ಕನ್ನಡಪ್ರಭ ವಾರ್ತೆ ಬೆಳಗಾವಿ

ಮಧುಮೇಹದಿಂದ ಬಳಲುತ್ತಿರುವ 18 ವರ್ಷದೊಳಗಿನ ಅನೇಕ ಮಕ್ಕಳು ಧೈರ್ಯದಿಂದ ಬದುಕನ್ನು ಎದುರಿಸುತ್ತಿದ್ದು, ಇನ್ಸುಲಿನ್ ಅವಲಂಬಿತರಾಗಿದ್ದರೂ ಸಹ ಸಾಮಾನ್ಯ ಮಕ್ಕಳಂತೆ ಶಿಕ್ಷಣ, ಕ್ರೀಡೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದು ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಆಂಡ್ ರಿಸರ್ಚ್‌ನ ಉಪಕುಲಪತಿ ಡಾ.ಸಂದೀಪ ಶ್ರೀವಾತ್ಸವ ತಿಳಿಸಿದರು.

ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಮಧುಮೇಹ ಕೇಂದ್ರದಿಂದ ಗುರುವಾರ ಮಧುಮೇಹಪೀಡಿತ ಮಕ್ಕಳಿಗಾಗಿ ಆಯೋಜಿಸಿದ್ದ 25ನೇ ವಾರ್ಷಿಕ ಉಚಿತ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತ ಇಂದು ಮಧುಮೇಹದ ರಾಜಧಾನಿಯಾಗುತ್ತಿದೆ. ಸರ್ಕಾರದ ಜೊತೆಗೆ ಖಾಸಗಿ ಹಾಗೂ ಸಾಮಾಜಿಕ ಸಂಸ್ಥೆಗಳು ಸಹ ಮಧುಮೇಹಪೀಡಿತ ಮಕ್ಕಳಿಗೆ ಅಗತ್ಯ ಚಿಕಿತ್ಸೆ ಮತ್ತು ಆರೈಕೆ ಒದಗಿಸಲು ಕೈಜೋಡಿಸಬೇಕು. ಕಳೆದ 25 ವರ್ಷಗಳಿಂದ ಮಧುಮೇಹಪೀಡಿತ ಮಕ್ಕಳ ಆರೈಕೆ, ಶಿಕ್ಷಣ ಹಾಗೂ ಅವರ ಭವಿಷ್ಯ ನಿರ್ಮಾಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಮಧುಮೇಹ ತಜ್ಞರಾದ ಡಾ.ಎಂ.ವಿ. ಜಾಲಿ,ಹಾಗೂ ಡಾ.ಸುಜಾತಾ ಜಾಲಿ ದಂಪತಿ ಸೇವೆಯನ್ನು ಅವರು ಶ್ಲಾಘಿಸಿದರು.ಜಾಲಿ ದಂಪತಿ ತಮ್ಮ ಸಮರ್ಪಿತ ತಂಡದೊಂದಿಗೆ ನಿಸ್ವಾರ್ಥ ಸೇವಾಭಾವದಿಂದ ಮಕ್ಕಳ ಆರೋಗ್ಯ ಮತ್ತು ಭವಿಷ್ಯ ರೂಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇದು ಕೇವಲ ವೈದ್ಯಕೀಯ ಸೇವೆಯಲ್ಲ, ಮಾನವೀಯತೆಯ ಮಹತ್ತರ ಉದಾಹರಣೆ. ಇಂತಹ ಮಾದರಿ ಸಂಸ್ಥೆಗಳು ದೇಶಾದ್ಯಂತ ಕಾರ್ಯನಿರ್ವಹಿಸಬೇಕು. ಮಧುಮೇಹ ಇರುವ ಮಕ್ಕಳು ಸಾಮಾನ್ಯ ಮಕ್ಕಳಿಗಿಂತ ಹೆಚ್ಚು ಜವಾಬ್ದಾರಿಯುತರು ಹಾಗೂ ಚತುರರಾಗುತ್ತಾರೆ. ಆಹಾರ ನಿಯಂತ್ರಣ, ಕ್ಯಾಲೋರಿಗಳ ಲೆಕ್ಕಾಚಾರ ಹಾಗೂ ಜೀವನಶೈಲಿಯ ಶಿಸ್ತನ್ನು ಬಾಲ್ಯದಲ್ಲಿಯೇ ಕಲಿಯುವುದರಿಂದ ಅವರು ಆತ್ಮವಿಶ್ವಾಸಿ ಹಾಗೂ ಸಹನಶೀಲರಾಗುತ್ತಾರೆ ಎಂದರು.