ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಮಹಾತೇಶ್ ಬಿಳೂರ್ ಹೇಳಿಕೆಕನ್ನಡಪ್ರಭ ವಾರ್ತೆ ಹಿರಿಯೂರು
ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ಗ್ರಾಮದ ಸರ್ಕಾರಿ ಶಾಲೆಯನ್ನು ಮುಚ್ಚುವುದರ ವಿರುದ್ಧ ಕಕ್ಕಯ್ಯನಹಟ್ಟಿ ಗ್ರಾಮಸ್ಥರು, ಪೋಷಕರು, ವಿದ್ಯಾರ್ಥಿಗಳು ಹಾಗೂ ಎಐಡಿಎಸ್‌ಒ ಸದಸ್ಯರು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ನೇತೃತ್ವದಡಿ ಶಾಲೆ ಎದುರಿಗೆ ನಮ್ಮೂರ ಶಾಲೆ ನಮ್ಮಯ ಕಣ್ಮಣಿ ಎಂಬ ಬ್ಯಾನರ್ ಹಿಡಿದು ಸರ್ಕಾರದ ಯೋಜನೆ ವಿರುದ್ಧ ಪ್ರತಿಭಟನೆ ನಡೆಸಿದರು.ಪ್ರತಿಭಟನೆ ಉದ್ದೇಶಿಸಿ ಎಐಡಿಎಸ್‌ಒ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ್ ಬಿಳೂರ್ ಮಾತನಾಡಿ, ಬಡಜನರ ಮಕ್ಕಳಿಗೆ ಶಿಕ್ಷಣವನ್ನು ಖಾತ್ರಿ ಪಡಿಸಬೇಕಿದ್ದ ಸರ್ಕಾರವೇ ಶಿಕ್ಷಣದ ವ್ಯಾಪಾರಕ್ಕೆ ನಿಂತಿದೆ. ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಹಳ್ಳಿಯ ಶಾಲೆಗಳನ್ನು ಮುಚ್ಚುತ್ತಿದೆ. ಕೆಪಿಎಸ್ ಶಾಲೆಗಳ ಮೇಲುಸ್ತುವಾರಿಯನ್ನು ಹೊರಗುತ್ತಿಗೆ ಕೊಡುವುದರ ಮೂಲಕ ಸಾರ್ವಜನಿಕ ಶಿಕ್ಷಣವನ್ನು ಹಂತ-ಹಂತವಾಗಿ ಖಾಸಗಿ ಕಂಪನಿಗಳಿಗೆ ಧಾರೆಯೆರೆಯುವ ಹುನ್ನಾರ ಮಾಡಲಾಗಿದೆ. ಈಶ್ವರಚಂದ್ರ ವಿದ್ಯಾಸಾಗರ್, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಕುದ್ಮುಲ್ ರಂಗರಾವ್ ಮುಂತಾದವರ ಹೋರಾಟದಿಂದ ಇಂದು ನಮ್ಮ ನಾಡಿನ ಎಲ್ಲ ಮಕ್ಕಳಿಗೆ ಶಿಕ್ಷಣ ದೊರೆಯುತ್ತಿದೆ. ಈ ಮಹನೀಯರಿಗೆ ಅವಮಾನ ಮಾಡಿ ಸರ್ಕಾರವು ಶಾಲೆಗಳನ್ನು ಮುಚ್ಚುತ್ತಿದೆ. ಇಂತಹ ಶಾಲೆಗಳನ್ನು ಮುಚ್ಚುವುದು ಬಡಮಕ್ಕಳ ಭವಿಷ್ಯವನ್ನಷ್ಟೇ ಅಲ್ಲದೇ ಹಳ್ಳಿಗಳನ್ನೇ ಕತ್ತಲೆಗೆ ದೂಡಿದಂತಾಗುತ್ತದೆ. ಸರ್ಕಾರದ ಈ ನೀತಿಯು ಜನವಿರೋಧಿಯಾಗಿದೆ. ರಾಮನಗರ ಮತ್ತು ಅರಸೀಕೆರೆ ತಾಲೂಕುಗಳಲ್ಲಿ ಶಾಲೆ ಮುಚ್ಚಲು ಊರಿನ ಜನರಿಗೆ ಮೋಸ ಮಾಡಿ ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿಸಲಾಗಿದೆ.
ಈ ಕುರಿತು ಗ್ರಾಮಸ್ಥರು ಎಚ್ಚರವಾಗಿರಬೇಕು. ಸರ್ಕಾರದ ಮೋಸಗಳಿಗೆ ಬಲಿಯಾಗದೇ ಊರಿನ ಶಾಲೆ ಉಳಿಸಲು ಹೋರಾಡಬೇಕು ಎಂದು ಕರೆ ನೀಡಿದರು.ಪೋಷಕರಾದ ತಿಮ್ಮಕ್ಕ ಮಾತನಾಡಿ, ನಾವು ಕೂಲಿ ಮಾಡಿ ಬದುಕುವ ಬಡಜನ. ಈಗಾಗಲೇ ನಮ್ಮೂರಿಗೆ ಬಸ್ ಇಲ್ಲ. ಬೆಳಗ್ಗೆ ನಾವು ಕೂಲಿ ಹೋದರೆ ಬರುವುದೇ ಸಂಜೆ ಮೇಲೆ. ಮಾರಿಕಣಿವೆ ನಮ್ಮ ಊರಿಂದ 5 ಕಿಮೀ ದೂರ ಇದೆ. ಎಷ್ಟೇ ಮಕ್ಕಳಿದ್ದರೂ ನಮ್ಮೂರಲ್ಲೇ ನಮ್ಮ ಮಕ್ಕಳಿಗೆ ಶಾಲೆ ಕಲಿಸಬೇಕು. ದುಡಿಯೋದು ಬಿಟ್ಟು ಮಕ್ಕಳನ್ನು ಶಾಲೆಗೆ ಕಳಿಸಿಬರಲು ಸಾಧ್ಯವಿಲ್ಲ. ಯಾವ ಕಾರಣಕ್ಕೂ, ಯಾರು ಬಂದ್ರೂ ನಾವು ಊರಿನ ಶಾಲೆ ಬಾಗಿಲು ಹಾಕಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಜಯಣ್ಣ ಮಾತನಾಡಿ, ನಮ್ಮ ಊರಿನ ಜನರೆಲ್ಲ ರೈತರು ಮತ್ತು ಕೂಲಿಕಾರರು. ಮಾರಿಕಣಿವೆ ಇಲ್ಲಿಂದ ದೂರ ಆಗುತ್ತದೆ. ಕೆಪಿಎಸ್ ಯೋಜನೆ ನಮಗೆ ಬೇಡ. ನಮ್ಮೂರ ಶಾಲೆ ನಮ್ಮ ಆಸ್ತಿ. ಸರ್ಕಾರ ಏನೇ ಸೌಲಭ್ಯ ಒದಗಿಸುವುದಿದ್ದರೂ ನಮ್ಮೂರ ಶಾಲೆಗೇ ಒದಗಿಸಲಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿವಿಪುರ ಪಂಚಾಯಿತಿ ಮಾಜಿ ಸದಸ್ಯರಾದ ಕಣುಮಪ್ಪ, ಕೆಂಚಪ್ಪ, ಕಿರಣಗೌಡ, ತಿಮ್ಮಕ್ಕ, ಸುಜಾತಾ, ಶಿವಲಿಂಗಮ್ಮ ಸೇರಿದಂತೆ ಪೋಷಕರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಹಾಜರಿದ್ದರು.