ಅಂಗನವಾಡಿ ಮಕ್ಕಳ ಆರೈಕೆ ವ್ಯವಸ್ಥೆಯ ಮೇಲೆ ನೇರ ಪರಿಣಾಮ
ನಗರಸಭೆಯ ಒಬ್ಬ ಸಿಬ್ಬಂದಿಯೂ ಭಾಗವಹಿಸುತ್ತಿಲ್ಲಗುರುಶಾಂತ ಜಡೆಹಿರೇಮಠಕನ್ನಡಪ್ರಭ ವಾರ್ತೆ ದಾಂಡೇಲಿ
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ಕಾಗಿ ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಹೆಚ್ಚಿನ ಪ್ರಮಾಣದಲ್ಲಿ ಬಿಎಲ್ಓಗಳಾಗಿ ನಿಯೋಜಿಸಿದ್ದರಿಂದ ಅಡುಗೆ ಸಹಾಯಕಿಯರೇ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ.ಚುನಾವಣಾ ಆಯೋಗದ ನಿರ್ದೇಶನದಂತೆ, ಬಿಎಲ್ಓಗಳಾಗಿ ನೇಮಕವಾಗುವ ಸಿಬ್ಬಂದಿ ತಾವು ಕಾರ್ಯನಿರ್ವಹಿಸುವ ಮತಗಟ್ಟೆಯ ವ್ಯಾಪ್ತಿಯಲ್ಲಿಯೇ ಮತದಾರರಾಗಿರಬೇಕು ಎಂಬ ನಿಯಮವಿದೆ. ಈ ನಿಯಮದಿಂದಾಗಿ ಅನೇಕ ಸರ್ಕಾರಿ ಇಲಾಖೆ ಸಿಬ್ಬಂದಿ, ನಗರಸಭೆ ಸಿಬ್ಬಂದಿ ಹಾಗೂ ಬೇರೆ ಊರುಗಳಿಂದ ಬಂದಿರುವ ಶಿಕ್ಷಕರು ಈ ಕಾರ್ಯದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ಸ್ಥಳೀಯವಾಗಿ ಮತ ಹೊಂದಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಕೆಲ ಶಿಕ್ಷಕರ ಮೇಲೆಯೇ ಎಸ್ಐಆರ್ ಕಾರ್ಯದ ಹೆಚ್ಚಿನ ಹೊರೆ ಬಿದ್ದಿದೆ.
ದಾಂಡೇಲಿ ನಗರ ಹಾಗೂ ಗ್ರಾಮೀಣ ಭಾಗ ಸೇರಿ ಒಟ್ಟು ೭೪ ಅಂಗನವಾಡಿಗಳಿದ್ದು, ಅವುಗಳಲ್ಲಿ ೨೯ ಅಂಗನವಾಡಿ ಕಾರ್ಯಕರ್ತೆಯರನ್ನು ಎಸ್ಐಆರ್ ಕಾರ್ಯಕ್ಕೆ ನಿಯೋಜಿಸಲಾಗಿದೆ. ಈ ಕೇಂದ್ರಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ, ವಾಸ್ತವದಲ್ಲಿ ಅನೇಕ ಕಡೆ ಅಡುಗೆ ಸಹಾಯಕಿಯರೇ ಮಕ್ಕಳನ್ನು ನೋಡಿಕೊಳ್ಳುವುದು, ಆಹಾರ ವಿತರಣೆ, ಸ್ವಚ್ಛತೆ ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವುದು ಕಂಡುಬರುತ್ತಿದೆ.ಅಂಗನವಾಡಿ ಕಾರ್ಯಕರ್ತೆಯರು ಕ್ಷೇತ್ರದಲ್ಲಿ ಎಸ್ಐಆರ್ ಕಾರ್ಯ ನಿರ್ವಹಿಸುವುದರ ಜೊತೆಗೆ ತಮ್ಮ ದೈನಂದಿನ ಆನ್‌ಲೈನ್ ವರದಿ, ಪೌಷ್ಟಿಕ ಆಹಾರ ದಾಖಲೆ, ಮಕ್ಕಳ ಆರೋಗ್ಯ ಮಾಹಿತಿ ಹಾಗೂ ಇಲಾಖೆಯ ಇತರೆ ದಾಖಲಾತಿಗಳನ್ನೂ ಪೂರ್ಣಗೊಳಿಸಬೇಕಾದ ಒತ್ತಡದಲ್ಲಿದ್ದಾರೆ. ಶಿಕ್ಷಣ ಇಲಾಖೆಯ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.
