ಸಾರಾಂಶ
- ಜಗದೀಶ್ವರ ಶ್ರೀ ನೇತೃತ್ವದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಶ್ರೀಶೈಲ ಪೀಠದ ಚನ್ನಸಿದ್ದರಾಮ ಶ್ರೀ ನುಡಿ
- - - ಕನ್ನಡಪ್ರಭ ವಾರ್ತೆ ಹರಿಹರ ಉತ್ತರ ಭಾರತದ ಗಂಗಾರತಿ ಆಚರಣೆಯಂತೆ ದಕ್ಷಿಣ ಭಾರತದಲ್ಲಿ ತುಂಗಭದ್ರಾರತಿ ಪರಿಕಲ್ಪನೆ ಜಾರಿಗೊಳಿಸಿದ ಕೀರ್ತಿ ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಶ್ರೀ ಅವರಿಗೆ ಸಲ್ಲುತ್ತದೆ ಎಂದು ಶ್ರೀಶೈಲ ಪೀಠದ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ ನುಡಿದರು.ಹರಿಹರ ಸಮೀಪದ ಕೋಡಿಯಾಲ ಹೊಸಪೇಟೆಯ ತುಂಗಭದ್ರಾ ನದಿ ದಡದಲ್ಲಿರುವ ಅವಿಮುಕ್ತ ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಶ್ರೀ ಹಮ್ಮಿಕೊಂಡಿದ್ದ ತುಂಗಭದ್ರಾರತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಧಾರ್ಮಿಕ ವಿಧಿವಿಧಾನಗಳ ನೆರವೇರಿಸುವಲ್ಲಿ, ಧಾರ್ಮಿಕ ಕಲಾಪಗಳಿಗೆ ಭವ್ಯತೆ ತಂದು ಕೊಡುವುದರಲ್ಲಿ ಉತ್ತರ ಭಾರತದವರಿಗಿಂತ ನಾವು ಕಡಿಮೆ ಇಲ್ಲ ಎಂಬುದನ್ನು ತುಂಗಭದ್ರಾ ನದಿಗೆ ಶ್ರೀ ತುಂಗಭದ್ರಾರತಿ ಆಚರಣೆ ಮಾಡುವ ಮೂಲಕ ಶ್ರೀಗಳು ನಿರೂಪಿಸಿದ್ದಾರೆ ಎಂದರು.ನದಿಗೆ ಆರತಿ ಹಿಂದಿನ ಉದ್ದೇಶ ನೀರಿನ ಪಾವಿತ್ರ್ಯತೆ ಕಾಪಾಡುವುದು, ಮುಂದಿನ ಪೀಳಿಗೆ ನದಿ ಅಪವಿತ್ರಗೊಳಿಸಬಾರದು ಎಂಬುದೇ ಕಾಳಜಿ. ಸರ್ಕಾರಗಳು ನದಿಗಳ ಪಾವಿತ್ರ್ಯತೆ ಕಾಪಾಡಲು ಅಗತ್ಯ ಕಾನೂನು ರೂಪಿಸಿ, ಕಟ್ಟುನಿಟ್ಟಾಗಿ ಪರಿಪಾಲನೆ ಮಾಡಬೇಕು. ಬೇಸಿಗೆಯಲ್ಲಿ ನದಿ ನೀರು ಬತ್ತಿದಾಗ ನೀರಿರಲಿ ಎಂದು ಡ್ಯಾಮ್ ನಿರ್ಮಿಸಿದ್ದಾರೆ. ಜಲಮೂಲ ಉಳಿಸಲು ನದಿ ದಡದಲ್ಲಿ ಗಿಡಗಳನ್ನು ನೆಡುವ ಕಾರ್ಯ ಆಗಬೇಕು ಎಂದು ಸಲಹೆ ನೀಡಿದರು.
