ಕನ್ನಡಪ್ರಭ ವಾರ್ತೆ ಬೆಳಗಾವಿ

ಸ್ವ ಹಿತಾಸಕ್ತಿಯನ್ನು ಬದಿಗಿರಿಸಿ ಪರರ ಆರೋಗ್ಯದ ಕಾಳಜಿ ವಹಿಸುವ ದಾದಿಯರ ಸೇವೆ ನಿಜಕ್ಕೂ ಅತ್ಯಂತ ಶ್ರೇಷ್ಠ ಹಾಗೂ ಪ್ರಶಂಸನೀಯವಾದದ್ದು ಎಂದು ಬೆಳಗಂ ಫೆರೋಕಾಸ್ಟ್ ನಿರ್ದೇಶಕ ಸಚಿನ್ ಸಬನಿಸ್ ಅಭಿಪ್ರಾಯಪಟ್ಟರು.

ನಗರದ ಕೆಎಲ್‌ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವಿಶ್ವ ದಾದಿಯರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಾಯಿ ತನ್ನ ಮಗುವಿನ ಬಗ್ಗೆ ಮಾತ್ರ ಪ್ರೀತಿ ಹಾಗೂ ಕಾಳಜಿ ತೋರುತ್ತಾಳೆ. ಆದರೆ, ಒಬ್ಬ ದಾದಿ ಯಾವುದೇ ರೀತಿಯ ಸಂಬಂಧವಿಲ್ಲದ ಅನಾಮಿಕ ರೋಗಿಯನ್ನು ಸಹ ತನ್ನ ಮಗುವಿನಂತೆಯೇ ಆರೈಕೆ ಮಾಡುತ್ತಾಳೆ. ರೋಗಿಯ ನೋವು, ಆತಂಕ ಮತ್ತು ಸಂಕಷ್ಟವನ್ನು ಅರ್ಥಮಾಡಿಕೊಂಡು ಅವನಿಗೆ ಧೈರ್ಯ ತುಂಬುವ ಕೆಲಸವನ್ನು ದಾದಿಯರು ನಿಸ್ವಾರ್ಥದಿಂದ ನಿರ್ವಹಿಸುತ್ತಾರೆ. ರೋಗಿಯು ಆರೋಗ್ಯ ಹೊಂದಿ ಸಂತಸದ ಜೀವನ ನಡೆಸುವಂತೆ ಮಾಡುವಲ್ಲಿ ದಾದಿಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.

