ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಶಿಖರದಂತಿರುವ ತಲೆಗೆ ಎಣ್ಣೆ ಹಾಕಿದರೆ ನಿಖರವಾದ ಬುದ್ಧಿ. ಶಿಖರದ ಕೆಳಗಿನ ಹೊಟ್ಟೆಗೆ ಎಣ್ಣೆ ಹಾಕಿದರೆ ಯಕರಮಕರ ಬುದ್ಧಿ ಬರುತ್ತದೆ ಎಂದು ಜಾನಪದ ಸಾಹಿತಿ ಯುಗಧರ್ಮ ರಾಮಣ್ಣ ಹೇಳಿದರು. ಇಲ್ಲಿಗೆ ಸಮೀಪದ ಮೈದೊಳಲಿನಲ್ಲಿ ದೊಣ್ಣೆ ಕೆಂಚಮ್ಮ ಜಾತ್ರೋತ್ಸವ ಪ್ರಯುಕ್ತ ಹಮ್ಮಿಕೊಂಡಿದ ಜಾನಪದ ಸಿರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಮ್ಮನು ನಾವು ಪರಿವರ್ತನೆ ಮಾಡಿಕೊಳ್ಳುವ ಉದ್ದೇಶದಿಂದ ಹಿರಿಕರು ಹಬ್ಬ, ಜಾತ್ರಾ ಮಹೋತ್ಸವಗಳ ಆಚರಣೆಗಳನ್ನು ಮುನ್ನಲೆಗೆ ತಂದರು. ದೇಹವೆಂಬ ಬಾಡಿಗೆ ಮನೆಯೊಳಗೆ ದೇವರು ನೆಲೆಯಾಗಬೇಕು. ಹಳ್ಳಿಗಳಲ್ಲಿ ಗ್ರಾಮೀಣ ಸೊಗಡಿನ ಸಂಸ್ಕಾರ, ಸಂಸ್ಕೃತಿಗಳು ಮಾಯವಾಗುತ್ತಿವೆ. ಮಾನವ ನೀತಿ ನಿಯಮಗಳನ್ನು ಮರೆತು ಜೀವನ ನಡೆಸಬಾರದು ಎಂದರು.
ಆಧುನಿಕತೆಯ ಭರಾಟೆಗೆ ಸಿಲುಕಿರುವ ಹೆಣ್ಣುಮಕ್ಕಳಿಗೆ ಅಡುಗೆಯ ಸಾಮಾನ್ಯ ಜ್ಞಾನವು ಇಲ್ಲವಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಮಸ್ತಕದಲ್ಲಿ ಪರಿಪೂರ್ಣ ಮಾಹಿತಿ ಇದ್ದರೆ ನೂರೊಂದು ಪುಸ್ತಕ ಬರೆಯಬಹುದು. ಮಸ್ತಕ ಭಂಡಾರಕ್ಕಿಂತ ಯಾವುದು ದೊಡ್ಡದಿಲ್ಲ. ಒಂದು ಪಾಕೇಟ್ ಸೇವಿಸಿ ಯದ್ವಾತದ್ವಾ ಮಾತಾಡಿದರೇನು ಬಂತು ಫಲ? ಬೀಜವೃಕ್ಷ ನ್ಯಾಯ ಎಲ್ಲರ ಅರಿವಿಗೂ ಬರಬೇಕು. ಮಾನವ ಜೀವಿಗೆ ಪರಮಾತ್ಮ ಅಜ್ಞಾನ, ವಿಜ್ಞಾನ, ಸುಜ್ಞಾನ, ಮಹಾಜ್ಞಾನ, ದಿವ್ಯಜ್ಞಾನ, ಬ್ರಹ್ಮಜ್ಞಾನ 6 ಜ್ಞಾನಗಳನ್ನು ಕರುಣಿಸಿದ್ದಾನೆ. ನಾಯಿ ಸೇವಾ ಜ್ಞಾನಿಯಾದರೆ, ಇರುವೆ ಅರಿವಿನ ಜ್ಞಾನಿಯಾಗಿದೆ. ಸಕಲ ಜ್ಞಾನವನ್ನು ಅರಿತಿರುವ ಮಾನವ ಅಜ್ಞಾನಿ ಆಗುತ್ತಿದ್ದಾನೆ ಎಂದರು.