ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಸ್ತುತ ರಾಜಕಾರಣದಲ್ಲಿ ಸ್ವಾರ್ಥ ಹೆಚ್ಚಾಗುತ್ತಿದೆ. ಸೇವೆ ಎಂಬುದು ಮರೆಯಾಗಿ ವ್ಯವಸ್ಥೆ ಅಸಹ್ಯ ಹುಟ್ಟಿಸುವಂತಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನೋವಿನಂದಲೇ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಜಿ.ಮಾದೇಗೌಡ ಪ್ರತಿಷ್ಠಾನ, ಭಾರತಿ ಎಜುಕೇಷನ್ ಟ್ರಸ್ಟ್ (ಭಾರತೀನಗರ), ಮಹಾತ್ಮಗಾಂಧಿ ಸ್ಮಾರಕ ಟ್ರಸ್ಟ್ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯಮಟ್ಟದ ಡಾ. ಜಿ.ಮಾದೇಗೌಡ ಸಮಾಜ ಸೇವಾ ಮತ್ತು ಸಾವಯವ ಕೃಷಿಕ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಂದಿನ ರಾಜ್ಯದ ರಾಜಕಾರಣಿಗಳಾದ ಗುಂಡೂರಾವ್, ಎಚ್.ಡಿ.ದೇವೇಗೌಡ, ರಾಮಕೃಷ್ಣ ಹೆಗಡೆ, ಜಿ.ಮಾದೇಗೌಡ ಅವರ ಜನಪರ ಅಧಿಕಾರವನ್ನು ಇವತ್ತಿನ ರಾಜಕಾರಣಕ್ಕೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಅತ್ಯಂತ ಶ್ರೇಷ್ಠವಾದ ವಿಧಾನ ಪರಿಷತ್ ಸ್ಥಾನದಲ್ಲಿ ಒಮ್ಮೊಮ್ಮೆ ಯಾಕಾದರೂ ಕುಳಿತುಕೊಂಡೆನೋ ಎನ್ನಿಸುತ್ತದೆ ಎಂದು ವಿಷಾದಿಸಿದರು.

ಇವತ್ತಿನ ರಾಜಕಾರಣದಲ್ಲಿ ನೆಮ್ಮದಿಯಿಲ್ಲ. ಅವತ್ತಿನ ರಾಜಕಾಣಿಗಳು ಜಿ.ಮಾದೇಗೌಡರ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದರು.


ತತ್ವಾದರ್ಶಗಳನ್ನು ಇಟ್ಟುಕೊಂಡಿದ್ದ ಗೌಡರು ರಾಜ್ಯದಲ್ಲಿಯೇ ಮಾದರಿ ಶ್ರೇಷ್ಠ ರಾಜಕಾರಣಿಯಾಗಿ ಕಾಣುತ್ತಾರೆ ಎಂದು ಹೇಳಿದರು.

ಚಳವಳಿಗೆ ಹಾಗೂ ರಾಜಕಾರಣಕ್ಕೆ ಪ್ರಸಿದ್ಧವಾಗಿರುವ ಜಿ.ಮಾದೇಗೌಡ ಅವರ ಜೀವನ ಚರಿತ್ರೆ ಕುರಿತು ಸಿನಿಮಾ ಮಾಡಬೇಕು. ಅವರ ಆದರ್ಶ, ಗಾಂಧಿ ತತ್ವ, ಸರಳತೆಯು ಯುವ ಸಮೂಹಕ್ಕೆ ತಿಳಿಸುವ ಕೆಲಸ ಆಗಬೇಕು. ರಾಜಕಾರಣಿಗಳ ಮಕ್ಕಳು ಶೇ.90 ರಷ್ಟು ಪ್ರಿನ್ಸಿಪಲ್ ಇಟ್ಟುಕೊಂಡಿಲ್ಲ. ಆದರೆ, ಇದಕ್ಕೆ ವಿರುದ್ಧವೆಂಬಂತೆ ಮಾದೇಗೌಡರ ಮಗ ಮಧು ಅವರು ನಂಬಿಕೆ ಇರುವಂತೆ ರಾಜಕಾರಣ ಮಾಡುತ್ತಿರುವುದು ಸಮಾಧಾನ ತರಿಸಿದೆ ಎಂದು ಶ್ಲಾಘಿಸಿದರು.

ಒಂದು ಕಡೆ ಮದ್ಯಪಾನದಿಂದ ಲಾಭ ಬರುತ್ತದೆ ಎಂದು ಹೇಳಲಾಗುತ್ತದೆ. ಮತ್ತೊಂದೆಡೆ ಮದ್ಯಪಾನ ವಿರೋಧ ಮಾಡಬೇಕು ಎನ್ನುತ್ತಾರೆ. ಆದರೆ, ಇದರ ನಡುವೆ ಸಿಕ್ಕಿಕೊಂಡಿರುವ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಅವರ ಸ್ಥಿತಿ ಕ್ಲಿಷ್ಟಕರವಾಗಿದ್ದು ಏನು ಮಾತು ಹೇಳುತ್ತಾರೆ ಎನ್ನುವ ಗೊಂದಲಿದಲ್ಲಿರುವುದಂತು ಸತ್ಯ ಎಂದರು.

ಪ್ರಶಸ್ತಿ ಕಾರ್ಯಕ್ರಮವು ಮಾದರಿಯಾಗಿದೆ. ಯಾವುದೋ ಮೂಲೆಯಲ್ಲಿರುವ ಸಾಧಕರನ್ನು ಕರೆತಂದು ಪ್ರಶಸ್ತಿ ನೀಡುವ ಮೂಲಕ ಅವರಿಗೆ ಮೌಲ್ಯ ತಂದು ಕೊಡುವ ಕೆಲಸವನ್ನು ಜಿ.ಮಾದೇಗೌಡ ಪ್ರತಿಷ್ಠಾನ ಮಾಡುತ್ತಿರುವುದು ಮೆಚ್ಚುವ ಕೆಲಸ ಎಂದು ತಿಳಿಸಿದರು.

