ಕನ್ನಡಪ್ರಭ ವಾರ್ತೆ ಪಾಂಡವಪುರ

ಬೆಂಗಳೂರು ನಗರವನ್ನು ನಿರ್ಮಾಣ ಮಾಡಿ ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ರುವಾರಿ ನಾಡಪ್ರಭು ಕೆಂಪೇಗೌಡರು ಎಂದು ನೇಗಿಲಯೋಗಿ ಸಮಾಜ ಸೇವಾಟ್ರಸ್ಟ್‌ನ ರಾಜ್ಯಾಧ್ಯಕ್ಷ ಡಿ.ರವಿಕುಮಾರ್ ಹೇಳಿದರು.

ಪಟ್ಟಣದ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್‌ನ ಕಚೇರಿಯಲ್ಲಿ ನಡೆದ ನಾಡಪ್ರಭು ಕೆಂಪೇಗೌಡರು ಹಾಗೂ ಪಿಎಸ್‌ಎಸ್‌ಕೆ ಕಾರ್ಖಾನೆ ಸಂಸ್ಥಾಪಕರಾದ ಬಿ.ವೈ.ನೀಲೇಗೌಡರ ಜಯಂತಿ ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ ಪ್ರತಿಭಾಪುರಸ್ಕಾರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾಡಪ್ರಭು ಕೆಂಪೇಗೌಡರು ದೂರದೃಷ್ಟಿ ಇಟ್ಟುಕೊಂಡು ಬೆಂಗಳೂರು ನಗರವನ್ನು ನಿರ್ಮಾಣ ಮಾಡಿದರು. ಪ್ರಸ್ತುತ ಬೆಂಗಳೂರು ನಗರ ಬೃಹತ್ ಆಕಾರದಲ್ಲಿ ಬೆಳೆದು ಎಲ್ಲಾ ಕ್ಷೇತ್ರದಲ್ಲೂ ಪ್ರಗತಿ ಸಾಧನೆ ಮಾಡಿ ವಿಶ್ವದಲ್ಲಿಯೇ ಮನ್ನಣೆ ಪಡೆದುಕೊಂಡಿದೆ. ಜೊತೆಗೆ ಇದೊಂದು ಅತ್ಯಂತ ಸುರಕ್ಷಿತ ನಗರವಾಗಿದೆ ಎಂದರು.

ಕೆಂಪೇಗೌಡರ ಜನಿಸಿ 516 ವರ್ಷಗಳು ಕಳೆದರೂ ಅವರ ದೂರದೃಷ್ಟಿ ಹಾಗೂ ಸಾಧನೆ ಎಷ್ಟರ ಮಟ್ಟಿಗೆ ಭದ್ರಬುನಾದಿಯಾಗಿ ನೆಲೆಯೂರಿದೆ ಎಂದರೆ ಅದಕ್ಕೆ ಉದಾಹರಣೆ ಬೆಂಗಳೂರು ನಗರವಾಗಿದೆ. ಇದನ್ನು ಅರ್ಥೈಸಿಕೊಂಡು ಅವರು ಹಾಕಿ ಕೊಟ್ಟು ಮಾರ್ಗದಲ್ಲಿ ನಾವೆಲ್ಲರು ಮುನ್ನಡೆಯಬೇಕು ಎಂದರು.


ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆ ಸಂಸ್ಥಾಪಕ ಬಿ.ವೈ.ನೀಲೇಗೌಡರು ಎರಡು ಬಾರಿ ಶಾಸಕರಾಗಿ ಸಾಕಷ್ಟು ಕೆಲಸ ಮಾಡಿ ಸಹಕಾರ ಕ್ಷೇತ್ರದ ಮೂಲಕ ಪಿಎಸ್‌ಎಸ್‌ಕೆ ಕಾರ್ಖಾನೆ ಆರಂಭಿಸಿ, ಜಿಲ್ಲೆಯ ಮೂರು ತಾಲೂಕಿನ ರೈತರಿಗೆ ಅನುಕೂಲ ಮಾಡಿಕೊಟ್ಟರು. ಮಹಾನ್ ವ್ಯಕ್ತಿಗಳನ್ನು ಸ್ಮರಿಸಿ ಮುಂದಿನ ಪೀಳಿಗೂ ಇವರ ಸಾಧನೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಹಾಗಾಗಿ ರೈಲ್ವೇ ನಿಲ್ದಾಣದಲ್ಲಿ ಇರುವ ವೃತ್ತಕ್ಕೆ ಬಿ.ವೈ.ನೀಲೇಗೌಡರ ಹೆಸರು ನಾಮಕರಣ ಮಾಡಬೇಕು ಎಂದು ತಾಲೂಕು ಆಡಳಿತಕ್ಕೆ ಒತ್ತಾಯಿಸಿದರು.

ಉಪನ್ಯಾಸಕ ಜೆ.ಬಿ.ಮಂಜುನಾಥ್ ಅವರು ನಾಡಪ್ರಭು ಕೆಂಪೇಗೌಡ ಹಾಗೂ ಬಿ.ವೈ.ನೀಲೇಗೌಡರ ಕುರಿತು ಉಪನ್ಯಾಸ ನೀಡಿದರು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಈರೇಗೌಡನಕೊಪ್ಪಲು ಗ್ರಾಮದ ಪ್ರೀತಮ್‌ಗೌಡ ಇ.ಎಸ್ (ಶಿಕ್ಷಣ ಕ್ಷೇತ್ರ), ಹಿರೇಮರಳಿ ಗ್ರಾಮದ ದುವನ್‌ಗೌಡ ಎಚ್.ಎ.(ಸ್ಕೇಟಿಂಗ್), ಲಾವಣ್ಯ ಪಿ.ಎನ್.ಗೌಡ (ಬ್ಯಾಸ್ಕೆಟ್‌ ಬಾಲ್), ಯಶ್ ಆರ್.ಗೌಡ(ಅಥ್ಲೇಟಿಕ್ಸ್), ರಚನ್‌ಗೌಡ ಎಂ.ಎಸ್.(ಲಾನ್‌ಟೆನ್ನಿಸ್) ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ನೇಗಿಲಯೋಗಿ ಸಮಾಜ ಸೇವಾಟ್ರಸ್ಟ್‌ನ ತಾಲೂಕು ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್, ಗೌ.ಅಧ್ಯಕ್ಷ ಎಸ್.ಮಲ್ಲಿಕಾರ್ಜುನಗೌಡ, ಕಾರ್‍ಯದರ್ಶಿ ಕೆ.ಕುಬೇರ್, ಇ.ಎಸ್.ನಾಗರಾಜು, ಸಾಹಿತಿ ಚಂದ್ರಶೇಖರಯ್ಯ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.