ಸಮಾಜ ಸ್ವಚ್ಛವಾಗಿರಲು ಪೌರಕಾರ್ಮಿಕರ ಸೇವೆ ಅನನ್ಯ: ಡಾ.ಕುಮಾರ

| Published : Sep 24 2025, 01:00 AM IST

ಸಮಾಜ ಸ್ವಚ್ಛವಾಗಿರಲು ಪೌರಕಾರ್ಮಿಕರ ಸೇವೆ ಅನನ್ಯ: ಡಾ.ಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಪೌರ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳನ್ನು ಸೂಕ್ತವಾಗಿ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿ. ಪೌರ ಕಾರ್ಮಿಕರು ತಮ್ಮ ಕರ್ತವ್ಯ ನಿರ್ವಹಿಸುವ ಜೊತೆಗೆ ಆರೋಗ್ಯದ ಮೇಲೂ ಗಮನ ಹರಿಸಬೇಕು. ಕೆಲಸ ನಿರ್ವಹಿಸುವಾಗ ಸುರಕ್ಷತಾ ಸಮವಸ್ತ್ರ ಹಾಗೂ ಸುರಕ್ಷತಾ ಪರಿಕರ ಧರಿಸಿ ಕಾರ್ಯ ನಿರ್ವಹಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ನಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿರಲು ಅಧಿಕಾರಿಗಳಿಗಿಂತ ಪೌರ ಕಾರ್ಮಿಕರ ಸೇವೆ ಅನನ್ಯವಾದುದ್ದು. ಅವರ ಸೇವೆ ಅಳೆಯಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಗರಸಭೆಯಿಂದ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸರ್ಕಾರ ಪೌರಕಾರ್ಮಿಕರಿಗೆ ಒದಗಿಸಿರುವ ಸೇವೆಗಳು ಹಾಗೂ ಸಂಬಳವನ್ನು ಅವರು ಮಾಡುವ ಸೇವೆಗೆ ಲೆಕ್ಕ ಹಾಕಲು ಸಾಧ್ಯವಿಲ್ಲ. ಪೌರಕಾರ್ಮಿಕರು ನಿಷ್ಕಲ್ಮಶ ಮತ್ತು ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಪೌರ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳನ್ನು ಸೂಕ್ತವಾಗಿ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿ. ಪೌರ ಕಾರ್ಮಿಕರು ತಮ್ಮ ಕರ್ತವ್ಯ ನಿರ್ವಹಿಸುವ ಜೊತೆಗೆ ಆರೋಗ್ಯದ ಮೇಲೂ ಗಮನ ಹರಿಸಬೇಕು. ಕೆಲಸ ನಿರ್ವಹಿಸುವಾಗ ಸುರಕ್ಷತಾ ಸಮವಸ್ತ್ರ ಹಾಗೂ ಸುರಕ್ಷತಾ ಪರಿಕರ ಧರಿಸಿ ಕಾರ್ಯ ನಿರ್ವಹಿಸಬೇಕು. ಸುರಕ್ಷತಾ ಪರಿಕರಗಳನ್ನು ಅಧಿಕಾರಿಗಳಿಂದ ಕೇಳಿ ಪಡೆದು ಕೆಲಸ ಮಾಡವುದು ನಿಮ್ಮ ಹಕ್ಕು ಎಂದರು.

ಅನೇಕ ಪೌರಕಾರ್ಮಿಕರು ತಮ್ಮ ಮಕ್ಕಳ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಪೌರ ಕಾರ್ಮಿಕ ವೃತ್ತಿಯಲ್ಲಿ ಮುಂದುವರಿಯುವಂತೆ ಮಕ್ಕಳ ಮೇಲೆ ಒತ್ತಡ ಹಾಕುತ್ತಾರೆ, ಯಾರು ಸಹ ನಿಮ್ಮ ಮಕ್ಕಳನ್ನು ಮೇಲೆ ಒತ್ತಡ ಏರಬೇಡಿ ಅವರಿಗೆ ಉನ್ನತ ಶಿಕ್ಷಣ ಕೊಡಿಸಿ ಸಮಾಜದ ಮುಖ್ಯವಾಹಿನಿಗೆ ಕರೆತಂದು ಅಧಿಕಾರಿಗಳಾಗಿ ಮಾಡಿ ಎಂದರು.

