ದಾವಣಗೆರೆ ದಕ್ಷಿಣ ಉಪಚುನಾವಣೆಗೆ ಸಂಬಂಧಿಸಿದಂತೆ ನನ್ನ ಮೇಲೆ ಕ್ರಮವಾಗುತ್ತದೆ ಎಂಬ ವದಂತಿ ಹರಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಈಗಾಗಲೇ ಚರ್ಚಿಸಿದ್ದು, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿಯಾಗಿ ಮಾತನಾಡುತ್ತೇನೆ- ಜಮೀರ್ ಅಹಮದ್
ಬೆಂಗಳೂರು: ದಾವಣಗೆರೆ ದಕ್ಷಿಣ ಉಪಚುನಾವಣೆಗೆ ಸಂಬಂಧಿಸಿದಂತೆ ನನ್ನ ಮೇಲೆ ಕ್ರಮವಾಗುತ್ತದೆ ಎಂಬ ವದಂತಿ ಹರಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಈಗಾಗಲೇ ಚರ್ಚಿಸಿದ್ದು, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಗುರುವಾರ ಭೇಟಿಯಾಗಿ ಮಾತನಾಡುತ್ತೇನೆ ಎಂದು ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಅಬ್ದುಲ್ ಜಬ್ಬಾರ್ ಹಾಗೂ ನಜೀರ್ ಅಹಮದ್ ವಿರುದ್ಧ ಕ್ರಮದ ನಂತರ ಜಮೀರ್ ಅಹಮದ್ ಖಾನ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ವದಂತಿಗೆ ಸಂಬಂಧಿಸಿದಂತೆ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ನಾನು ಬಹಳ ಸಣ್ಣವನು. ನಾನು ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ. ಯಾರೂ ಕೂಡ ನನ್ನ ಹೆಸರು ಹೇಳಿ ಆರೋಪವನ್ನೂ ಮಾಡಿಲ್ಲ. ರಾಜಕಾರಣಕ್ಕೆ ಬಂದ ಮೇಲೆ ಯಾರೂ ಜಾತಿ ಮಾಡಬಾರದು. ಜಾತಿ ಎಲ್ಲವೂ ಮನೆಯಲ್ಲಿರಬೇಕು. ರಾಜಕಾರಣದಲ್ಲಿ ಜಾತಿ ಮಾಡಿದರೆ ಹುಳ ಬಿದ್ದು ಸಾಯುತ್ತಾರೆ. ನನ್ನದು ಬಡವರ ಜಾತಿ ಮಾತ್ರ ಎಂದರು.
ನಾನು ಹಣೆಬರಹವನ್ನು ನಂಬಿದ್ದು, ಅದನ್ನು ದೇವರು ಬರೆದಿದ್ದಾನೆ.
ನಾನು ಹಣೆಬರಹವನ್ನು ನಂಬಿದ್ದು, ಅದನ್ನು ದೇವರು ಬರೆದಿದ್ದಾನೆ. ನನಗೆ ಈಗಾಗಲೇ 62 ವರ್ಷವಾಯಿತು. ರಾಜಕಾರಣದಲ್ಲಿ ಯಾರೂ ಗೂಟ ಹೊಡೆದುಕೊಂಡು ಇರುವುದಿಲ್ಲ. ಯುವಕರು ಬೆಳೆದರೆ ನನಗೂ ಖುಷಿ. ನಾನು ದೆಹಲಿಗೆ ಹೋಗುವುದಿಲ್ಲ, ಹೈಕಮಾಂಡ್ ನಾಯಕರನ್ನು ಭೇಟಿಯಾಗುವುದಿಲ್ಲ. ಮುಖ್ಯಮಂತ್ರಿ ಅವರನ್ನು ಈಗಾಗಲೇ ಭೇಟಿಯಾಗಿದ್ದು, ಡಿ.ಕೆ. ಶಿವಕುಮಾರ್ ಅವರನ್ನು ಗುರುವಾರ ಭೇಟಿಯಾಗಿ ಚರ್ಚಿಸುತ್ತೇನೆ ಎಂದು ತಿಳಿಸಿದರು.
