ಸಾರಾಂಶ
ಹಾವೇರಿ ಜಿಲ್ಲಾ ಸಂಪನ್ಮೂಲ ಕೇಂದ್ರದಲ್ಲಿ ವಸತಿಯುತ ಕಾಯಕ ಬಂಧುಗಳ ತರಬೇತಿ ಕಾರ್ಯಕ್ರಮ ನಡೆಯಿತು.
ಹಾವೇರಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾರ್ಮಿಕ ಗುಂಪುಗಳಲ್ಲಿ ಮೇಟಿಗಳ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದ್ದು, ವಲಸೆ ತಡೆಯಲು ಮೇಟಿಗಳ ಪಾತ್ರ ಪ್ರಮುಖವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಎಚ್.ವೈ. ಮೀಸೆ ಹೇಳಿದರು.
ಸ್ಥಳೀಯ ಜಿಲ್ಲಾ ಸಂಪನ್ಮೂಲ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ವಸತಿಯುತ ಕಾಯಕ ಬಂಧುಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳ ೬ ತಾಲೂಕುಗಳಿಂದ ೩೬ ಜನರಿಗೆ ಹತ್ತು ದಿನಗಳ ಕಾಲ ಕಾಯಕ ಬಂಧು ತರಬೇತಿ ನೀಡಲಾಗುತ್ತದೆ. ಗ್ರಾಮ ಸ್ವರಾಜ್ ಅಭಿಯಾನ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತದೆ. ಪಂಚಾಯಿತಿ ಮಟ್ಟದಲ್ಲಿ ಮೇಟಿಗಳಲ್ಲಿ ಸಾಮರ್ಥ್ಯ ಅಭಿವೃದ್ಧಿ ಪಡಿಸಲು ಈಗ ನೀಡುತ್ತಿರುವ ತರಬೇತಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಕಾರಿಯಾಗುತ್ತವೆ ಎಂದರು.
ಬಳಿಕ ಜಿಲ್ಲಾ ಪಂಚಾಯಿತಿ ಎಡಿಪಿಸಿ ನವೀನ್ ಹಿರೇಮಠ ಮಾತನಾಡಿ, ಪಂಚಾಯತ್ ರಾಜ್ ಇಲಾಖೆ ಗ್ರಾಮ ಸ್ವರಾಜ್ ಅಭಿಯಾನಕ್ಕೆ ಎಲ್ಲ ತರಹದ ಸಹಕಾರ ನೀಡುತ್ತಿದೆ. ನಾವುಗಳೂ ಕಾಯಕ ಬಂಧುಗಳ ತರಬೇತಿಯಲ್ಲಿ ಕೈಜೋಡಿಸುತ್ತೇವೆ ಎಂದರು.ಗ್ರಾಮ ಸ್ವರಾಜ್ ಅಭಿಯಾನದ ರಾಜ್ಯ ಸಮಿತಿ ಸದಸ್ಯ ಚನ್ನಪ್ಪ ಹತ್ತು ದಿನಗಳ ಕಾಲ ನಡೆಯುವ ತರಬೇತಿಯ ಕಾರ್ಯ ಚಟುವಟಿಕೆ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ತರಬೇತಿದಾರ ನಾಗರಾಜ್ ಬಿದರಿ ಸ್ವಾಗತಿಸಿದರು. ಗುಡ್ಡಪ್ಪ ವಂದಿಸಿದರು. ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಐಇಸಿ ಸಂಯೋಜಕರಾದ ಎಚ್.ಎಫ್. ಅಕ್ಕಿ, ಶ್ರೀನಿವಾಸ್ ಮೂರ್ತಿ, ಶೇಷಣ್ಣ, ಮುತ್ತುರಾಜ್ ಮಾದರ್, ಅಶೋಕ ಯರಗಟ್ಟಿ ಹಾಗೂ ರಾಜ್ಯಮಟ್ಟದ ತರಬೇತಿದಾರರು ಮತ್ತು ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.