ಮಕ್ಕಳ ಆರೈಕೆಯಲ್ಲಿ ತೊಡಗಿರುವ ಪೋಷಕರ ಸಹನಶೀಲತೆ, ತ್ಯಾಗ ಹಾಗೂ ಪ್ರೀತಿ ನಿಜಕ್ಕೂ ಅನನ್ಯ. ಕೋವಿಡ್‌ನಂತಹ ಸಂಕಷ್ಟದ ಸಂದರ್ಭದಲ್ಲಿಯೂ ಸಾವಿರಕ್ಕೂ ಹೆಚ್ಚು ಮಕ್ಕಳ ಆರೈಕೆಯನ್ನು ಸಮರ್ಪಕವಾಗಿ ನಿರ್ವಹಿಸಿರುವುದು ಅಪರೂಪದ ಸಾಧನೆ ಆಗಿದೆ. ಸ್ವಾಮಿ ವಿವೇಕಾನಂದರ ಸೇವಾತತ್ವಗಳನ್ನು ಅಳವಡಿಸಿಕೊಂಡಂತೆ ಈ ಸಂಸ್ಥೆ ನಿಜಾರ್ಥದಲ್ಲಿ ಮಾನವಸೇವೆಯನ್ನು ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಚಿಕ್ಕ ಮಕ್ಕಳ ಮಧುಮೇಹ ತಜ್ಞ ವೈದ್ಯೆ ಡಾ.ಸುಜಾತಾ ಜಾಲಿ ಮಾತನಾಡಿ, ನಮ್ಮ ಕೇಂದ್ರದಲ್ಲಿ ಸುಮಾರು 625 ಮಕ್ಕಳು ನಿರಂತರ ಚಿಕಿತ್ಸೆ ಮತ್ತು ಮಾರ್ಗದರ್ಶನ ಪಡೆಯುತ್ತಿದ್ದಾರೆ. ಮಧುಮೇಹ ಇದ್ದರೂ ಸಹ ಸಾಮಾನ್ಯ ಜೀವನ ನಡೆಸಬಹುದು, ಮದುವೆಯಾಗಬಹುದು ಹಾಗೂ ಉನ್ನತ ಸಾಧನೆ ಮಾಡಬಹುದು ಎಂಬ ಆತ್ಮವಿಶ್ವಾಸವನ್ನು ಮಕ್ಕಳಲ್ಲಿ ಬೆಳೆಸಲಾಗುತ್ತಿದೆ. ದೇಶದ ವಿವಿಧ ಭಾಗಗಳಿಂದ ಮಕ್ಕಳು ಚಿಕಿತ್ಸೆಗೆ ಆಗಮಿಸುತ್ತಿದ್ದು, 10 ತಿಂಗಳೊಳಗಿನ ಮಧುಮೇಹಪೀಡಿತ ಶಿಶುಗಳಿಗೂ ವಿಶೇಷ ಕಾಳಜಿ ವಹಿಸಲಾಗುತ್ತಿದೆ ಎಂದು ತಿಳಿಸಿದರು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ದಯಾನಂದ ಮಾತನಾಡಿ, ಮಧುಮೇಹ ತಪಾಸಣೆ ಮತ್ತು ಚಿಕಿತ್ಸಾ ಯೋಜನೆಗಳನ್ನು ಇನ್ನಷ್ಟು ವಿಸ್ತರಿಸಿ ಪ್ರತಿಯೊಬ್ಬ ಮಕ್ಕಳಿಗೂ ಚಿಕಿತ್ಸೆ ತಲುಪಿಸುವ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಹೆರದ ಕುಲಸಚಿವ ಡಾ.ವಿ.ಎಂ.ಪಟ್ಟಣಶೆಟ್ಟಿ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ರಾಜೇಶ ಪವಾರ ಮಾತನಾಡಿದರು. ಡಾ.ಆರ್.ಎಸ್.ಮುಧೋಳ, ಡಾ.ಹರಿವಿಟ್ಟಲ ಪಾಟೀಲ, ಡಾ.ರಾಜೇಂದ್ರ ದೇಗಿನಾಳ, ಆರತಿ ಸಂಕೇಶ್ವರಿ ಹಾಗೂ ವೆಲೆಟ್ ಫರ್ನಾಂಡಿಸ್ ಉಪಸ್ಥಿತರಿದ್ದರು. ಡಾ.ನಂದಿತಾ ಕಾರ್ಯಕ್ರಮ ನಿರೂಪಿಸಿದರು. ಡಾ.ಜ್ಯೋತಿ ವಾಸೇದಾರ ವಂದಿಸಿದರು.