ಸಾರಾಂಶ
ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರ ಪದಚ್ಯುತಿ ಹಿಂಪಡೆಯುವಂತೆ ಆಗ್ರಹಿಸಿ ಹಾಗೂ ಸಂಘಕ್ಕೆ ಹೊಸದಾಗಿ ನೇಮಕ ಮಾಡಿರುವ ಹೊಸ ಕಾರ್ಯನಿರ್ವಹಣಾಧಿಕಾರಿ ಆದೇಶವನ್ನು ರದ್ದುಪಡಿಸುವಂತೆ ಒತ್ತಾಯಿಸಿ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಹಾಲು ಉತ್ಪಾದಕರ ಸಂಘದ ಸದಸ್ಯರು ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ರಾಮನಗರ
ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರ ಪದಚ್ಯುತಿ ಹಿಂಪಡೆಯುವಂತೆ ಆಗ್ರಹಿಸಿ ಹಾಗೂ ಸಂಘಕ್ಕೆ ಹೊಸದಾಗಿ ನೇಮಕ ಮಾಡಿರುವ ಹೊಸ ಕಾರ್ಯನಿರ್ವಹಣಾಧಿಕಾರಿ ಆದೇಶವನ್ನು ರದ್ದುಪಡಿಸುವಂತೆ ಒತ್ತಾಯಿಸಿ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಹಾಲು ಉತ್ಪಾದಕರ ಸಂಘದ ಸದಸ್ಯರು ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.ಸಂಘದ ಮುಖ್ಯ ಕಾರ್ಯನಿರ್ವಾಹಕ ಹುದ್ದೆಯು ನಿವೃತ್ತಿಯಿಂದ ತೆರವಾಗಿದೆ. ಸಂಘದ ಆಡಳಿತ ಮಂಡಳಿಯು ದುರುಪಯೋಗ ಪಡೆಸಿಕೊಳ್ಳಲು ಮುಂದಾಗಿದೆ. ಏ.16ರಂದು ಸಂಘದಲ್ಲಿ ಯಾರಿಗೂ ತಿಳಿಯದ ರೀತಿಯಲ್ಲಿ ಸಭೆ ನಡೆಸಿ ಮಾಹಿತಿಯನ್ನು ಪ್ರಕಟಿಸದೆ ಏಕಾಏಕಿ ತಾತ್ಕಾಲಿಕ ಮುಖ್ಯ ಕಾರ್ಯನಿರ್ವಹಾಕನನ್ನು ಆಯ್ಕೆ ಮಾಡಿದ್ದಾರೆ ಎಂದು ಪ್ರತಿಭಟನಾನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಮುಖಂಡರಾದ ನಂಜುಂಡ, ಗ್ರಾಮದಲ್ಲಿ ರಾಜಕೀಯ ಕಾರಣಕ್ಕೆ ಹಾಲಿ ಇದ್ದ ಅಧ್ಯಕ್ಷರನ್ನು ಪದಚ್ಯುತಗೊಳಿಸಲಾಗಿದೆ, ಹಾಗೆಯೇ ಅಧಿಕಾರಿಗಳನ್ನು ಬಳಸಿಕೊಂಡು ಹೊಸ ಕಾರ್ಯದರ್ಶಿ ನೇಮಕ ಮಾಡಿಕೊಳ್ಳಲಾಗಿದೆ, ಸಂಘದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯನ್ನು ನೇಮಕ ಮಾಡಿಕೊಳ್ಳಲು ಹಾಲು ಉತ್ಪಾದಕರು ನಿರ್ಧರಿಸಿದ್ದರು, ಕೆಲವರು ಹಣದಾಸೆಗೆ ಬೇರೆಯವರನ್ನು ನೇಮಕ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.ಈ ನೇಮಕದಲ್ಲಿ ಕೆಲ ನಿರ್ದೇಶಕರು ಕೈ ಜೋಡಿಸಿದ್ದಾರೆ ಹಾಗಾಗಿ ಆ ಆದೇಶವನ್ನು ತಡೆಹಿಡಿಯಬೇಕು, ಅಧ್ಯಕ್ಷರ ಪದಚ್ಯುತಿ ಮಾಡಿ ಉಪಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಿರುವುದು ಕಾನೂನುಬಾಹಿರವಾಗಿದ್ದು ಅದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಅಧಿಕಾರಿಗಳು ಪೊಲೀಸರ ಸರ್ಪಗಾವಲಲ್ಲಿ ಅಧಿಕಾರ ಕಿತ್ತುಕೊಳ್ಳಲಾಗಿದೆ, ಇದಕ್ಕೆ ರಾಜಕೀಯ ಕಾರಣ, ಗ್ರಾಮದ ಕೆಲವರ ಮಾತು ಕೇಳಿ ಒಗ್ಗಟ್ಟು ಒಡೆಯಲಾಗುತ್ತಿದೆ ಇದನ್ನು ಅಧಿಕಾರಿಗಳೇ ಸರಿಮಾಡಬೇಕು, ಇಲ್ಲವಾದಲ್ಲಿ ಮೂರು ದಿನಗಳ ನಂತರ ಅಹೋರಾತ್ರಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.ಸಂದರ್ಭದಲ್ಲಿ ಉಪನಿಬಂಧಕರ ಅನುಪಸ್ಥಿತಿಯಲ್ಲಿ ಕಚೇರಿ ಸಿಬ್ಬಂದಿಗೆ ಮನವಿಯನ್ನು ನೀಡಲಾಯಿತು. ಗ್ರಾಮದ ಮುಖಂಡರಾದ ದೇವರಾಜು, ಲೋಕೇಶ, ಮುತ್ತುರಾಜು, ಮರಿಗೌಡ, ಶಿವನಂಜ, ಚಂದ್ರ, ಅಶೋಕ, ಚನ್ನಪ್ಪ ಮತ್ತಿತರರು ಭಾಗವಹಿಸಿದ್ದರು.