ಗುರುಗಳ ಆಶಯ ಈಡೇರಿಸುವುದೆ ಸ್ಮರಣಿಕೆ

| Published : Nov 13 2025, 12:15 AM IST

ಸಾರಾಂಶ

ಹೊಸಕೋಟೆ: ದೇಶಕ್ಕೆ ಉತ್ತಮ ಪ್ರಜೆಗಳಾಗಿ ತಾವು ಕಲಿತ ಶಾಲೆಗೆ ಕೊಡುಗೆ ನೀಡಿ ಗುರುಗಳ ಆಶಯ ಈಡೇರಿಸುವುದೆ ಗುರುಗಳಿಗೆ ನೀಡುವ ಸ್ಮರಣೀಯ ಕಾಣಿಕೆ ಎಂದು ನಿವೃತ್ತ ಶಿಕ್ಷಕ ಮುನಿನಂಜಪ್ಪ ತಿಳಿಸಿದರು.

ಹೊಸಕೋಟೆ: ದೇಶಕ್ಕೆ ಉತ್ತಮ ಪ್ರಜೆಗಳಾಗಿ ತಾವು ಕಲಿತ ಶಾಲೆಗೆ ಕೊಡುಗೆ ನೀಡಿ ಗುರುಗಳ ಆಶಯ ಈಡೇರಿಸುವುದೆ ಗುರುಗಳಿಗೆ ನೀಡುವ ಸ್ಮರಣೀಯ ಕಾಣಿಕೆ ಎಂದು ನಿವೃತ್ತ ಶಿಕ್ಷಕ ಮುನಿನಂಜಪ್ಪ ತಿಳಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಸರ್ಕಾರಿ ಮಾದರಿ ಶಾಲೆಯಲ್ಲಿ 1993-95ರವರೆಗೆ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಂದ 22 ಗುರುಗಳಿಗೆ ಮತ್ತು ಪ್ರಸ್ತುತ ಶಾಲೆಯ 10 ಗುರುಗಳಿಗೆ ಹಮ್ಮಿಕೊಂಡಿದ್ದ ಗುರುವಂದನೆ ಮತ್ತು 150 ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದವರ ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಕ್ಷಣವೆಂದರೆ ಕೇವಲ ಅಕ್ಷರ ಜ್ಞಾನವಲ್ಲ, ಉನ್ನತ ಹುದ್ದೆ, ಹಣ ಗಳಿಸಿ ಮನೆ ಕಟ್ಟಿ ವಾಹನಗಳನ್ನು ಖರೀದಿಸುವುದಲ್ಲ, ಬದಲಿಗೆ ನಮ್ಮ ಬಳಿ ಕಲಿತ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರುವುದರ ಜೊತೆಗೆ, ಸಂಸ್ಕಾರ ಸನ್ನಡತೆಯಿಂದಿದ್ದು ತಾವು ಕಲಿತ ಶಾಲೆಗೆ ಕೊಡುಗೆ ನೀಡಿ ತಂದೆ ತಾಯಿಗಳಿಗೆ ಗುರುಹಿರಿಯರಿಗೆ ಗೌರವ ನೀಡಿ ದೇಶ ಭಕ್ತರಾಗಿ ಉತ್ತಮ ಪ್ರಜೆಯಾಗಿ ರೂಪುಗೊಂಡರೆ ಗುರುಗಳ ಬದುಕು ಸಾರ್ಥಕ. ಆ ನಿಟ್ಟಿನಲ್ಲಿ ಜಿಕೆಬಿಎಂಎಸ್ ಶಾಲೆಯಲ್ಲಿ ನಮ್ಮ ಬಳಿ ಕಲಿತ 1993, 94, 95ನೇ ಸಾಲಿನ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೇರಿದ್ದು ಇಂದು ಎಲ್ಲರನ್ನೂ ಒಗ್ಗೂಡಿಸಿ ಇಂತಹ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡು ನಮ್ಮನ್ನು ಗೌರವಿಸಿರುವ ಈ ಸಮಾರಂಭಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.

ಹಳೆಯ ವಿದ್ಯಾರ್ಥಿ ರಾಜಗೋಪಾಲ್ ಮಾತನಾಡಿ, ನಮ್ಮ ಗುರುಗಳು ನಮಗೆ ಕಲಿಸಿದ ವಿದ್ಯೆ ಮತ್ತು ತಿದ್ದುವಿಕೆಯಿಂದ ನಾವು ಸಮಾಜದಲ್ಲಿ ಉನ್ನತ ಸ್ಥಾನ ಪಡೆದಿದ್ದು ಅವರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಕಳೆದ ಒಂದು ವರ್ಷಗಳ ನಿರಂತರ ಪ್ರಯತ್ನದಿಂದ ಎಲ್ಲಾ ಸ್ನೇಹಿತರನ್ನು ಒಗ್ಗೂಡಿಸಿ ಶಿಕ್ಷಕರ ವಿಳಾಸ ಪಡೆದು ಅವರನ್ನು ಸಂಪರ್ಕಿಸಿ ನಮಗೆ ಕಲಿಸಿದ ಗುರುಗಳ ಋಣ ತೀರಿಸಲು ಕೃತಜ್ಞತೆ ಸಲ್ಲಿಸುವ ವೇದಿಕೆಯೇ ಗುರುವಂದೆನೆ. ಸಹಕರಿಸಿದ ಎಲ್ಲಾ ಮಿತ್ರರಿಗೂ ಧನ್ಯವಾದ ತಿಳಿಸುವ ಜೊತೆಗೆ ನಮ್ಮನ್ನಗಲಿರುವ ಗುರುಗಳು ಹಾಗೂ ಮಿತ್ರರ ಆತ್ಮಕ್ಕೆ ಶಾಂತಿ ಕೋರಲಾಗಿದ್ದು ತಾವು ಕಲಿತ ಶಾಲೆಗೆ ನೀರಿನ ಬಳಕೆಗಾಗಿ 2 ಟ್ಯಾಂಕ್ ಕೊಡಿಸಲು ತೀರ್ಮಾನಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳಾದ ವಿ.ಕುಮಾರ, ಕೇಶವರಾವ್ ಮೂರ್ತಿ, ಶ್ರೀಧರ್, ಸಂತೋಷ್ ಕುಮಾರ್, ಧನು, ಶಶಿ, ಸೀನ, ರಾಜಶೇಖರ್ ಗೌಡ, ಹರೀಶ್, ಕಾಲಿ ಮಂಜು, ದೇವರಾಜ್‌ ಇತರರು ಭಾಗವಹಿಸಿದ್ದರು.

ಫೋಟೋ: 12 ಹೆಚ್‌ಎಸ್‌ಕೆ 2

ಹೊಸಕೋಟೆ ಸರ್ಕಾರಿ ಕನ್ನಡ ಮಾದರಿ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನೆ ಮತ್ತು ಸ್ನೇಹಸಂಗಮ ಕಾರ್ಯಕ್ರಮದಲ್ಲಿ 22 ಗುರುಗಳನ್ನು ಸನ್ಮಾನಿಸಲಾಯಿತು.