ಯುಎಸ್‌ಎಂ ಕೆಎಲ್‌ಇ ನಿರ್ದೇಶಕ ಡಾ.ಎಚ್.ಬಿ.ರಾಜಶೇಖರ ಮಾತನಾಡಿ, ಆಸ್ಪತ್ರೆಯ ಮೂಲ ಶಕ್ತಿಯೇ ನರ್ಸ್‌ಗಳು. ವೈದ್ಯರು ರೋಗಿಗಳೊಂದಿಗೆ ಕೆಲವೇ ಸಮಯ ಕಳೆಯುವ ಸಂದರ್ಭಗಳಿರುತ್ತವೆ. ಆದರೆ ದಾದಿಯರು ದಿನದ ಬಹುತೇಕ ಸಮಯವನ್ನು ರೋಗಿಗಳ ಜೊತೆಯಲ್ಲೇ ಕಳೆದೂ ಅವರ ಆರೈಕೆ, ಮಾನಸಿಕ ಧೈರ್ಯ ಹಾಗೂ ಭಾವನಾತ್ಮಕ ಬೆಂಬಲದ ಜವಾಬ್ದಾರಿಯನ್ನು ಹೊರುತ್ತಾರೆ. ದಾದಿಯರು ಸದಾ ಮೃದುಭಾಷಿಯಾಗಿ, ಕರುಣೆಯಿಂದ ಹಾಗೂ ಸಹಾನುಭೂತಿಯಿಂದ ವರ್ತಿಸಬೇಕು. ಅವರ ಮಾತುಗಳು ಮತ್ತು ನಗು ಕೂಡ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವ ಶಕ್ತಿಯಾಗಿದೆ ಎಂದರು.ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್.ಎನ್ ಮಾತನಾಡಿ, ಆರೋಗ್ಯ ಸೇವಾ ವ್ಯವಸ್ಥೆಯಲ್ಲಿ ದಾದಿಯರ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಆಸ್ಪತ್ರೆಯ ಸೇವೆಯ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ದಿನದ 24 ಗಂಟೆಗಳ ಕಾಲ ನರ್ಸ್‌ಗಳು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದಾರೆ. ರೋಗಿಗಳ ಆರೈಕೆ, ಔಷಧೋಪಚಾರ, ತುರ್ತು ಸೇವೆ ಹಾಗೂ ಆಸ್ಪತ್ರೆಯ ಶಿಸ್ತು ಕಾಪಾಡುವಲ್ಲಿ ಅವರ ಕೊಡುಗೆ ಅಮೂಲ್ಯವಾಗಿದೆ. ಎಲ್ಲ ನರ್ಸಿಂಗ್ ಸಿಬ್ಬಂದಿ ಹಾಗೂ ಅವರ ಕುಟುಂಬ ಸದಸ್ಯರಿಗೆ ಉತ್ತಮ ಆರೋಗ್ಯ, ಸಂತೋಷ ಮತ್ತು ಸಮೃದ್ಧಿ ಲಭಿಸಲಿ ಎಂದು ಶುಭ ಹಾರೈಸಿದರು.ಅಧ್ಯಕ್ಷತೆ ವಹಿಸಿದ್ದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸಂಜಯ ಕಾಂಬಾರ ಮಾತನಾಡಿ, ನರ್ಸಿಂಗ್ ಸೇವೆ ಅತ್ಯಂತ ಜವಾಬ್ದಾರಿಯುತ ಮತ್ತು ಸೂಕ್ಷ್ಮ ಕರ್ತವ್ಯವಾಗಿದೆ. ತುರ್ತು ಪರಿಸ್ಥಿತಿಗಳಲ್ಲಿ, ಚಿಕಿತ್ಸೆ ಸಂದರ್ಭಗಳಲ್ಲಿ ಹಾಗೂ ರೋಗಿಯ ನಿರಂತರ ಆರೈಕೆಯಲ್ಲಿ ನರ್ಸ್‌ಗಳ ಪಾತ್ರ ಜೀವ ರಕ್ಷಕವಾಗಿದೆ. ರೋಗಿಯ ಆರೋಗ್ಯದಲ್ಲಿ ಉಂಟಾಗುವ ಸಣ್ಣ ಬದಲಾವಣೆಗಳನ್ನೂ ಗಮನಿಸಿ ತಕ್ಷಣ ಸ್ಪಂದಿಸುವ ದಾದಿಯರ ಸೇವೆ ಆಸ್ಪತ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಕಾರ್ಯಕ್ರಮದಲ್ಲಿ ನರ್ಸಿಂಗ್ ಅಧೀಕ್ಷಕಿ ಶರೀಫಾ ಸಯ್ಯದ, ನರ್ಸಿಂಗ್ ಉಪ ಅಧೀಕ್ಷಕಿ ಭಾರತಿ ಲಿಂಗಾಯತ, ಶುಶ್ರೂಷಕ ಸಿಬ್ಬಂದಿ ಸೇರಿದಂತೆ ಆಸ್ಪತ್ರೆಯ 120ಕ್ಕೂ ಅಧಿಕ ದಾದಿಯರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಶಿಲ್ಪಾ ಮತ್ತು ಹನಿ ನಿರೂಪಿಸಿದರು. ಕ್ಷಾಯಿಣಿ ಹಿರೇಮಠ ಸ್ವಾಗತಿಸಿದರು. ಪ್ರಕಾಶ ವಂದಿಸಿದರು.