ಕನ್ನಡಪ್ರಭ ವಾರ್ತೆ ಬೆಂಗಳೂರು

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಉಪಚುನಾವಣೆ ವೇಳೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪ ಹಿನ್ನೆಲೆಯಲ್ಲಿ ವಿಧಾನಪರಿಷತ್‌ ಸದಸ್ಯ ಕೆ. ಅಬ್ದುಲ್‌ ಜಬ್ಬಾರ್‌ ಅವರ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವವನ್ನು ಅಮಾನತು ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆದೇಶಿಸಿದ್ದಾರೆ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಅಬ್ದುಲ್‌ ಜಬ್ಬಾರ್‌ ಪಕ್ಷದ ಅಭ್ಯರ್ಥಿ ವಿರುದ್ಧವಾಗಿ ಕೆಲಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆ ಹಿನ್ನೆಲೆಯಲ್ಲಿ ಹೈಕಮಾಂಡ್‌ ಸೂಚನೆ ಮೇರೆಗೆ ಕೆಲ ದಿನಗಳ ಹಿಂದಷ್ಟೇ ರಾಜ್ಯ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್‌ ಜಬ್ಬಾರ್‌ ರಾಜೀನಾಮೆ ನೀಡಿದ್ದರು. ಅದರ ಬೆನ್ನಲ್ಲೇ ಇದೀಗ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವದಿಂದಲೇ ಅಮಾನತು ಮಾಡಿ ಆದೇಶಿಸಲಾಗಿದೆ.

ಪಕ್ಷದಿಂದ ಅಮಾನತಾದರೂ ಅಬ್ದುಲ್‌ ಜಬ್ಬಾರ್‌ ಅವರ ವಿಧಾನಪರಿಷತ್‌ ಸದಸ್ಯ ಸ್ಥಾನದ ಅವಧಿ 2028ರ ಜೂನ್‌ 13ರವರೆಗಿದೆ. ಹೀಗಾಗಿ ಅವರು ವಿಧಾನಪರಿಷತ್‌ ಸದಸ್ಯ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.ತಪ್ಪು ತಿಳಿಸದೇ ಅಮಾನತು: ಜಬ್ಬಾರ್‌

ಪಕ್ಷದ ಸದಸ್ಯತ್ವದಿಂದ ತಮ್ಮನ್ನು ಅಮಾನತು ಮಾಡಿರುವ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅಬ್ದುಲ್‌ ಜಬ್ಬಾರ್‌, ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಅಮಾನತು ಮಾಡಿರುವುದು ಅಚ್ಚರಿ ತಂದಿದೆ. ನಾನು ಅಂತಹ ಯಾವ ತಪ್ಪು ಮಾಡಿದ್ದೇನೆ ಎಂಬುದನ್ನು ತಿಳಿಸದೆ ನಮ್ಮ ಪಕ್ಷದವರು ಅಮಾನತು ಮಾಡಿದ್ದಾರೆ. ನನಗೆ ಇನ್ನೂ ಕೆಪಿಸಿಸಿ ಆದೇಶ ಸಿಕ್ಕಿಲ್ಲ. ಅದು ಬಂದ ಮೇಲೆ ಉತ್ತರಿಸುತ್ತೇನೆ. ಆದರೂ, ಪಕ್ಷದಿಂದ ಅಮಾನತು ಮಾಡುವುದನ್ನು ನಿರೀಕ್ಷಿಸಿರಲಿಲ್ಲ ಎಂದರು.


ಪಕ್ಷದಿಂದ ಅಮಾನತು ಮಾಡುವಂತಹ ತಪ್ಪನ್ನು ನಾನು ಮಾಡಿರಲಿಲ್ಲ. ತಪ್ಪು ಮಾಡಿದ್ದರೆ ಒಪ್ಪಿಕೊಳ್ಳುತ್ತಿದೆ. ಇನ್ನು ಪಕ್ಷದಿಂದಲೂ ನನ್ನ ತಪ್ಪನ್ನು ತಿಳಿಸಿ, ಪಕ್ಷದಿಂದ ತೆಗೆಯುತ್ತಿದ್ದೇವೆ ಎಂದು ಹೇಳಿದ್ದರೂ ನಾನು ಒಪ್ಪುತ್ತಿದ್ದೆ. ಇನ್ನು, ನಾನು ಪಕ್ಷ ವಿರೋಧಿಯಾಗಿ ಮಾತನಾಡಿರುವ ಕುರಿತು ಆಡಿಯೋ ಇದೆ ಎಂದು ಹೇಳುತ್ತಿದ್ದಾರೆ. ಆ ರೀತಿ ಮಾತನಾಡಿದ್ದನ್ನು ತೋರಿಸಲಿ ಎಂದು ಹೇಳಿದರು.

