ಮಳೆಯ ಅಬ್ಬರ: ಜನಜೀವನ ಅಸ್ತವ್ಯಸ್ತ

| Published : Apr 21 2025, 12:48 AM IST

ಸಾರಾಂಶ

ನೆಲಮಂಗಲ ತಾಲೂಕಾದ್ಯಂತ ಭಾನುವಾರ ಮಧ್ಯಾಹ್ನ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡು ಹಲವಾರು ಮರಗಳು ರಸ್ತೆಗೆ ಉರುಳಿಬಿದ್ದಿವೆ. ಬಿರುಗಾಳಿಯ ಪರಿಣಾಮ ಶಾಲೆ ಮೇಲಿದ್ದ ಶೀಟುಗಳು ಗಾಳಿಗೆ ತೂರಿ ಹೋಗಿವೆ.

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ನೆಲಮಂಗಲ ತಾಲೂಕಾದ್ಯಂತ ಭಾನುವಾರ ಮಧ್ಯಾಹ್ನ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡು ಹಲವಾರು ಮರಗಳು ರಸ್ತೆಗೆ ಉರುಳಿಬಿದ್ದಿವೆ. ಬಿರುಗಾಳಿಯ ಪರಿಣಾಮ ಶಾಲೆ ಮೇಲಿದ್ದ ಶೀಟುಗಳು ಗಾಳಿಗೆ ತೂರಿ ಹೋಗಿವೆ.

ಸುಗ್ಗಯ್ಯನಪಾಳ್ಯದಲ್ಲಿ ಹಲಸಿನ ಮರ, ನೀಲಿಗಿರಿ ಮರಗಳು ಮುರಿದು ಬಿದ್ದಿದೆ.

ಮುರಿದು ಬಿದ್ದ ವಿದ್ಯುತ್ ಕಂಬ: ಲಕ್ಕೂರು ತೋಟದಲ್ಲಿ ಅಡಿಕೆ ಮರಗಳು ಗಾಳಿಗೆ ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ವಿದ್ಯುತ್ ತಂತಿಗಳು ಕಿತ್ತು ಹೋಗಿ, ವಿದ್ಯುತ್ ಕಂಬ ಮುರಿದು ಬಿದ್ದಿದೆ. ಸ್ಥಳಕ್ಕೆ ಕೆಇಬಿ ಅಧಿಕಾರಿಗಳು ಭೇಟಿ ನೀಡಿ ಸರಿಪಡಿಸುತ್ತಿದ್ದು, ಕೆಲಕಾಲ ವಿದ್ಯುತ್ ಸ್ಥಗಿತಗೊಂಡಿತ್ತು.

ಹಾರಿಹೋದ ಶಾಲೆಯ ಶೀಟು: ಮದಲಕೋಟೆ ಗ್ರಾಮದಲ್ಲಿ ಕಳೆದ ನಾಲ್ಕು ವರ್ಷದ ಹಿಂದೆ ಮೇಲ್ಛಾವಣಿ ಸೋರುತ್ತಿದ್ದ ಪರಿಣಾಮ ಎರಡು ವರ್ಷಗಳ ಹಿಂದೆ ಆರ್‌ಸಿಸಿ ಮೇಲ್ಛಾವಣಿ ಮೇಲೆ ಕಬ್ಬಿಣದ ಶೀಟುಗಳನ್ನು ಅಳವಡಿಸಲಾಗಿತ್ತು. ಭಾನುವಾರ ಮಧ್ಯಾಹ್ನ ಬೀಸಿದ ಗಾಳಿಗೆ ಶಾಲೆಯ ಮೇಲಿದ್ದ ಸೀಟು ಹಾರಿಹೋಗಿದೆ.

ದೊಡ್ಡಬಳ್ಳಾಪುರ ರಸ್ತೆಯ ಪೆಮ್ಮನಹಳ್ಳಿ ಗ್ರಾಮದ ಸಮೀಪ ವ್ಯಕ್ತಿಯೊಬ್ಬರು ಜೀವನೋಪಾಯಕ್ಕಾಗಿ ಇಟ್ಟಿದ್ದ ಚಿಲ್ಲರೆ ಅಂಗಡಿ ಗಾಳಿಗೆ ಸಂಪೂರ್ಣ ಮುರಿದು ಬಿದ್ದಿದೆ.

ರೈಲು ಹಳಿ ಮೇಲೆ ಮರ: ಸಂಚಾರ ವ್ಯತ್ಯಯ

ಸೋಂಪುರ ಹೋಬಳಿಯಲ್ಲಿ ಸುರಿದ ಭಾರಿ ಮಳೆ ಬಿರುಗಾಳಿಗೆ ಲಕ್ಕೂರು ಬ್ರೀಡ್ಜ್ ಗೆ ಹೊಂದಿಕೊಂಡಿರುವ ರೈಲ್ವೆ ಹಳಿಗಳ ಮೇಲೆ ಮರ ಹಾಗೂ ಕಬ್ಬಿಣದ ಬೋರ್ಡ್ ಬಿದ್ದ ಪರಿಣಾಮ ರೈಲ್ವೆ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

ಪಟ್ಟಣದ ಉದ್ದಾನೇಶ್ವರ ವೃತ್ತದಲ್ಲಿ ಮಳೆಯಿಂದ ರಕ್ಷಿಸಿಕೊಳ್ಳಲು ಬೈಕ್ ಸವಾರರು, ಸಾರ್ವಜನಿಕರು ಜಮಾಯಿಸಿದ ಪರಿಣಾಮ ದೊಡ್ಡಬಳ್ಳಾಪುರ, ತುಮಕೂರು, ಬೆಂಗಳೂರು, ಮಧುಗಿರಿ ರಸ್ತೆಯಲ್ಲಿ ಕಾರು, ಬಸ್ಸು, ಆಟೋಗಳು ಚಲಾಯಿಸಲು ಪರದಾಡುವಂತಾಯಿತು. ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.