ಬಹುತೇಕರು ಹೊರಗಿನವರು:
ದಾಂಡೇಲಿ ನೂತನ ತಾಲೂಕು ಆಗಿರುವುದರಿಂದ ಇಲ್ಲಿ ಅನೇಕ ಸರ್ಕಾರಿ ಇಲಾಖೆಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಸ್ಥಾಪನೆಯಾಗಿಲ್ಲ. ಇರುವ ಇಲಾಖೆಗಳಲ್ಲೂ ಹೆಚ್ಚಿನ ಸಿಬ್ಬಂದಿ ಹೊರ ತಾಲೂಕು ಅಥವಾ ಹೊರ ಜಿಲ್ಲೆಯಿಂದ ಬಂದವರಾಗಿದ್ದು, ಅವರ ಮತಗಳು ಮೂಲ ಊರಿನಲ್ಲೇ ಇರುವುದರಿಂದ ಸ್ಥಳೀಯ ನಿವಾಸಿಗಳಾದ ಅಂಗನವಾಡಿ ಕಾರ್ಯಕರ್ತೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಈ ಜವಾಬ್ದಾರಿ ಹೊತ್ತಿದ್ದಾರೆ.ಪ್ರಸ್ತುತ ದಾಂಡೇಲಿ ತಾಲೂಕಿನಲ್ಲಿ ಒಟ್ಟು ೫೯ ಬಿಎಲ್ಓಗಳು ಕಾರ್ಯನಿರ್ವಹಿಸುತ್ತಿದ್ದು, ಅವರಲ್ಲಿ ೨೯ ಮಂದಿ ಅಂಗನವಾಡಿ ಕಾರ್ಯಕರ್ತೆಯರು, ೨೯ ಮಂದಿ ಶಿಕ್ಷಕರು ಹಾಗೂ ಒಬ್ಬರು ಕಂದಾಯ ಇಲಾಖೆಯ ಸಿಬ್ಬಂದಿಯಾಗಿದ್ದಾರೆ. ಇವರ ಮೇಲ್ವಿಚಾರಣೆಗೆ ಕಂದಾಯ ಇಲಾಖೆಯ ಆರು ಸಿಬ್ಬಂದಿ ನೇಮಕಗೊಂಡಿದ್ದಾರೆ. ವಿಶೇಷವೆಂದರೆ, ನಗರಸಭೆಯ ಒಬ್ಬ ಸಿಬ್ಬಂದಿಯೂ ಎಸ್ಐಆರ್ ಕಾರ್ಯದಲ್ಲಿ ಭಾಗವಹಿಸುತ್ತಿಲ್ಲ.
ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಕಾಲೇಜು ಉಪನ್ಯಾಸಕರನ್ನು ಈ ಕಾರ್ಯದಿಂದ ಹೊರಗಿಡಲಾಗಿದೆ. ಇತರ ಸರ್ಕಾರಿ ಇಲಾಖೆಗಳ ಸಿಬ್ಬಂದಿಯನ್ನು ಬಳಸಿಕೊಳ್ಳುವ ಅವಕಾಶ ಇದ್ದರೂ, ಚುನಾವಣಾ ಆಯೋಗದ ನಿಯಮ ಹಾಗೂ ಸ್ಥಳೀಯ ಮತದಾರರಾಗಿರಬೇಕು ಎಂಬ ಷರತ್ತಿನ ಕಾರಣ ಅದು ಸಾಧ್ಯವಾಗುತ್ತಿಲ್ಲ.ಸರ್ಕಾರ ಹಾಗೂ ಚುನಾವಣಾ ಆಯೋಗದ ನಿಯಮ ಮತ್ತು ನಿರ್ದೇಶನದಂತೆ ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಬಿಎಲ್ಓಗಳಾಗಿ ನೇಮಕ ಮಾಡಲಾಗಿದೆ. ದಾಂಡೇಲಿಯಲ್ಲಿ ಬೇರೆ ಇಲಾಖೆಗಳ ಕಾರ್ಯಾಲಯಗಳು ಕಡಿಮೆ. ಇರುವ ಇಲಾಖೆಯ ಸಿಬ್ಬಂದಿಯಲ್ಲಿ ಸ್ಥಳೀಯ ಮತದಾರರು ಅತಿ ಕಡಿಮೆ. ಸರ್ಕಾರದ ನಿಯಮ ಉಲ್ಲಂಘಿಸಿ ಬಿಎಲ್ಓಗಳ ನೇಮಕ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಿಯಮಗಳನ್ನು ಪಾಲಿಸಿಕೊಂಡೇ ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಕ ಮಾಡಲಾಗಿದೆ ಎನ್ನುತ್ತಾರೆ ತಹಶೀಲ್ದಾರ ಶೈಲೇಶ ಪರಮಾನಂದ.