ಕಾರ್ಖಾನೆಗಳು ಮತ್ತು ನಗರಗಳ ಕಲುಷಿತ ನೀರನ್ನು ನೇರವಾಗಿ ನದಿಗೆ ಬಿಡದೇ ಆ ನೀರನ್ನು ಶುದ್ಧೀಕರಣಗೊಳಿಸಿ ನದಿಗೆ ಹರಿಸಬೇಕು. ಆಗ ನದಿಗಳ ಪಾವಿತ್ರ್ಯತೆ ಕಾಪಾಡಲು ಸಾಧ್ಯ. ಇಂತಹ ತಿಳಿವಳಿಕೆಗಳನ್ನೇ ನೀಡಲು ಗಂಗಾರಾತಿ ಮತ್ತು ತುಂಗಭದ್ರಾರತಿ ಮಾಡಲಾಗುತ್ತದೆ ಎಂದರು.ಬಾಲಯೋಗಿ ಜಗದೀಶ್ವರ ಶ್ರೀ ಪ್ರಾಸ್ತಾವಿಕವಾಗಿ ಮಾತನಾಡಿ, ಪುಣ್ಯಕೋಟಿ ಮಠಕ್ಕೆ ಭಕ್ತರೇ ಆಸ್ತಿ. ಅವರ ಆಶಯದಂತೆ ತುಂಗಾರಾತಿ ಎಂದಿದ್ದುದನ್ನು ತುಂಗಭದ್ರಾರತಿ ಎಂಬುದಾಗಿ ಬದಲಿಸಿ, ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಉಪ ಸಭಾಪತಿ ರುದ್ರಪ್ಪ ಲಮಾಣಿ ಮಾತನಾಡಿ, ಜಗದೀಶ್ವರ ಶ್ರೀ ಅವರ ಪಟ್ಟಾಧಿಕಾರ ಮಹೋತ್ಸವ ನನೆಗುದಿಗೆ ಬಿದ್ದಿದೆ. ಶೀಘ್ರದಲ್ಲಿ ರಂಭಾಪುರಿ ಶ್ರೀ ಮತ್ತು ಶ್ರೀಶೈಲ ಶ್ರೀ ಸಾನ್ನಿಧ್ಯದಲ್ಲಿ ಪಟ್ಟಾಧಿಕಾರ ನಡೆಯಲಿದೆ ಎಂದರು.ಶಾಸಕ ಪ್ರಕಾಶ್ ಕೋಳಿವಾಡ ಮಾತನಾಡಿ, ಪರಿಸರ ಮತ್ತು ನದಿಗಳನ್ನು ಸಂರಕ್ಷಣೆ ಮಾಡದೇ ಹೋದರೆ, ಮುಂದೊಂದು ದಿನ ತುಂಬಾ ಆಪತ್ತನ್ನು ಮನುಷ್ಯ ಅನುಭವಿಸಬೇಕಾಗುತ್ತದೆ. ಜೀವಜಲ ರಕ್ಷಣೆಗೆ ತುಂಗಭದ್ರಾರತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಮಾಜಮುಖಿ ಕಾರ್ಯವಾಗಿದೆ ಎಂದರು.
ಸವಣೂರು ದೊಡ್ಡ ಹುಣಸೇಕಲ್ಮಠದ ಚನ್ನಬಸವ ಶ್ರೀ, ವಿಜಯಪುರ ಸಿದ್ದಲಿಂಗೇಶ್ವರ ಮಠದ ಸಿದ್ದಲಿಂಗ ಶ್ರೀ, ನಾವಂದ ಶಿವಯೋಗಿ ಶಿವಾನಂದ ಶಿವಾಚಾರ್ಯ ಶ್ರೀ ಸಾನ್ನಿಧ್ಯ ವಹಿಸಿದ್ದರು.ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐರಣಿ ಅಣ್ಣೇಶ್, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಸಿಂಡಿಕೇಟ್ ಮಾಜಿ ಸದಸ್ಯ ಕೆ.ಎನ್. ಪಾಟೀಲ್, ಎಚ್.ವಿಶ್ವನಾಥ್, ವಾಣಿ ಬಕ್ಕೇಶ್, ಶಶಿಕುಮಾರ್ ಮೆಹರ್ವಾಡೆ, ಚೇತನ್, ಎಂ.ಕರಿಯಪ್ಪ, ಹಿರೇಮಠ ಕುಮಾರಸ್ವಾಮಿ. ರವೀಂದ್ರ ಪಾಟೀಲ್ ಇತರರಿದ್ದರು.
- - -ಕೋಟ್ ಮಾಜಿ ಶಾಸಕ ಅರುಣಕುಮಾರ್ ಮಾತನಾಡಿ. ಶ್ರೀಮಠದ ಭಕ್ತರಾಗಿರುವ ರುದ್ರಪ್ಪ ಲಮಾಣಿ ಅವರು ಮುಂದೆ ಸಚಿವರಾಗಿ ಶ್ರೀಮಠಕ್ಕೆ ₹5 ಕೋಟಿ ಅನುದಾನ ನೀಡಲಿ. ಯಡಿಯೂರಪ್ಪನವರು ರಾಜ್ಯದ ಮಠಗಳಿಗೆ ಅನುದಾನ ಆಯಾ ಸಮುದಾಯದ ಶೈಕ್ಷಣಿಕ ಮತ್ತು ಸಾಮಾಜಿಕ ಧಾರ್ಮಿಕ ಅಭಿವೃದ್ಧಿಗೆ ಹೆಚ್ಚು ಒತ್ತುಕೊಟ್ಟವರು
- ಅರುಣಕುಮಾರ, ಮಾಜಿ ಶಾಸಕ- - - -16ಎಚ್‍ಆರ್‍ಆರ್03-3ಎ:
ತುಂಗಭದ್ರಾರತಿ ಕಾರ್ಯಕ್ರಮವನ್ನು ಶ್ರೀಶೈಲ ಪೀಠದ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ ಉದ್ಘಾಟಿಸಿದರು.