ಚನ್ನಪಟ್ಟಣ: ತಹಸೀಲ್ದಾರರ ವಿಡಿಯೊ ಬೈಟ್‌ಗೆಂದು ವಸತಿ ಗೃಹಕ್ಕೆ ಬಂದಿದ್ದ ಮೂವರು, ಅವರ ಪ್ರಜ್ಞೆ ತಪ್ಪಿಸಿ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿ, ನಗ್ನ ವಿಡಿಯೊ ಚಿತ್ರೀಕರಿಸಿ ೧೦ ಲಕ್ಷಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಇಲ್ಲಿನ ಕುವೆಂಪು ನಗರದಲ್ಲಿರುವ ತಹಸೀಲ್ದಾರ್ ಬಿ.ಎನ್.ಗಿರೀಶ್ ಅವರ ವಸತಿ ಗೃಹದಲ್ಲಿ ಜೂನ್ ೨೮ರಂದು ಘಟನೆ ನಡೆದಿದ್ದು, ಈ ಕುರಿತು ಗಿರೀಶ್ ಅವರು ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಜುಲೈ ೧ರಂದು ದೂರು ದಾಖಲಿಸಿದ್ದಾರೆ. ಪ್ರಕರಣದ ಮೇರೆಗೆ ಅನುಷ್, ಶೋಭರಾಜ್ ಹಾಗೂ ನವೀನ್ ವಿರುದ್ಧ ಪ್ರಕರಣ ದಾಖಲಾಗಿದೆ.ದೂರಿನಲ್ಲೇನಿದೆ?: ಬಿ.ಎನ್.ಗಿರೀಶ್ ಮೈಸೂರಿನಲ್ಲಿ ತಹಸೀಲ್ದಾರ್ ಆಗಿದ್ದಾಗ ಫೇಸ್‌ಬುಕ್ ಮೂಲಕ ಅನುಷ್ ಅಲಿಯಾಸ್ ಅನುಷ್ ಶಿವಪ್ಪ, ತಾನು ಶಿವಶಕ್ತಿ ಸೇನಾ ಪಡೆ ಸಂಘವೆಂದು ಪರಿಚಯಿಸಿಕೊಂಡಿದ್ದ. ಚನ್ನಪಟ್ಟಣಕ್ಕೆ ನಾನು ವರ್ಗಾವಣೆ ಆದ ಬಳಿಕ ಎರಡು ತಿಂಗಳ ಹಿಂದೆ ಮನೆಗೆ ಬಂದಿದ್ದ ಆತ, ತಾವು ಮಾಡುತ್ತಿರುವ ಸಮಾಜಮುಖಿ ಕೆಲಸಗಳ ಕುರಿತು ಒಂದು ವಿಡಿಯೊ ಮಾಡಿಕೊಡುವಂತೆ ಕೇಳಿದ್ದ. ಜೂನ್ ೨೮ರಂದು ರಾತ್ರಿ ೧೧ ಗಂಟೆ ಸುಮಾರಿಗೆ ಅನುಷ್ ಕರೆ ಮಾಡುವಂತೆ ಸಂದೇಶ ಕಳಿಸಿದ, ನಾನು ಕರೆ ಮಾಡಿದಾಗ ಅನುಷ್ ಮೈಸೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದು, ನಾನು ನಿಮ್ಮನ್ನು ಭೇಟಿಯಾಗುವೆ. ಈ ವೇಳೆ ವಿಡಿಯೊ ಮಾಡಿಕೊಡಬೇಕು ಎಂದು ಮನವಿ ಮಾಡಿದ. ತಡವಾಗಿರುವುದರಿಂದ ಬೇಗ ಬನ್ನಿ ಎಂದು ಹೇಳಿದ್ದೆ. ರಾತ್ರಿ ೨ ಗಂಟೆ ಸುಮಾರಿಗೆ ಅನುಷ್ ತನ್ನಿಬ್ಬರು ಸ್ನೇಹಿತರಾದ ಶೋಭರಾಜ್ ಹಾಗೂ ನವೀನ್ ಜೊತೆ ಬಂದಿದ್ದ.
