- ಜಿಎಂ ವಿವಿಯಲ್ಲಿ ಮಾದಕ ವ್ಯಸನ, ಸೈಬರ್ ಕ್ರೈಂ ತಡೆಗೆ ಜಾಗೃತಿ
- - -ದಾವಣಗೆರೆ: ಮಾದಕ ವಸ್ತುಗಳ ವ್ಯಸನವು ವ್ಯಕ್ತಿಯ ಆರೋಗ್ಯ, ಕುಟುಂಬ ಮತ್ತು ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಕ್ಷಣಿಕ ಸಂತೋಷಕ್ಕಾಗಿ ವ್ಯಸನಕ್ಕೆ ಒಳಗಾಗುವ ಯುವಕರು ತಮ್ಮ ಅಮೂಲ್ಯ ಜೀವನ ಮತ್ತು ಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದು ಎಂದು ಡಿವೈಎಸ್‌ಪಿ ಶರಣಬಸಪ್ಪ ಹೇಳಿದರು.
ನಗರದ ವಿಶ್ವವಿದ್ಯಾಲಯದ ಜಿಎಂ ಹಾಲಮ್ಮ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಸೈಬರ್ ಅಪರಾಧಗಳ ಕುರಿತು ಆಯೋಜಿಸಿದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಡ್ರಗ್ಸ್ ಪ್ರಕರಣಗಳಲ್ಲಿ ಭಾಗಿಯಾಗುವ ಅಥವಾ ಪೆಡ್ಲರ್ಸ್ ಆಗಿ ಕಾರ್ಯನಿರ್ವಹಿಸುವವರ ವಿರುದ್ಧ ಕಾನೂನು ಅತ್ಯಂತ ಕಠಿಣವಾಗಿದೆ. ಒಂದುವೇಳೆ ಎಂಬಿಬಿಎಸ್ ಓದುತ್ತಿರುವ ವಿದ್ಯಾರ್ಥಿ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದರೆ, ಅವರ ಎಂಬಿಬಿಎಸ್ ಕೋರ್ಸ್ ಅಥವಾ ವೈದ್ಯಕೀಯ ಲೈಸೆನ್ಸ್ ಅನ್ನು ರದ್ದುಪಡಿಸುವಂತಹ ಕಠಿಣ ಆದೇಶಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಸೈಬರ್ ಕ್ರೈಮ್ ವಿಭಾಗದ ಅಧಿಕಾರಿ ನಾಗಪ್ಪ ಮಾತನಾಡಿ, ಡಿಜಿಟಲ್ ಯುಗದಲ್ಲಿ ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ವಾಟ್ಸಾಪ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರೈವೆಸಿ ಮತ್ತು ಸೆಕ್ಯೂರಿಟಿ ಸೆಟ್ಟಿಂಗ್ಸ್ ಸರಿಯಾಗಿರಬೇಕು. ವಾಟ್ಸಾಪ್‌ನಲ್ಲಿ ಅಪರಿಚಿತ ಹಾಗೂ ಸ್ಪ್ಯಾಮ್ ಕರೆಗಳನ್ನು ತಡೆಯುವ ಆಯ್ಕೆಗಳನ್ನು ಬಳಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸುರಕ್ಷತಾ ಕ್ರಮಗಳನ್ನು ಹೇಳಿದರು. ಯಾವುದೇ ರೀತಿಯ ಸೈಬರ್ ವಂಚನೆ ನಡೆದರೆ ತಕ್ಷಣ ರಾಷ್ಟ್ರೀಯ ಸೈಬರ್ ಸಹಾಯವಾಣಿ 1930 ಗೆ ಕರೆ ಮಾಡಲು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕೆಟಿಜೆ ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸುನಿಲ್, ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ವಿಭಾಗದ ಉಪನ್ಯಾಸಕ ಎಸ್.ಪಿ. ದಯಾನಂದ್, ಜಿಎಂಯು ಎನ್‌ಎಸ್‌ಎಸ್ ಅಧಿಕಾರಿ ಎಚ್.ಎಸ್.ಅಶೋಕ್, ವಿದ್ಯಾರ್ಥಿಗಳು ಭಾಗವಹಿಸಿದ್ದರು.
- - --7ಕೆಡಿವಿಜಿ31: ದಾವಣಗೆರೆಯ ಜಿಎಂ ವಿಶ್ವವಿದ್ಯಾಲಯದಲ್ಲಿ ಪೊಲೀಸ್ ಇಲಾಖೆ ಸಹಯೋಗದಲ್ಲಿ ಮಾದಕ ವ್ಯಸನ, ಸೈಬರ್ ಕ್ರೈಂ ತಡೆಗೆ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ನಡೆಯಿತು.