ಉತ್ತರ ಕರ್ನಾಟಕ ಭಾಗದಲ್ಲಿಯೇ ಅದ್ಧೂರಿಯಾಗಿ ನಡೆಯವ ಜಾತ್ರೆಗಳಲ್ಲಿ ಒಂದಾಗಿದ್ದು, ಧಾರವಾಡ ಸೇರಿದಂತೆ ಅನ್ಯ ಜಿಲ್ಲೆಗಳಿಂದ ಸಾವಿರಾರು ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಲಘಟಗಿ:
ಕಲಘಟಗಿಯಲ್ಲಿ ಫೆ. 25ರಿಂದ ಮಾ. 5ರ ವರೆಗೆ ನಡೆಯುವ ಗ್ರಾಮದೇವತೆಯ ಜಾತ್ರೆಗೆ ಆಗಮಿಸುವ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೂಚಿಸಿದರು.ಮಂಗಳವಾರ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಉತ್ತರ ಕರ್ನಾಟಕ ಭಾಗದಲ್ಲಿಯೇ ಅದ್ಧೂರಿಯಾಗಿ ನಡೆಯವ ಜಾತ್ರೆಗಳಲ್ಲಿ ಒಂದಾಗಿದ್ದು, ಧಾರವಾಡ ಸೇರಿದಂತೆ ಅನ್ಯ ಜಿಲ್ಲೆಗಳಿಂದ ಸಾವಿರಾರು ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಭದ್ರತೆಗಾಗಿ ಹೆಚ್ಚು ಪೊಲೀಸ್ ಸಿಬ್ಬಂದಿ ನೇಮಿಸುವುದು, ಸ್ವಚ್ಛತೆಯನ್ನು ಕಾಪಾಡುವ ದೃಷ್ಟಿಯಿಂದ ಹೆಚ್ಚು ಸಂಖ್ಯೆಯಲ್ಲಿ ತಾತ್ಕಾಲಿಕ ಶೌಚಾಲಯಗಳ ನಿರ್ಮಾಣ, ಒಳ ಚರಂಡಿಗಳ ಸ್ವಚ್ಛತೆ, ಸಮರ್ಪಕ ನೀರಿನ ಸರಬರಾಜು, ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸುವ ಜನರಿಗೆ ಸಾರಿಗೆ ವ್ಯವಸ್ಥೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಟ್ಟು ನಿಂತಿರುವ ಬೀದಿದೀಪ ಸರಿಪಡಿಸುವುದು ಸೇರಿದಂತೆ ಅಗತ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದಕ್ಕೂ ಪೂರ್ವದಲ್ಲಿ ಸಚಿವರು ಪಟ್ಟಣದ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಸ್ಥಿತಿ-ಗತಿಗಳನ್ನು ಪರಿಶೀಲಿಸಿದರು. ಇದೇ ವೇಳೆಯಲ್ಲಿ ಸಾರ್ವಜನಿಕರ ಹಲವಾರು ಅಹವಾಲು ಆಲಿಸಿದರು. ಈ ವೇಳೆ ತಾಪಂ ಇಒ ಪಿ.ಐ. ಸಾವಂತ, ಪಪಂ ಮುಖ್ಯಾಧಿಕಾರಿ ಬಿ. ಚಂದಶೇಖರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ, ಬಾಬು ಅಂಚಟಗೇರಿ, ಮಹಾಂತೇಶ ತಹಶೀಲ್ದಾರ, ಕುಮಾರ್ ಖಂಡೇಕರ್, ಸಾಯಿನಾಥ ಯಲ್ಲಾಪುರಕರ, ಗ್ರಾಮದೇವಿ ಜಾತ್ರಾ ಮಹೋತ್ಸವದ ಟ್ರಸ್ಟಿನ ಪದಾಧಿಕಾರಿಗಳು, ಪಪಂ ಸದಸ್ಯರು ಉಪಸ್ಥಿತರಿದ್ದರು.