Bhatkala, News

ಇಫ್ತಾರ್ ಸೌಹಾರ್ದ ಕೂಟದಲ್ಲಿ ಪತ್ರಕರ್ತ

ಕನ್ನಡಪ್ರಭ ವಾರ್ತೆ ಭಟ್ಕಳ

ಹೆಬಳೆಯ ಶಮ್ಸ ಪಿಯು ಕಾಲೇಜಿನಲ್ಲಿ ಜಮಾತೆ ಇಸ್ಲಾಮಿ ಹಿಂದ್ ಮತ್ತು ಆಲ್ ಇಂಡಿಯಾ ಐಡಿಯಲ್ ಟೀಚರ್ಸ್‌ ಅಸೋಸಿಯೇಶನ್ (ಐಟಾ) ವತಿಯಿಂದ ಇಫ್ತಾರ್ ಸೌಹಾರ್ದ ಕೂಟ ಏರ್ಪಡಿಸಲಾಗಿತ್ತು.

ಸಭೆಯಲ್ಲಿ ಉಪಸ್ಥಿತರಿದ್ದ ಹಿರಿಯ ಪತ್ರಕರ್ತ ಎ.ಕೆ. ಕುಕ್ಕಿಲ ಮಾತನಾಡಿ, ಧರ್ಮದ ಹೆಸರಿನಲ್ಲಿ ಹರಡುವ ಸುಳ್ಳು ಪ್ರಚಾರಗಳು, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿರುವ ದ್ವೇಷದ ವಾತಾವರಣ ಹಾಗೂ ಜಾಗತಿಕ ಸಂಘರ್ಷಗಳ ನಡುವಲ್ಲಿ ಮಾನವೀಯ ಮೌಲ್ಯಗಳ ಪುನರುಜ್ಜೀವನ ಅಗತ್ಯವಾಗಿದೆ.

ರಂಜಾನ್ ಉಪವಾಸವು ಕೇವಲ ಆಚರಣೆಯಾಗದೇ ಮನುಷ್ಯನ ಅಂತರಂಗದ ದ್ವೇಷ, ವಂಚನೆ ಮತ್ತು ಕೆಡುಕುಗಳನ್ನು ಸುಟ್ಟುಹಾಕಿ ವ್ಯಕ್ತಿತ್ವವನ್ನು ಶುದ್ಧಗೊಳಿಸುವ ಆತ್ಮಪರಿವರ್ತನೆಯ ಪ್ರಕ್ರಿಯೆಯಾಗಬೇಕು ಎಂದು ಹೇಳಿದರು.

ಸದ್ಭಾವನಾ ಮಂಚ್ ಅಧ್ಯಕ್ಷ ಸತೀಶಕುಮಾರ್ ನಾಯ್ಕ, ಭಟ್ಕಳ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಲ್ಲಾಸ ನಾಯ್ಕ, ಐಟಾ ರಾಜ್ಯಾಧ್ಯಕ್ಷ ಮುಹಮ್ಮದ್ ರಝಾ ಮಾನ್ವಿ ಮಾತನಾಡಿದರು.

ಜಮಾತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ., ಶಮ್ಸ್ ಸ್ಕೂಲ್ ಬೋರ್ಡ್ ಅಧ್ಯಕ್ಷ ನಝೀರ್ ಅಹ್ಮದ್ ಖಾಜಿ, ಐಟಾ ಭಟ್ಕಳ ಶಾಖಾಧ್ಯಕ್ಷ ಮುಹಮ್ಮದ್ ಸಾದಿಕ್ ಉಪಸ್ಥಿತರಿದ್ದರು. ಕಾರ್ಯದರ್ಶಿ ರವೂಫ್ ಅಹ್ಮದ್ ಸವಣೂರು ವಂದಿಸಿದರು. ಸೌಹಾರ್ದ ಕೂಟದಲ್ಲಿ ವಿವಿಧ ಸಮುದಾಯಗಳ ಗಣ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿ ಸಹಬಾಳ್ವೆ ಮತ್ತು ಸೌಹಾರ್ದತೆಯ ಸಂದೇಶ ಹಂಚಿಕೊಂಡರು.