ಡಾ.ಜಿ.ಮಾದೇಗೌಡ ಸಮಾಜ ಸೇವಾ ಪ್ರಶಸ್ತಿ ಸ್ವೀಕರಿಸಿದ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಮಾತನಾಡಿ, ಈ ಪ್ರಶಸ್ತಿಯನ್ನು ಸ್ವೀಕರಿಸಿರುವುದು ಯಾವುದೋ ಜನ್ಮದ ಪುಣ್ಯ ಎನಿಸುತ್ತಿದೆ. ತಂದೆ ಕನಸಿನಂತೆ ಸಾಗುತ್ತಿರುವ ಮಧು ಅವರ ಆಶಯಗಳು ಈಡೇರಲಿ ಎಂದು ಆಶಿಸಿದರು.

ಜಿ.ಮಾದೇಗೌಡರು ಒಂದು ಮೇರು ಪರ್ವತ ಇದ್ದಂತೆ. ಇವರ ಆದರ್ಶಗಳನ್ನು ನನ್ನ ಬದುಕಿಗೆ ಮಾದರಿಯಾಗಿ ತೆಗೆದುಕೊಳ್ಳುತ್ತೇನೆ. ಕಾವೇರಿ ಹೋರಾಟದಲ್ಲಿ ಅವರ ವ್ಯಕ್ತಿತ್ವವನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಜನರ ಮೇಲಿದ್ದ ಅವರ ಪ್ರೀತಿಯನ್ನು ಕಂಡಿದ್ದೇನೆ ಎಂದು ಶ್ಲಾಘಿಸಿದರು.

ಜನರಿಗಾಗಿ ರಾಜಕೀಯ ಮಾಡಿದ ಯಾರಾದರೂ ರಾಜಕಾರಣಿ ಇದ್ದರೆ ಅದು ನಮ್ಮ ಜಿ.ಮಾದೇಗೌಡರು. ಏಕೆಂದರೆ ಸ್ವಂತಕ್ಕಾಗಿ ರಾಜಕಾರಣ ಮಾಡುವವರನ್ನು ನಾವು ಇಂದು ನೋಡುತ್ತಿದ್ದೇವೆ. ಮಹಾತ್ಮ ಗಾಂಧೀಜಿ ಅವರನ್ನು ಆದರ್ಶವಾಗಿಟ್ಟುಕೊಂಡು ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಯನ್ನು ಮುಂದಿಟ್ಟುಕೊಂಡು ನಡೆದು ಎಲ್ಲರ ಮನೆ ಮಗನಾಗಿ ಜಿ.ಮಾದೇಗೌಡರು ಕಾಣುತ್ತಾರೆ ಎಂದು ಹೇಳಿದರು.

ಸಾವಯವ ಕೃಷಿಕ ಪ್ರಶಸ್ತಿ ಸ್ವೀಕರಿಸಿದ ಕೃಷಿ ತಜ್ಞ ವಿಜಯ್ ಅಂಗಡಿ ಮಾತನಾಡಿ, ಮಣ್ಣು ಜೀವ ಮತ್ತು ಮಣ್ಣೇ ಜೀವಾಳ ಎಂಬುವಂತೆ ಸಾಗಬೇಕಿದೆ. ಕಡಿಮೆ ನೀರು ಬಳಸಿಕೊಂಡು ಬೆಳೆಬೆಳೆಯುವುದೇ ಕಾಯಕವಾಗಿದೆ. ಪ್ರತಿಯೊಬ್ಬರೂ ಕೃಷಿಯಲ್ಲಿ ತೊಡಗಬೇಕು. ಸಹಜ ಕೃಷಿಗೆ ಒಗ್ಗಿಕೊಳ್ಳುವುದು ಮುಖ್ಯ. ಗುಳೆ ಹೋಗುವವರ ನಡುವೆ ಕೃಷಿಯೇ ಶ್ರೇಷ್ಠ ಎನ್ನುವ ಮೂಲಕ ನಂಬಿ ಜೀವನ ನಡೆಸುತ್ತಿರುವ ಜನರನ್ನು ನೋಡಿದ್ದೇವೆ. ನನ್ನ 14 ಪುಸ್ತಕಗಳನ್ನು ಭಾರತಿ ಎಜುಕೇಷನ್ ಟ್ರಸ್ಟ್‌ಗೆ ನೀಡುತ್ತಿದ್ದೇನೆ ಎಂದರು.

ಇದೇ ವೇಳೆ ಪ್ರಶಸ್ತಿಯೊಂದಿಗೆ ನೀಡಿದ್ದ ₹25 ಸಾವಿರ ನಗದನ್ನು ಶರಣಪ್ಪ ಸಲಾದಪುರ ಅವರು ಭಾರತಿ ಎಜುಕೇಷನ್ ಟ್ರಸ್ಟ್‌ಗೆ ವಾಪಸ್ ನೀಡಿ ಧನ್ಯತೆ ಮೆರೆದರು. ಸಮಾರಂಭದಲ್ಲಿ ವಿಧಾನ ಪರಿಷತ್ ಶಾಸಕ ಮಧು ಜಿ.ಮಾದೇಗೌಡ, ಬೆಂಗಳೂರಿನ ಎಸ್‌ಜೆಆರ್ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೇಮಾ ಸಿದ್ದರಾಜು ಭಾಗವಹಿಸಿದ್ದರು.