ಪೌರ ಕಾರ್ಮಿಕರ ಹಿತಾಸಕ್ತಿ ಕಾಪಾಡಲು ಪ್ರತಿ ತಿಂಗಳು ಸಭೆ ನಡೆಸಲಾಗುತ್ತಿದೆ. ಪ್ರತಿಯೊಬ್ಬ ಪೌರಕಾರ್ಮಿಕರು ಆರೋಗ್ಯ ವಿಮೆ ಮಾಡಿಸಿಕೊಳ್ಳಬೇಕು. ಈಗಾಗಲೇ ಅಧಿಕಾರಿಗಳಿಗೆ ಆರೋಗ್ಯ ವಿಮೆ ಮಾಡಿಸಲು, ಅದರೊಂದಿಗೆ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಲು ತಿಳಿಸಲಾಗಿದೆ ಎಂದರು.

32 ಜನ ಪೌರಕಾರ್ಮಿಕರು ಪ್ರಸ್ತುತ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಅವರನ್ನು ನೇರ ಪಾವತಿ ಅಡಿಯಲ್ಲಿ ತರಲು ಸೂಕ್ತ ಕ್ರಮವನ್ನು ಶ್ರೀಘ್ರವಾಗಿ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪೌರ ಕಾರ್ಮಿಕ ಗೃಹ ಭಾಗ್ಯ ಯೋಜನೆಯಡಿ 88 ಮನೆ ನಿರ್ಮಾಣ ಮಾಡಲಾಗಿದೆ. ಇನ್ನೂ 16 ಮನೆಗಳ ಕಾಮಗಾರಿ ಅಂತಿಮ ಹಂತದಲ್ಲಿದೆ. ಪೌರಕಾರ್ಮಿಕರು ಮೃತಪಟ್ಟರೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವ ಕಾರ್ಯವನ್ನು ಶ್ರೀಘ್ರವಾಗಿ ನೀಡುತ್ತೇವೆ ಎಂದರು.

ನಗರಾಭಿವೃದ್ಧಿ ಕೋಶಾಧಿಕಾರಿ ನರಸಿಂಹ ಮೂರ್ತಿ ಮಾತನಾಡಿ, ಪೌರಕಾರ್ಮಿಕರು ತಮಗೆ ಸರ್ಕಾರದಿಂದ ನೀಡಲಾಗುತ್ತಿರುವ ಸೌಲಭ್ಯಗಳ ಕುರಿತು ತಿಳಿದುಕೊಳ್ಳಬೇಕು. ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.

ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ಮಾತನಾಡಿ, ಪೌರಕಾರ್ಮಿಕರು ನಮ್ಮ ಸಮಾಜ ಹಾಗೂ ಪರಿಸರದ ಸ್ವಚ್ಛತೆ ಜೊತೆಗೆ ಆರೋಗ್ಯದ ಮೇಲೆ ಗಮನ ಹರಿಸಬೇಕು ಎಂದರು.

ವಿವಿಧ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಿ, ಪೌರಕಾರ್ಮಿಕರಾಗಿ ಉತ್ತಮ ಸೇವೆ ಸಲ್ಲಿಸಿದವರನ್ನು ಗೌರವಿಸಿ ಸನ್ಮಾನಿಸಲಾಯಿತು. ಇಂಡಿಯಾ ಸ್ವೀಟ್ ಹೌಸ್ ವತಿಯಿಂದ 350 ಪೌರಕಾರ್ಮಿಕರಿಗೆ ಸಿಹಿ ವಿತರಿಸಲಾಯಿತು. ಉನ್ನತ ವ್ಯಾಸಂಗ ಮಾಡುತ್ತಿರುವ ಪೌರಕಾರ್ಮಿಕರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಯಿತು.

ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತೆ ಪಂಪಶ್ರೀ, ಉಪಾಧ್ಯಕ್ಷ ಎಂ.ಪಿ.ಅರುಣ್ ಕುಮಾರ್, ಸದಸ್ಯರಾದ ಶ್ರೀಧರ್, ರವಿ, ರಾಮಲಿಂಗಯ್ಯ, ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು, ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ ನಾಗಣ್ಣಗೌಡ, ಪೌರ ನೌಕರರ ಸಂಘದ ಜಿಲ್ಲಾಧ್ಯಕ್ಷ ಮುತ್ತಾಲಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.