ಪರಿಹಾರದ ಮೊತ್ತ ನೀಡದ್ದಕ್ಕೆ ಸಾರಿಗೆ ಸಂಸ್ಥೆ ಬಸ್ ವಶಕ್ಕೆ

| Published : Mar 08 2024, 01:50 AM IST

ಪರಿಹಾರದ ಮೊತ್ತ ನೀಡದ್ದಕ್ಕೆ ಸಾರಿಗೆ ಸಂಸ್ಥೆ ಬಸ್ ವಶಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಅಪಘಾತ ಪರಿಹಾರದ ಮೊತ್ತದ ಪೈಕಿ ₹೩ ಲಕ್ಷವನ್ನು ಸಾರಿಗೆ ಸಂಸ್ಥೆ ಅಧಿಕಾರಿಗಳು ನ್ಯಾಯಾಲಯಕ್ಕೆ ಠೇವಣಿ ಮಾಡಿ, ಉಳಿದ ಮೊತ್ತ ನೀಡಲು ಸಮಯಾವಕಾಶ ಕೇಳಿದ್ದರಿಂದ ಬಸ್‌ ಅನ್ನು ಬಿಡುಗಡೆ ಮಾಡಲಾಗಿದೆ.

ಕೂಡ್ಲಿಗಿ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಬಳಿ ೨೦೧೮ರಲ್ಲಿ ನಡೆದ ಕಾರು ಅಪಘಾತದಲ್ಲಿ ಬಲಗೈ ಕಳೆದುಕೊಂಡಿದ್ದ ವ್ಯಕ್ತಿಗೆ ಪರಿಹಾರದ ಮೊತ್ತ ನೀಡದ ಹಿನ್ನೆಲೆ ಹೊಸಪೇಟೆ ವಿಭಾಗದ ಬೆಂಗಳೂರಿನಿಂದ ಹೊಸಪೇಟೆಗೆ ಪ್ರಯಾಣಿಕರನ್ನು ಒಯ್ಯುತ್ತಿದ್ದ ಸಾರಿಗೆ ಸಂಸ್ಥೆ ಬಸ್‌ನ್ನು ಕೂಡ್ಲಿಗಿ ಹಿರಿಯ ಸಿವಿಲ್ ನ್ಯಾಯಾಲಯವು ಗುರುವಾರ ವಶಕ್ಕೆ ಪಡೆದಿದೆ.ತಾಲೂಕಿನ ಜುಮ್ಮೋಬನಹಳ್ಳಿಯ ಜಾಜೂರು ಮಂಜುನಾಥ ಎಂಬವರ ಕಾರಿಗೆ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ಘಟಕದ ಸಾರಿಗೆ ಸಂಸ್ಥೆ ಬಸ್ ೨೦೧೮ರ ಮಾ. ೨೪ರಂದು ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಮಂಜುನಾಥ ಅವರು ಬಲಗೈಯನ್ನು ಕಳೆದುಕೊಂಡಿದ್ದರು. ನಂತರ ಪ್ರಕರಣದ ಪರಿಹಾರಕ್ಕಾಗಿ ಕೂಡ್ಲಿಗಿ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಕೇಸ್ ದಾಖಲಾಗಿತ್ತು. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ನ್ಯಾಯಾಲಯಕ್ಕೆ ಪರಿಹಾರದ ಮೊತ್ತ ಠೇವಣಿ ಮಾಡಲು ವಿಳಂಬ ಮಾಡಿತ್ತು. ನಂತರ ಕೆಕೆಆರ್‌ಟಿಸಿ ಅಧಿಕಾರಿಗಳಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದರೂ ಪರಿಹಾರದ ಮೊತ್ತವನ್ನು ಜಮೆ ಮಾಡಿರಲಿಲ್ಲ. ಹಾಗಾಗಿ ಸಾರಿಗೆ ಸಂಸ್ಥೆ ಬಸ್ಅನ್ನು ವಶಕ್ಕೆ ಪಡೆಯಲು ನ್ಯಾಯಾಲಯ ಆದೇಶಿಸಿತ್ತು. ಅದರನ್ವಯ, ಅರ್ಜಿದಾರರ ಪರಿಹಾರಕ್ಕಾಗಿ ಹೊಸಪೇಟೆ ವಿಭಾಗಕ್ಕೆ ಸೇರಿದ್ದ ಕೆಎ ೩೫ ಎಫ್ ೦೪೫೫ ನಂಬರಿನ ಸಾರಿಗೆ ಸಂಸ್ಥೆಯ ಬಸ್ಅನ್ನು ಕೋರ್ಟ್ ಸಿಬ್ಬಂದಿಯು ಕೂಡ್ಲಿಗಿ ಬಸ್ ನಿಲ್ದಾಣದಲ್ಲಿ ವಶಕ್ಕೆ ಪಡೆದು ನ್ಯಾಯಾಲಯದ ಬಳಿ ನಿಲ್ಲಿಸಿದ್ದಾರೆ. ಬೆಂಗಳೂರಿನಿಂದ ಪ್ರಯಾಣಿಕರನ್ನು ಹೊತ್ತು ಹೊಸಪೇಟೆ ಕಡೆ ಹೋಗುವಾಗ ವಶಕ್ಕೆ ಪಡೆದಿದ್ದರಿಂದ ಪ್ರಯಾಣಿಕರು ಬೇರೆ ಬಸ್ ನಲ್ಲಿ ತೆರಳಿದ್ದಾರೆ. ಬಸ್ ವಶಕ್ಕೆ ಪಡೆದ ನಂತರ ನ್ಯಾಯಾಲಯಕ್ಕೆ ಹಾಜರಾಗಿದ್ದ ಕೆಕೆಆರ್‌ಟಿಸಿ ಅಧಿಕಾರಿಗಳಿಗೆ ನ್ಯಾಯಮೂರ್ತಿ ಯೋಗೇಶ್ ಜೆ. ಅವರು ಪರಿಹಾರದ ಮೊತ್ತ ನೀಡದೆ ನಿರ್ಲಕ್ಷ್ಯ ವಹಿಸುತ್ತಿರುವುದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ. ಕೊನೆಗೆ, ಅಪಘಾತ ಪರಿಹಾರದ ಮೊತ್ತದ ಪೈಕಿ ₹೩ ಲಕ್ಷವನ್ನು ಸಾರಿಗೆ ಸಂಸ್ಥೆ ಅಧಿಕಾರಿಗಳು ನ್ಯಾಯಾಲಯಕ್ಕೆ ಠೇವಣಿ ಮಾಡಿ, ಉಳಿದ ಮೊತ್ತ ನೀಡಲು ಸಮಯಾವಕಾಶ ಕೇಳಿದ್ದರಿಂದ ಬಸ್‌ ಅನ್ನು ಬಿಡುಗಡೆ ಮಾಡಲಾಗಿದೆ. ಅರ್ಜಿದಾರರ ಪರವಾಗಿ ವಕೀಲರಾದ ಬಿ.ಟಿ. ಮಹಾಬಲೇಶ್ವರಪ್ಪ ಹಾಗೂ ಎ. ಮಾರಪ್ಪ, ಕೆಕೆಆರ್‌ಟಿಸಿ ಪರವಾಗಿ ವಕೀಲೆ ಸಾವಿತ್ರಿ ವಾದ ಮಂಡಿಸಿದ್ದಾರೆ.