ತಮ್ಮೊಂದಿಗೆ ಮದ್ಯದ ಬಾಟಲಿ ತಂದಿದ್ದ ಅವರು, ಮನೆಯಲ್ಲೇ ಮದ್ಯ ಕುಡಿಯಲಾರಂಭಿಸಿದರು. ನನಗೆ ಕಿತ್ತಳೆ ಹಣ್ಣಿನ ಜ್ಯೂಸ್ ಕೊಟ್ಟರು. ಅದನ್ನು ಕುಡಿದ ಕೆಲ ಹೊತ್ತಿನಲ್ಲೇ ನನಗೆ ತಲೆ ಸುತ್ತಿದಂತಾಯಿತು. ನನಗೆ ಎಚ್ಚರವಾದಾಗ ಮೈ ಮೇಲೆ ಬಟ್ಟೆಗಳಿರಲಿಲ್ಲ. ನನ್ನನ್ನ ವಿವಸ್ತ್ರಗೊಳಿಸಿದ್ದರು. ಇನ್ನೂ ನಿದ್ರೆ ಮಂಪರಿನಲ್ಲಿದ್ದ ನನ್ನ ಕೆನ್ನೆಗೆ ಅನುಷ್ ಹೊಡೆಯುತ್ತಿದ್ದ ಎಂದು ಗಿರೀಶ್ ದೂರಿನಲ್ಲಿ ತಿಳಿಸಿದ್ದಾರೆ.ಚಿನ್ನ ಸುಲಿಗೆ: ೮ ಗ್ರಾಂ ಚಿನ್ನದ ಉಂಗುರ, ೧೪ ಗ್ರಾಂ ಚಿನ್ನದ ಸರ ಹಾಗೂ ಬೆಳ್ಳಿ ಉಡುದಾರ ಕಸಿದುಕೊಂಡಿದ್ದಾರೆ.ಅಲ್ಲದೆ, ಅನುಷ್ ನನಗೆ ಚೀಟಿ ವ್ಯವಹಾರದಲ್ಲಿ ನಷ್ಟವಾಗಿದ್ದು ೧೦ ಲಕ್ಷ ಬೇಕಿದೆ. ಬೀರುವಿನ ಕೀ ಕೊಡು ಎಂದು ಬೆದರಿಸಿದ.
ಕೀ ಮನೆಯವರು ತೆಗೆದುಕೊಂಡು ಹೋಗಿದ್ದಾರೆ ಎಂದಿದ್ದಕ್ಕೆ, ಮತ್ತೆ ಎಲ್ಲರೂ ಹಲ್ಲೆ ನಡೆಸಿದರು. ಶೋಭರಾಜ್ ಮತ್ತು ನವೀನ್ ನನ್ನನ್ನು ಹಾಸಿಗೆ ಕೆಳಕ್ಕೆ ಮಲಗಿಸಿಕೊಂಡು ಕೀ ಕೊಡದಿದ್ದರೆ ಕೊಲೆ ಮಾಡುತ್ತೇವೆ ಎಂದು ದಿಂಬಿನಿಂದ ಮುಖ ಮುಚ್ಚಿ ಉಸಿರುಗಟ್ಟಿಸಲು ಯತ್ನಿಸಿದರು.
ಈ ವೇಳೆ ನಗ್ನ ವಿಡಿಯೊ ಚಿತ್ರೀಕರಿಸಿಕೊಂಡರು. ಬೆಳಿಗ್ಗೆ ೬ ಗಂಟೆವರೆಗೆ ಗೃಹಬಂಧನದಲ್ಲಿಟ್ಟು ದೈಹಿಕ ಹಿಂಸೆ ನೀಡಿದ ಮೂವರು ನಂತರ ನನ್ನ ಸಾವಿಗೆ ನಾನೇ ಕಾರಣ ಎಂದು ಪತ್ರ ಬರೆಯಿಸಿಕೊಂಡರು. ನಾಳೆಯೊಳಗೆ ೧೦ ಲಕ್ಷ ನೀಡದಿದ್ದರೆ ವಿಡಿಯೊ ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದರು.
ಬೆಳಗ್ಗೆ ೭.೧೫ರ ಸುಮಾರಿಗೆ ತಾವು ತಂದಿದ್ದ ಮದ್ಯ ಮತ್ತು ಜ್ಯೂಸ್ ಬಾಟಲಿಗಳೊಂದಿಗೆ ಹೊರಟ ಮೂವರು, ತನ್ನಿಂದ ಬರೆಯಿಸಿಕೊಂಡಿದ್ದ ಪತ್ರವನ್ನು ಹೊರಗಡೆ ಹರಿದು ಹಾಕಿದ್ದರು. ನಂತರ ಕರೆ ಮಾಡಿ ವಿಡಿಯೊ ಬಹಿರಂಗಗೊಳಿಸುವುದಾಗಿ ಬೆದರಿಕೆ ಹಾಕುತ್ತಿದ್ದರು. ನಂತರ ನಾನು ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಡವಾಗಿ ಬಂದು ಮೂವರ ವಿರುದ್ಧ ದೂರು ಕೊಟ್ಟಿದ್ದೇನೆ ಎಂದು ಗಿರೀಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.