ದಾವಣಗೆರೆ ಚುನಾವಣೆ ವೇಳೆ ನಾನು ಕೇರಳದಲ್ಲಿದ್ದೆ. ನಾನು ಕೇರಳಕ್ಕೆ ಮೋಜು- ಮಸ್ತಿ ಮಾಡಲು, ಕಳ್ಳಾಟ ಆಡಲು ಹೋಗಿರಲಿಲ್ಲ. ಪಕ್ಷದ ಕೆಲಸ ಮಾಡಲು ಹೋಗಿದ್ದೆನೆ. ನಾನು ಮೊಬೈಲ್ ಸ್ವಿಚ್‌ಆಫ್ ಮಾಡಿ ಮಜಾ ಮಾಡಲು ಹೋಗಿದ್ದರೆ ತಪ್ಪು. ಹಗಲು-ರಾತ್ರಿ ಎನ್ನದೆ ಕೇರಳದಲ್ಲಿ ಕೆಲಸ ಮಾಡಿದ್ದೇನೆ. ದಿನಕ್ಕೆ 350 ಕಿ.ಮೀ. ಪ್ರಯಾಣ ಮಾಡಿ ಚುನಾವಣಾ ಪ್ರಚಾರ ಮಾಡಿದ್ದೇನೆ. ಹೈಕಮಾಂಡ್ ನೀಡಿದ ಕೆಲಸ ಮಾಡಿದ್ದೇನೆ. ಏ. 7ರವರೆಗೆ ಕೇರಳದಲ್ಲಿ ಇರಲು ಹೇಳಿದ್ದರು. ಮುಖ್ಯಮಂತ್ರಿ ಅವರೇ ಕರೆ ಮಾಡಿ ಪ್ರಚಾರ ಮಾಡುವಂತೆ ತಿಳಿಸಿದ್ದಕ್ಕೆ, ಬಾಗಲಕೋಟೆಗೆ ಹೋದೆ. ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೂ ಹೋಗಿದ್ದೆ. ಕರೆದರೆ ಮತ್ತೆ ಪ್ರಚಾರಕ್ಕೆ ಹೋಗುತ್ತಿದ್ದೆ ಎಂದು ತಿಳಿಸಿದರು.
ನಜೀರ್ ಅಹ್ಮದ್ ಮನೆಗೆ ಜಮೀರ್‌ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ವಜಾಗೊಂಡಿರುವ ವಿಧಾನಪರಿಷತ್ ಸದಸ್ಯ ನಜೀರ್ ಅಹ್ಮದ್ ಅವರನ್ನು ಜಮೀರ್ ಅಹಮದ್ ಖಾನ್ ಬುಧವಾರ ಭೇಟಿಯಾಗಿ ಚರ್ಚೆ ನಡೆಸಿದರು.
ಸರ್ಕಾರಿ ನಿವಾಸದಲ್ಲಿ ಭೇಟಿಯಾದ ಜಮೀರ್
ಜಯಮಹಲ್‌ನಲ್ಲಿರುವ ನಜೀರ್ ಅಹ್ಮದ್ ಅವರ ಸರ್ಕಾರಿ ನಿವಾಸದಲ್ಲಿ ಭೇಟಿಯಾದ ಜಮೀರ್ ಅಹಮದ್ ಖಾನ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ತಾವು ನಡೆಸಿದ ಮಾತುಕತೆ ವಿವರನ್ನು ಹಂಚಿಕೊಂಡರು.
ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್, ನಜೀರ್ ಅಹ್ಮದ್ ಪಕ್ಷದ ಹಿರಿಯ ನಾಯಕರು. ಅವರನ್ನು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ವಜಾ ಮಾಡಿದ್ದರಿಂದ ನನಗೂ ನೋವಾಗಿದೆ. ಹೀಗಾಗಿ ಅವರನ್ನು ಭೇಟಿಯಾಗಿ ಸಮಾಧಾನ ಮಾಡುವ ಕೆಲಸ ಮಾಡಿದ್ದೇನೆ ಎಂದರು.
