ಸಾರಾಂಶ
ಗಾಯತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಹಮ್ಮಿಕೊಂಡಿದ್ದ ರಜತ ಸಂಭ್ರಮ
ಕನ್ನಡಪ್ರಭ ವಾರ್ತೆ, ಕೊಪ್ಪಸೌಹಾರ್ದ ಸಂಸ್ಥೆ ಅಭಿವೃದ್ಧಿಯಲ್ಲಿ ನಾವೀನ್ಯತೆ, ಪಾರದರ್ಶಕತೆ ಪ್ರಮುಖ ಅಂಶಗಳಾಗಿವೆ. ಸೌಹಾರ್ದ ಸಂಸ್ಥೆ ಪ್ರಗತಿಗೆ ಪಾರದರ್ಶಕತೆ ಅಗತ್ಯವಾಗಿದೆ ಎಂದು ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ಡಾ. ತೇಜಸ್ವಿನಿ ಅನಂತಕುಮಾರ್ ಹೇಳಿದರು.ಪಟ್ಟಣದ ಗಾಯತ್ರಿ ಸಾಂಸ್ಕೃತಿಕ ಭವನದಲ್ಲಿ ಗಾಯತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಹಮ್ಮಿಕೊಂಡಿದ್ದ ರಜತ ಸಂಭ್ರಮ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು ಸೌಹಾರ್ದ ಸಂಸ್ಥೆ ಬೆಳೆಯಲು ಅದರ ಆರ್ಥಿಕ ಸುಸ್ಥಿತಿಯನ್ನು ಸಮಾಜದ ಮುಂದೆ ಪ್ರಸ್ತುತಪಡಿಸಬೇಕು ಎಂದರು. ಪ್ಲೇಟ್ ಬ್ಯಾಂಕ್ ಪರಿಸರ ಸ್ನೇಹಿ ಯೋಜನೆಯಾಗಿದೆ. ಕಾಗದ ಮತ್ತು ಇತರೆ ಪ್ಲಾಸ್ಟಿಕ್ ಪ್ಲೇಟ್ ಬಳಸುವ ಬದಲಿಗೆ ಸ್ಟೀಲ್ ಲೋಟ, ತಟ್ಟೆ ಬಳಸ ಬಹುದಾಗಿದೆ. ಇದರಿಂದ ಪ್ಲಾಸ್ಟಿಕ್ ಕಸ ಕಡಿಮೆಯಾಗುತ್ತದೆ. ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ಎರಡರ ನಡುವೆ ಸಮತೋಲನ ಸಾಧಿಸುವ ಕಾರ್ಯವೇ ಪ್ಲೇಟ್ ಬ್ಯಾಂಕ್ ಯೋಜನೆ ಎಂದರು. ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಅಧ್ಯಕ್ಷ ನಂಜನಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ದಿಕ್ಕು ತಪ್ಪಿಸುವ ಅನೇಕ ಅವಕಾಶಗಳಿವೆ. ಹಣದ ಜವಾಬ್ದಾರಿ ಸಿಕ್ಕಾಗ ಅದನ್ನು ದುರುಪಯೋಗಪಡಿಸಿ ಕೊಂಡವರೂ ಇದ್ದಾರೆ. ಆದರೆ, ಇಲ್ಲಿನ ಸಂಘದಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಿರುವುದರಿಂದ ಸೌಹಾರ್ದ ಸಂಘದ ಅಭಿವೃದ್ಧಿಗೆ ಕಾರಣವಾಗಿದೆ ಎನ್ನಬಹುದು. ಗ್ರಾಮೀಣ ಭಾಗದ ಜನರನ್ನು ಸಾಲಗಾರರ ಕಾಟದಿಂದ ತಪ್ಪಿಸಲು ಸಹಕಾರಿ ವ್ಯವಸ್ಥೆ ಹುಟ್ಟಿಕೊಂಡಿತು. ಇತ್ತೀಚೆಗೆ ಸದ್ದು ಮಾಡುತ್ತಿರುವ ಮೈಕ್ರೋ ಫೈನಾನ್ಸ್ ಬಗ್ಗೆ ಸರಕಾರದ ಬಳಿ ಯಾವುದೇ ನಿರ್ದಿಷ್ಟ ವ್ಯಾಖ್ಯಾನವಿಲ್ಲ. ಸುಗ್ರೀವಾಜ್ಞೆ ಸೂಕ್ತ ವ್ಯಾಖ್ಯಾನ ನೀಡದಿದ್ದಲ್ಲಿ ಸಹಕಾರಿ ವ್ಯವಸ್ಥೆ ಉಳಿವು ಕಷ್ಟಕರವಾಗಲಿದೆ. ಅದರ ವಿರುದ್ಧ ಸಂಯುಕ್ತ ಸಹಕಾರಿ ಕಾನೂನು ಹೋರಾಟ ಮಾಡಲಿದೆ ಎಂದರು.ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು, ಸಂಸ್ಥೆಯಲ್ಲಿ ಕೆಲಸ ಮಾಡಿರುವ ಸಿಬ್ಬಂದಿಯನ್ನು ಗೌರವಿಸಲಾಯಿತು. ಸಂಸ್ಥೆ ಅಧ್ಯಕ್ಷೆ ಕೆ.ಸಿ. ಮಂಗಳಾ, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಉಪಾಧ್ಯಕ್ಷ ಎ. ಆರ್. ಪ್ರಸನ್ನಕುಮಾರ್, ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ವೈ. ಎಸ್.ಸುಬ್ರಹ್ಮಣ್ಯ, ಲೆಕ್ಕ ಪರಿಶೋಧಕ ಬಿ.ವಿ.ರವೀಂದ್ರನಾಥ್, ವಕೀಲ ನವೀನ್ ರಾವ್ ಮುಂತಾದವರು ಮಾತನಾಡಿದರು.
ಸಂಸ್ಥೆಯ ಉಪಾಧ್ಯಕ್ಷ ದಿವಾಕರ್, ಸಂಸ್ಥೆಯ ನಿರ್ದೇಶಕರು, ಷೇರುದಾರರು ಕಾರ್ಯಕ್ರಮದಲ್ಲಿ ಹಾಜರಿದ್ದರು.