ಹಿರೇಕೆರೂರು ತಾಲೂಕಿನ ಬಾಳಂಬೀಡ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕ-ಶಿಕ್ಷಕರ ಮಹಾಸಭೆ ಮತ್ತು ಸ್ಮಾರ್ಟ್‌ ಕ್ಲಾಸ್, ಸಾವಿತ್ರಿ ಬಾಯಿ ಫುಲೆ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಯು.ಬಿ.ಬಣಕಾರ ಉದ್ಘಾಟಿಸಿದರು.

ಹಿರೇಕೆರೂರು: ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರು ಮತ್ತು ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದ್ದು, ಮಕ್ಕಳ ಆಸಕ್ತಿ ಅಭಿರುಚಿಗಳಿಗೆ ಪ್ರೇರಣೆ ನೀಡಿ ಅವರ ಶೈಕ್ಷಣಿಕ ಜೀವನಕ್ಕೆ ಭದ್ರ ಅಡಿಪಾಯ ಹಾಕಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ತಾಲೂಕಿನ ಬಾಳಂಬೀಡ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕ-ಶಿಕ್ಷಕರ ಮಹಾಸಭೆ ಮತ್ತು ಸ್ಮಾರ್ಟ್‌ ಕ್ಲಾಸ್ ಉದ್ಘಾಟಿಸಿ, ಸಾವಿತ್ರಿ ಬಾಯಿ ಫುಲೆ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಾಲೆ ಮತ್ತು ಸಮುದಾಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಶಾಲೆಯ ಪ್ರಗತಿಯಲ್ಲಿ ಸಮುದಾಯದ ಸಹಭಾಗಿತ್ವ ಅತಿ ಅವಶ್ಯಕವಾಗಿದೆ. ಪ್ರತಿಯೊಬ್ಬರೂ ಗ್ರಾಮದ ಶಾಲೆಯ ಅಭಿವೃದ್ಧಿಗೆ ಶ್ರಮಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದ್ದು, ಶಾಲೆಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳು, ಸ್ಮಾರ್ಟ್‌ ಕ್ಲಾಸ್ ಹಾಗೂ ಬೆಂಚುಗಳನ್ನು ನೀಡುವ ಕಾರ್ಯ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ನೀಡಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಉತ್ತಮ ಜೀವನ ರೂಪಿಸಿಕೊಳ್ಳಲು ಅನಕೂಲ ಕಲ್ಪಿಸಿಕೊಡಲಾಗುವುದು ಎಂದರು. ಸರ್ಕಾರದ ಎಲ್ಲ ಯೋಜನೆಗಳನ್ನು ಬಳಕೆ ಮಾಡಿಕೊಂಡು ಶಿಕ್ಷಣವಂತರಾಗಿ ಸದೃಢ ಸಮಾಜ ನಿರ್ಮಾಣ ಮಾಡುವ ಜತೆಗೆ ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಬಿಇಒ ಎನ್. ಶ್ರೀಧರ, ಕ್ಷೇತ್ರ ಸಮನಾಧಿಕಾರಿ ಬಿ.ಆರ್. ತೆವರಿ, ಪೋಷಣ ಅಭಿಯಾನದ ಸಹಾಯಕ ನಿರ್ದೇಶಕ ಎಚ್.ಎಚ್. ಜಾಡರ, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಪ್ಪ ಭರಮಗೌಡ್ರ, ಉಪಾಧ್ಯಕ್ಷೆ ಲಕ್ಷ್ಮೀ ಕನ್ನಮ್ಮನವರ, ಗ್ರಾಪಂ ಉಪಾಧ್ಯಕ್ಷೆ ಪುಷ್ಪಾ ಶಿರಿಗೌಡ್ರ, ಸದಸ್ಯರಾದ ಹೂವನಗೌಡ ನಿಂಗನಗೌಡ್ರ, ಚನ್ನಬಸವ ಸುಣ್ಣದಕೊಪ್ಪ, ದೇವರಾಜ ಅರಳಿ, ಪ್ರಭಾಕರ್ ಹುಲ್ಲಿನಕೊಪ್ಪ, ಪಿ.ಬಿ. ನಿಂಗನಗೌಡ, ಮಂಜು ಶಿವನಕ್ಕನವರ, ವಿಜಯ್ ಹುಲ್ಮನಿ, ಜಯಪ್ಪ ದೂಪದಹಳ್ಳಿ, ಗುರುಶಾಂತಪ್ಪ ಜೋಗಿಹಳ್ಳಿ, ಜಯಪ್ಪ ನಿಂಗನಗೌಡ್ರ, ಲೋಕಪ್ಪ ಭರಮಗೌಡ್ರ ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಬಸವರಾಜ ಕಾಣಿಸೋಗಿ ಸ್ವಾಗತಿಸಿದರು. ಯಶೋದಾ ಪೂಜಾರ ಕಾರ್ಯಕ್ರಮ ನಿರೂಪಿಸಿದರು. ಶ್ವೇತಾ ಭರಮಗೌಡ್ರ ವಂದಿಸಿದರು.