ಪಕ್ಷದ ನಾಯಕರನ್ನು ಭೇಟಿಯಾಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರನ್ನು ಭೇಟಿಯಾಗುವ ಪ್ರಶ್ನೆಯೇ ಇಲ್ಲ. ನನಗೆ ಅಂತಹ ಅವಶ್ಯಕತೆಯೂ ಇಲ್ಲ. ಯಾರು ಸುಲಭವಾಗಿ ಸಿಗುತ್ತಾರೋ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಸ್ವಲ್ಪ ತೂಕದ ಸ್ಥಾನದಲ್ಲಿದ್ದವರನ್ನು ಅಮಾನತು ಮಾಡುವುದಿಲ್ಲ. ಅವರು ಎಷ್ಟೇ ತಪ್ಪು ಮಾಡಿದ್ದರೂ ಅವರನ್ನು ಒಳಗಡೆ ಇಟ್ಟುಕೊಳ್ಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಬ್ಬಾರ್‌ ಸಸ್ಪೆಂಡ್‌ ಬೆನ್ನಲ್ಲೇ ಸಿಎಂ ಭೇಟಿ ಆದ ಎಸ್ಸೆಸ್ಸೆಂ:

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಕಾರಣಕ್ಕಾಗಿ ವಿಧಾನಪರಿಷತ್‌ ಸದಸ್ಯ ಕೆ.ಅಬ್ದುಲ್‌ ಜಬ್ಬಾರ್‌ ಅವರನ್ನು ಅಮಾನತು ಮಾಡಿದ ಬೆನ್ನಲ್ಲೇ ಬುಧವಾರ ಸಚಿವ ಎಸ್‌.ಎಸ್.ಮಲ್ಲಿಕಾರ್ಜುನ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.ಮುಖ್ಯಮಂತ್ರಿ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಮಲ್ಲಿಕಾರ್ಜುನ್‌, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಡೆದಿರುವ ಬೆಳವಣಿಗೆಗಳ ಕುರಿತಂತೆ ಮಾಹಿತಿ ನೀಡಿದ್ದಾರೆ. ಅದರಲ್ಲೂ ಅಲ್ಪಸಂಖ್ಯಾತ ಸಮುದಾಯದ ನಾಯಕರ ಒಳ ಏಟನ್ನು ಪ್ರಸ್ತಾಪಿಸಿ, ಚುನಾವಣಾ ಫಲಿತಾಂಶದ ಮೇಲಾಗುವ ಪರಿಣಾಮಗಳ ಕುರಿತಂತೆ ಮಾತುಕತೆ ನಡೆಸಿದ್ದಾರೆ. ಅರ್ಧ ಗಂಟೆಗೂ ಹೆಚ್ಚಿನ ಕಾಲ ಉಪ ಚುನಾವಣೆ ಮತ್ತು ಅನಂತರದ ಬೆಳವಣಿಗೆಗಳ ಕುರಿತಂತೆ ಮುಖ್ಯಮಂತ್ರಿ ಅವರೊಂದಿಗೆ ಮಲ್ಲಿಕಾರ್ಜುನ್‌ ಚರ್ಚಿಸಿದರು.ಮಲ್ಲಿಕಾರ್ಜುನ್‌ ಭೇಟಿಗೂ ಮುನ್ನ ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿನ ಪಕ್ಷ ವಿರೋಧಿ ಚಟುವಟಿಕೆಗಳ ಕುರಿತಂತೆ ಆರೋಪಿಸಿದ್ದ ವಿಧಾನಪರಿಷತ್‌ ಮುಖ್ಯ ಸಚೇತಕ ಸಲೀಂ ಅಹಮದ್‌, ಶಾಸಕ ರಿಜ್ವಾನ್‌ ಅರ್ಷದ್‌ ಅವರನ್ನು ಕರೆಸಿ ಸಿದ್ದರಾಮಯ್ಯ ಅವರು ಮಾತುಕತೆ ನಡೆಸಿದರು. ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ ಅಬ್ದುಲ್‌ ಜಬ್ಬಾರ್‌ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವುದು, ಅವರ ಪಾತ್ರವೇನು ಎಂಬ ಬಗ್ಗೆ ವಿವರಣೆ ಪಡೆದರು. ಅದರೊಂದಿಗೆ ಅಬ್ದುಲ್‌ ಜಬ್ಬಾರ್‌ ಹೊರತುಪಡಿಸಿ ಇತರ ನಾಯಕರು ಪಕ್ಷ ವಿರೋಧಿಯಾಗಿ ನಡೆದುಕೊಂಡಿದ್ದಾರೆಯೇ ಎಂಬ ಕುರಿತಂತೆ ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.