ಸಾರಾಂಶ
ಹಾನಗಲ್ಲ: ರಾಷ್ರೀಯ ಸೇವಾ ಯೋಜನೆ ಶಿಬಿರಾರ್ಥಿಗಳು ತಾಲೂಕಿನ ಅರಳೇಶ್ವರದಲ್ಲಿ ಪೋಷಣಾ ಅಭಿಯಾನದ ಅಂಗವಾಗಿ ಗ್ರಾಮದಲ್ಲಿ ಜಾಗೃತಿ ಜಾಥಾ ನಡೆಸಿ, ಗರ್ಭಿಣಿಯರಿಗೆ ಕುಂಕುಮ, ಹೂವು ನೀಡಿ ಸೀಮಂತದ ಗೌರವ ಸಲ್ಲಿಸಿದರು.
ಹಾನಗಲ್ಲಿನ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಎನ್‌ಎಸ್‌ಎಸ್ ವಿಶೇಷ ಶಿಬಿರದ ಅಂಗವಾಗಿ ಅರಳೇಶ್ವರ ಗ್ರಾಮದಲ್ಲಿ ಗರ್ಭಿಣಿ ಪೋಷಣಾ ಅಭಿಯಾನದ ಅಂಗವಾಗಿ ಇಡೀ ಊರಿನ ಎಲ್ಲ ಬಡಾವಣೆಗಳಲ್ಲಿ ಜಾಗೃತಿ ಜಾಥಾ ನಡೆಸಿದರು.ಜಾಥಾದುದ್ದಕ್ಕೂ ಘೋಷಣೆಗಳನ್ನು ಕೂಗಿದರು. ಅಲ್ಲದೆ ಗರ್ಭಿಣಿಯರನ್ನು ಗುರುತಿಸಿ ಹೂವು, ಕುಂಕುಮ ನೀಡಿ ಗೌರವಿಸಿ, ಆರೋಗ್ಯ ಸಲಹೆ ನೀಡಿ, ಸೀಮಂತದ ಗೌರವ ಸಲ್ಲಿಸಿ ಒಳಿತಾಗಲಿ ಎಂದು ಹರಸಿದರು.
ಶಿಬಿರಾರ್ಥಿ ನಾಗಲಕ್ಷ್ಮಿ ಬೇವಿನಮರದ ಮಾತನಾಡಿ, ಅಪೌಷ್ಟಿಕತೆ ಹೋಗಲಾಡಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಜಾಗೃತಿ ಮೂಡಿಸುವ ಪಾತ್ರ ಮಹತ್ವದ್ದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ಜನರಿಗೆ ಮಕ್ಕಳ ಪಾಲನೆ, ಪೋಷಣೆ, ಚುಚ್ಚುಮದ್ದು, ಅರೋಗ್ಯ ಮಾಹಿತಿಯನ್ನು ನೀಡುವ ಅಗತ್ಯವಿದೆ. ಸರ್ಕಾರ ಸಮಾಜ ಸಮಾನ ಜವಾಬ್ದಾರಿಯಿಂದ ಮಕ್ಕಳ ಪೋಷಣೆ ಆಗಬೇಕು. ಈ ಮೂಲಕ ಬಡವರ ಕುಟುಂಬಗಳಿಗೆ ವಿಶೇಷ ಕಾಳಜಿ ಸಿಗಬೇಕು ಎಂದರು.ಶಿಬಿರಾರ್ಥಿಗಳಾದ ಪವಿತ್ರಾ ಹೀರೂರ, ಜಿ. ತೇಜಸ್ವಿನಿ, ಅನ್ನಪೂರ್ಣ ಸುಣಗಾರ, ಕವಿತಾ ಕೊಳಲ, ಆಶ್ವಿನಿ ಜಿ., ಲತಾ ಚಿಲಕವಾಡ ಮಾತನಾಡಿದರು. ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ. ವಿಶ್ವನಾಥ ಬೋಂದಾಡೆ, ಸಹ ಕಾರ್ಯಕ್ರಮಾಧಿಕಾರಿ ಡಾ. ಜಿ.ವಿ. ಪ್ರಕಾಶ, ಗ್ರಾಪಂ ಅಧ್ಯಕ್ಷ ರಾಮಣ್ಣ ಕುರಿಯವರು, ಸದಸ್ಯ ಕೊಟ್ರೇಶ ಅಂಗಡಿ, ಎಸ್‌ಡಿಎಂಸಿ ಸದಸ್ಯ ಶಿವಯೋಗಿ ಸಂಗೂರ, ಅರುಣ ತಿರುಮಲೆ, ನಾಗರಾಜ ಡಂಬಳಪ್ಪನವರ ಮೊದಲಾದವರಿದ್ದರು.ಧರ್ಮ ರಕ್ಷಣೆಗೆ ಜೀವನ ಮುಡುಪಿಟ್ಟ ಅಕ್ಕಮಹಾದೇವಿ
