ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸಿ, ಇಲ್ಲ ಉಪವಾಸ ಸತ್ಯಾಗ್ರಹ ಎದುರಿಸಿ

| Published : Feb 07 2024, 01:47 AM IST

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸಿ, ಇಲ್ಲ ಉಪವಾಸ ಸತ್ಯಾಗ್ರಹ ಎದುರಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಬಜೆಟ್‌ ದಿನ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿಸಲೇಬೇಕು. ಮಾಡಿಸಿಲ್ಲ ಅಂದರೆ ಜಿಲ್ಲೆಯ ನೂರಾರು ಯುವಕರ ಜತೆ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಯಲಿದೆ.

ಹೊನ್ನಾವರ:

ಬಜೆಟ್‌ ದಿನ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿಸಲೇಬೇಕು. ಮಾಡಿಸಿಲ್ಲ ಅಂದರೆ ಜಿಲ್ಲೆಯ ನೂರಾರು ಯುವಕರ ಜತೆ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ

ಎಚ್ಚರಿಸಿದರು.

ಸುಸಜ್ಜಿತ ಆಸ್ಪತ್ರೆಗಾಗಿ ಕುಮಟಾದಿಂದ ಭಟ್ಕಳ ವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆ ನಗರಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದರು.ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲದೆ ರೋಗಿಯನ್ನು ಚಿಕಿತ್ಸೆಗೆ ಮಂಗಳೂರು, ಉಡುಪಿ ವರೆಗೆ ಕರೆದುಕೊಂಡು ಹೋಗುವಾಗಲೇ ಮಾರ್ಗಮಧ್ಯೆ ಸಾವನ್ನಪ್ಪುತ್ತಿದ್ದಾರೆ. ಜಿಲ್ಲೆಯಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ಇದ್ದಿದ್ದರೆ ಅವರೆಲ್ಲ ಬದುಕುತ್ತಿದ್ದರು ಎಂದರು.ನಮ್ಮ ಜಿಲ್ಲೆ ಸೀಬರ್ಡ್, ಜಲಾಶಯ ಸೇರಿದಂತೆ ಅನೇಕ ಯೋಜನೆಗಳಿಗೆ ಜಾಗ ನೀಡಿದೆ. ಇಷ್ಟು ತ್ಯಾಗ ಮಾಡಿದರು ಕೂಡ ಇಂದು ಹಳ್ಳಿಗಳ ಕಡೆ ಲೋಡ್ ಶೆಡ್ಡಿಂಗ್ ಇದೆ. ಯುವಕರಿಗೆ ಉದ್ಯೋಗದ ಸಮಸ್ಯೆ ಇದೆ. ಈ ಹಿಂದೆ ಕುಮಟಾದಲ್ಲಿ ಮಂಜೂರಿ ಆದಂತಹ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ತಕ್ಷಣ ಹಣ ಬಿಡುಗಡೆ ಮಾಡಬೇಕು. 40 ಎಕರೆ ಜಾಗದಲ್ಲಿ ಕೈಗಾರಿಕಾ ಕೇಂದ್ರ ನಿರ್ಮಿಸಬೇಕು. ಈ ಮೂಲಕ ಉದ್ಯೋಗ ಸೃಷ್ಟಿಸಬೇಕು ಎಂದು ಒತ್ತಾಯಿಸಿದರು.ಬಜೆಟ್‌ನಲ್ಲಿ ಸಚಿವರು ಆಸ್ಪತ್ರೆಗೆ ಹಣ ಬಿಡುಗಡೆ ಮಾಡಿಸಲೇಬೇಕು. ಮಾಡಿಸಿಲ್ಲ ಅಂದರೆ ಅವರ ಮನೆ ಅಥವಾ ಕಚೇರಿ ಮುಂದೆ ಜಿಲ್ಲೆಯ ನೂರಾರು ಯುವಕರ ಜತೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡಲಿದ್ದೇವೆ. ನಮ್ಮ ಜಿಲ್ಲೆಯ ಅಭಿವೃದ್ಧಿಗಾಗಿ ನಾವು ಸಿದ್ಧವಾಗಿದ್ದೇವೆ. ಸ್ವಾಭಿಮಾನಕ್ಕೆ ಪೆಟ್ಟು ಕೊಡಲು ಹೋಗಬೇಡಿ. ಸ್ವಾಭಿಮಾನಕ್ಕೆ ತೊಂದರೆಯಾದ ಮನುಷ್ಯ ಸಿಡಿದೇಳುತ್ತಾನೆ. ಪ್ರತಿಭಟನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಾವು ಯಾವ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂದರು.ನಿಮ್ಮ ಹೋರಾಟಕ್ಕೆ ಪಕ್ಷಾತೀತವಾಗಿ ಪ್ರತಿಕ್ರಿಯೆ ಸಿಗುತ್ತಿದೆಯೆ? ಎಂಬ ಪ್ರಶ್ನೆಗೆ, ಅಭೂತಪೂರ್ವ ಪ್ರತಿಕ್ರಿಯೆ ಇದೆ. ಜಿಲ್ಲೆ ಜನರಿಗೆ ಒಂದು ಹೊಸ ಆಶಾಭಾವ ಉಂಟಾಗಿದೆ ಎಂದರು.ಹಿಂದೂತ್ವದ ಜತೆಗೆ ಅಭಿವೃದ್ಧಿಯು ಬೇಕು. ಒಂದು ವೇಳೆ ಬಿಜೆಪಿಯಿಂದ ಟಿಕೆಟ್ ಸಿಕ್ಕಿದರೆ ಖಂಡಿತ ಸ್ಪರ್ಧಿಸುವೆ. ಇಲ್ಲವೆಂದರೆ ಕಮಲದ ಹೂವೆ ನಮ್ಮ ಅಭ್ಯರ್ಥಿ. ಯಾರಿಗೆ ಟಿಕೆಟ್ ಕೊಟ್ಟರು ಕೂಡ ಅವರ ಪರವಾಗಿ ಕೆಲಸ ಮಾಡುತ್ತೇನೆ. ನಮ್ಮ ಉದ್ದೇಶ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಬಿಜೆಪಿ ಸರ್ಕಾರ ಬರಬೇಕು ಎನ್ನುವುದಾಗಿದೆ ಎಂದರು.ಅನಂತಮೂರ್ತಿ ಅವರ‌ ಹೋರಾಟ, ಯೋಚನೆ, ಯೋಜನೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಮುಂದಿನ ದಿನಗಳಲ್ಲಿ ಇದು ರಾಜಕೀಯ ಲಾಭಕ್ಕೋ ಅಥವಾ ನೈಜ ಜನಪರ‌ ಕಾಳಜಿಯೋ ಎನ್ನುವುದು ನಿರ್ಧಾರವಾಗಲಿದೆ ಎನ್ನುವ ಮಾತುಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.