇಲ್ಲಿನ ಕುಂಜಿಬೆಟ್ಟಿನಲ್ಲಿ ತಲವಾರು ಹಿಡಿದು ನಡೆದ ಗ್ಯಾಂಗ್‌ವಾರ್ ನೆನಪು ಮಾಸುವ ಮುನ್ನವೇ ನಗರದಲ್ಲಿ ಇನ್ನೊಂದು ತಲವಾರು ಹಲ್ಲೆ ಘಟನೆ ನಡೆದಿದೆ.

ನಗರದ ಪುತ್ತೂರಿನ ಸೆಲೂನೊಂದರಲ್ಲಿ ಕೆಲಸ ನಿರ್ವಹಿಸಿಕೊಂಡಿರುವ ಚರಣ್‌ ಯು. (18) ಎಂಬಾತನ ಮೇಲೆ ಯುವಕರ ತಂಡವೊಂದು ಹಲ್ಲೆ ನಡೆಸಿದೆ. ಜೂನ್‌ 15ರಂದು ಸಂಜೆ ಚರಣ್‌ಗೆ ಅಭಿ ಕಟಪಾಡಿ ಎಂಬಾತ ಕರೆ ಮಾಡಿ ಮಾತನಾಡಬೇಕಾಗಿದೆ. ತತ್‌ಕ್ಷಣ ಪುತ್ತೂರಿನ ಬಿರಿಯಾನಿ ಪಾಯಿಂಟ್‌ ಬಳಿ ಬಾ ಎಂದು ಹೇಳಿದ್ದ. ಅದರಂತೆ ಚರಣ್‌, ಸ್ನೇಹಿತ ಸುಜನ್‌ ಜೊತೆ ಬೈಕ್‌ನಲ್ಲಿ ಮತ್ತು ಇತರ ಮೂವರು ಗೆಳೆಯರೊಂದಿಗೆ ಸ್ಕೂಟಿಯಲ್ಲಿ ಸ್ಥಳಕ್ಕೆ ಹೋಗಿದ್ದ. ಆಗ ಅಲ್ಲಿದ್ದ ಪ್ರವೀಣ, ಅಭಿ ಕಟಪಾಡಿ, ದೇಶರಾಜ್‌, ಶಬರಿ ಮತ್ತು ಪರಿಚಯವಿಲ್ಲದ ಇನ್ನಿಬ್ಬರು ಚರಣ್‌ ಮತ್ತು ಆತನ ಗೆಳೆಯರ ಮೇಲೆ ತಲವಾರು ಬೀಸಿದ್ದಾರೆ. ಚರಣ್ ಮತ್ತು ಗೆಳೆಯರು ಬೈಕ್‌ ಮತ್ತು ಸ್ಕೂಟಿಯನ್ನು ಅಲ್ಲಿಯೇ ಬಿಟ್ಟು ಓಡುವಾಗ ಬಿಯರ್‌ ಬಾಟಲಿಗಳನ್ನು ಬಿಸಾಡಿದ್ದಾರೆ. ಅವರ ದ್ವಿಚಕ್ರ ವಾಹನಗಳಿಗೆ ಹಾನಿಗೊಳಿಸಿದ್ದಾರೆ.ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಕಟಪಾಡಿಯ ಅಭಿ ಯಾನೆ ಅಭಿಷೇಕ್ (28), ಬಡಗುಬೆಟ್ಟು ಗ್ರಾಮದ ಪ್ರವೀಣ್ (22), ಪುತ್ತೂರಿನ ದೇಶರಾಜ್ (18) ಎಂಬವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಹಲ್ಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.