ಹಾವೇರಿ: ವಚನ ಸಾಹಿತ್ಯ ರಕ್ಷಣೆಗಾಗಿ, ಮಾನವೀಯತೆಯ ಉಳಿವಿಗಾಗಿ ಗಂಧದ ಕೊರಡಿನಂತೆ ಸವೆಸಿದವರು ಅಕ್ಕಮಹಾದೇವಿ ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ತಿಳಿಸಿದರು.ನಗರದ ಹೊಸಮಠದಲ್ಲಿ ಅಕ್ಕನ ಬಳಗದ ಆಶ್ರಯದಲ್ಲಿ ಏರ್ಪಡಿಸಿದ್ದ ಕನ್ನಡದ ಪ್ರಥಮ ಕವಯತ್ರಿ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಭರತ ಖಂಡದ ವೀರವನತೆಯರ, ಸಾಧ್ವಿ ಶಿರೋಮಣಿಗಳ, ಮಾನವೀಯತೆಯ ಸಾಕಾರ ಮೂರ್ತಿಗಳ ಸಾಲಿನಲ್ಲಿ ಕರ್ನಾಟಕದ ಶರಣೆ ಅಕ್ಕಮಹಾದೇವಿ ಅವರದ್ದು ಎದ್ದು ಕಾಣುವ ವ್ಯಕ್ತಿತ್ವ. 12ನೇ ಶತಮಾನದಲ್ಲಿ ಕನ್ನಡ ನಾಡಿನಲ್ಲಿ ಕಲ್ಯಾಣ ಕ್ರಾಂತಿಯ ಹರಿಕಾರ ಬಸವಣ್ಣನವರಿಗೆ ಪ್ರೇರಣ ಶಕ್ತಿಯಾಗಿ, ಎಲೆಮರೆಯ ಹೂವಿನಂತೆ ತಮ್ಮ ಜೀವನವನ್ನು ಧರ್ಮ ರಕ್ಷಣೆಗಾಗಿ ಮುಡುಪಿಟ್ಟಿದ್ದರು.ಶರಣ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಬೆಳೆಸಲು ಆ ಮಹಾತಾಯಿ ಮಾಡಿದ ತ್ಯಾಗ ಅಪರೂಪವಾದದ್ದು. ಅವರ ಬಹುಮುಖ ಸೇವೆಯನ್ನು ಸ್ಮರಿಸಿಕೊಂಡರೆ, ಮೈಮನ ಪುಳುಕಿತವಾಗುತ್ತದೆ. ಮೌನದಲ್ಲಿಯೇ ಮಹಾಮಣಿ ಅನ್ನು ನುಡಿಸಿದ ಅಕ್ಕಮಹಾದೇವಿ ನಿಜವಾಗಿಯೂ ಜಾಗತಿಕ ಪ್ರಸಿದ್ಧ ಮಹಾ ಮಹಿಳೆಯರ ಶ್ರೇಣಿಯಲ್ಲಿ ಶೋಭಿಸುವ ತೇಜೋರತ್ನ ಎಂದರು.ಅರಮನೆಯನ್ನು ತೊರೆದು ಅರಿವಿನ ಮನೆಗೆ ಏರಿದಳು ಅಕ್ಕಮಹಾದೇವಿ. ವಚನಗಳ ರಚನೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಸಮಾಜದಲ್ಲಿ ಸಮಾನತೆ, ಸಹಬಾಳ್ವೆಗೆ ಶ್ರಮಿಸಿದ ಅಕ್ಕಮಹಾದೇವಿಯವರ ಹೆಸರು ಇತಿಹಾಸ ಪುಟದಲ್ಲಿ ಉಳಿದುಕೊಂಡಿದ್ದು, ಅವರ ಆದರ್ಶಗಳು ಮಹಿಳೆಯರಿಗೆ ದಾರಿದೀಪವಾಗಿದೆ ಎಂದರು.ಇದೇ ಸಂದರ್ಭದಲ್ಲಿ ಪಲ್ಲಕ್ಕಿಯಲ್ಲಿ ವಚನ ಸಾಹಿತ್ಯದ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಗೀತಾ ತಡಸದ, ಡಾ. ಎನ್.ಬಿ. ನಾಗರಹಳ್ಳಿ, ಲಲಿತಾ ಹಿರೇಮಠ, ಪುಷ್ಪ ಹೊಸೂರು ಸೇರಿದಂತೆ ಅಕ್ಕನ ಬಳಗದ ಸದಸ್ಯರು ಪಾಲ್ಗೊಂಡಿದ್ದರು. ಶಿವಲೀಲಾ ಅಕ್ಕಲಕೋಟೆ ಪ್ರಾರ್ಥಿಸಿದರು. ಜಿ.ಎಂ. ಓಂಕಾರಣ್ಣ ನಿರೂಪಿಸಿದರು.