ಮಾನವ ಎಷ್ಟು ಸೂಕ್ಷ್ಮತೆಯೋ ಅದೇ ರೀತಿ ಪರಿಸರವೂ ಕೂಡ ಅಷ್ಟೇ ಸೂಕ್ಷ್ಮತೆಯನ್ನು ಹೊಂದಿದೆ. ಮಾನವನಿಗೆ ಉಸಿರಾಟ ತೊಂದರೆಯಾದಾಗ ಸಾವು ಸಂಭವಿಸುತ್ತದೆ. ಈಗಾಗಲೇ ಪ್ಲಾಸ್ಟಿಕ್ ಹೆಚ್ಚಳದ ಮೂಲಕ ಉಸಿರುಗಟ್ಟುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಹೇಳಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಮಾನವ ಎಷ್ಟು ಸೂಕ್ಷ್ಮತೆಯೋ ಅದೇ ರೀತಿ ಪರಿಸರವೂ ಕೂಡ ಅಷ್ಟೇ ಸೂಕ್ಷ್ಮತೆಯನ್ನು ಹೊಂದಿದೆ. ಮಾನವನಿಗೆ ಉಸಿರಾಟ ತೊಂದರೆಯಾದಾಗ ಸಾವು ಸಂಭವಿಸುತ್ತದೆ. ಈಗಾಗಲೇ ಪ್ಲಾಸ್ಟಿಕ್ ಹೆಚ್ಚಳದ ಮೂಲಕ ಉಸಿರುಗಟ್ಟುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಹೇಳಿದರು.ನಗರದ ನಿಟುವಳ್ಳಿ ರಾಷ್ಟ್ರೋತ್ಥಾನ ಶಾಲಾ ಆವರಣದಲ್ಲಿ ಮಂಗಳವಾರ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕ ವರ್ಗದವರಿಗೆ ಜಾಗೃತಿ ಮೂಡಿಸುವ ವಿಶೇಷ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಆದರೆ ಅದನ್ನು ವೈಜ್ಞಾನಿಕ, ಸಮರ್ಪಕವಾದ ರೀತಿಯಲ್ಲಿ ನಿರ್ವಹಣೆ ಮಾಡಿದಲ್ಲಿ ಪರಿಸರಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯುಂಟುಗುವುದಿಲ್ಲ. ಆದರೆ ಕೆಲವರು ಇದೆಲ್ಲ ಗೊತ್ತಿದ್ದು ಸಹ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ. ಜಿಲ್ಲೆಯ ಹೃದಯ ಭಾಗದಲ್ಲಿಯೇ ಸುಮಾರು 1 ಲಕ್ಷ ಗಿಳಿ, 10 ರಿಂದ 15 ಸಾವಿರ ಬಾವಲಿಗಳು ಅವಸ್ಥಾನವಾಗಿವೆ. ಆದರೆ ಪರಿಸರ ಮಾಲಿನ್ಯ, ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯದಿಂದ ಅವುಗಳ ಸಂತತಿ ಕ್ಷೀಣಿಸುತ್ತಿದೆ ಎಂದರು.ದೇಶವು ನೈಸರ್ಗಿಕವಾಗಿ ಸಮೃದ್ಧವಾಗಿ ಇರಬೇಕಾದರೆ ಶೇಕಡ 33ರಷ್ಟು ಅರಣ್ಯ ಹೊಂದಿರಬೇಕು. ಪ್ರಸ್ತುತ ಅರಣ್ಯ ಪ್ರದೇಶ ಕಡಿಮೆ ಇದೆ. ಸಮುದ್ರದಲ್ಲಿ ಶೇಕಡಾ 70ರಷ್ಟು ಅರಣ್ಯ ಹೊಂದಿದ್ದು, ಹೆಚ್ಚು ಆಮ್ಲಜನಕ ಹೊರಸೂಸುತ್ತದೆ. ಪ್ಲಾಸ್ಟಿಕ್‌ನ್ನು ಎಲ್ಲೆಂದರಲ್ಲಿ ಬಳಸಿ ಬಿಸಾಡುವುದರಿಂದ ನದಿ ಮೂಲಗಳಿಂದ ಸಮುದ್ರ ಸೇರುತ್ತಿದೆ. ಇದರಿಂದ ಜಲ ಮೂಲ ಕಲುಷಿತಗೊಳ್ಳುವುದಲ್ಲದೇ ಜಲಚರ ಪ್ರಾಣಿಗಳ ಜೀವಕ್ಕೂ ಕುತ್ತು ತರುತ್ತಿದೆ ಎಂದರು.
ಡಿಡಿಪಿಐ ಕೊಟ್ರೇಶ್, ಸಿಆರ್‌ಪಿ ತೀರ್ಥಾಚಾರ್ಯ, ರಾಷ್ಟ್ರೋತ್ಥಾನ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಜಯಣ್ಣ, ಪ್ರಾಂಶುಪಾಲರಾದ ಸುಗುಣ, ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.