ಭೂವಿಯ ಮೇಲೆ ಮನುಷ್ಯ ಜನ್ಮ ಅಪರೂಪದ್ದು. ಎಲ್ಲರ ಮನೆ ದೋಸೇನೂ ತೂತು. ಆದರೆ, ಕೆಲವರ ಮನೆಗಳಲ್ಲಿ ದೋಸೆ ಹಾಕುವ ಕಾವಲಿಗಳೇ ತೂತಾಗಿರುತ್ತವೆ. ಮಾನವ ರಾಕ್ಷಸ ಗುಣಗಳನ್ನು ಕಳೆದುಕೊಂಡು ಸುಜ್ಞಾನ ಪಡೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತರಾಗಬೇಕಿದೆ. ಹಣೆಯ ಮೇಲೆ ನಾಮ ಹಾಕುವುದು ಯಾಕೆಂದು ಹಾಕುವವನಿಗೂ ತಿಳಿದಿಲ್ಲ, ಹಾಕಿಸಿಕೊಳ್ಳುವನಿಗೂ ತಿಳಿದಿಲ್ಲ. ಆದರೂ ನಾಮ ಹಾಕಿಸಿಕೊಳ್ಳುವುದನ್ನು ಮಾತ್ರ ಬಿಟ್ಟಿಲ್ಲ ಎಂದರು.
ಮಾನವ ಜ್ಞಾನೇಂದ್ರಿಯಗಳ ಮೇಲೆ ಹಿಡಿತ ಸಾಧಿಸಬೇಕು. ಜೀರ್ಣಾಂಗ ವ್ಯವಸ್ಥೆಯಲ್ಲಿ ಒಂದು ಅಂಗ ರಜೆ ಹಾಕಿದರೆ ದೇಹದ ಪರಿಸ್ಥಿತಿ ಕೆಡುತ್ತದೆ. ಮಾತುಗಳು ಎಲ್ಲೆ ಮೀರಿದರೆ ನಮ್ಮ ನಾಲಗೆಯೇ ನಮ್ಮ ಪಾಲಿನ ಪರಮವೈರಿಯಾಗಿ ಕಾಡುತ್ತದೆ. ಮೂಗು ಮಾಡಿದವನು ಸೋತು ಮೂಗುತಿ ಮಾಡಿದವನು ಗೆಲ್ಲುವುದು ಯಾವ ನ್ಯಾಯ ಎಂದರು.ಗ್ರಾಮ ಸಮಿತಿ ಅಧ್ಯಕ್ಷ ಚಂದ್ರಪ್ಪ, ಹಾಸ್ಯಕವಿ ಜಗನ್ನಾಥ ಶಾಸ್ತ್ರಿ, ಸಂಗೀತಗಾರ ಜಯಪ್ಪ, ಪ್ರಮುಖರಾದ ಸಾರ್ಥೀ ರಾಜಪ್ಪ, ಭಜನೆ ಸಂಗಡಿಗರಾದ ಆಂಜನೇಯ, ಚನ್ನಕೇಶವ, ಗಣೇಶ್ ಇತರರಿದ್ದರು.
- - - -06ಎಚ್‍ಎಚ್‍ಆರ್ ಪಿ06:ಹೊಳೆಹೊನ್ನೂರು ಸಮೀಪದ ಮೈದೊಳಲಿನಲ್ಲಿ ದೊಣ್ಣೆ ಕೆಂಚಮ್ಮ ಜಾತ್ರೆ ಮಹೋತ್ಸವದಲ್ಲಿ ಜಾನಪದ ಸಿರಿ ಕಾರ್ಯಕ್ರಮದಲ್ಲಿ ಜಾನಪದ ಸಾಹಿತಿ ಯುಗಧರ್ಮ ರಾಮಣ್ಣ ಮಾತನಾಡಿದರು. ಹಾಸ್ಯಕವಿ ಜಗನ್ನಾಥ ಶಾಸ್ತ್ರಿ, ಜಯಪ್ಪ ಇತರರಿದ್ದರು.