ಇಲ್ಲಿನ ಮೂಡಶಿರಾಲಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾರದಾ ಪೂಜೆ, ನೂತನವಾಗಿ ನಿರ್ಮಿಸಲಾದ ಪ್ಲೇ ಪಾರ್ಕ್ ಉದ್ಘಾಟನೆ ಹಾಗೂ ವರುಷದ ಹರುಷ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಭಟ್ಕಳ

ಇಲ್ಲಿನ ಮೂಡಶಿರಾಲಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾರದಾ ಪೂಜೆ, ನೂತನವಾಗಿ ನಿರ್ಮಿಸಲಾದ ಪ್ಲೇ ಪಾರ್ಕ್ ಉದ್ಘಾಟನೆ ಹಾಗೂ ವರುಷದ ಹರುಷ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಸರಕಾರಿ ಶಾಲೆಗಳು ಸುಸಜ್ಜಿತವಾಗುತ್ತಿದ್ದು, ಕಲಿಕೆ ಮತ್ತು ಸೌಲಭ್ಯಗಳ ವಿಚಾರದಲ್ಲಿ ಇವು ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆಯಿಲ್ಲ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ನಾಯ್ಕ, ಶಾಲೆಯ ವಿನೂತನ ಮಾದರಿಯ ಕಟ್ಟಡವಾದ ವಿದ್ಯಾವಾಹಿನಿ ಎಕ್ಸ್‌ಪ್ರೆಸ್ ಗೆ ಹಸಿರು ನಿಶಾನೆ ತೋರಿದರು. ಬಳಿಕ ಮಾತನಾಡಿದ ಅವರು, ರೈಲಿನ ಮಾದರಿಯಲ್ಲಿರುವ ಶಾಲಾ ಕಟ್ಟಡವು ಆಕರ್ಷಕವಾಗಿದ್ದು, ಮಕ್ಕಳನ್ನು ಶಾಲೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇಂತಹ ಸೃಜನಾತ್ಮಕ ಪ್ರಯತ್ನಗಳು ನಮ್ಮ ಶಿಕ್ಷಣ ಇಲಾಖೆಗೆ ಹೆಮ್ಮೆ ತಂದಿವೆ ಎಂದು ಕೊಂಡಾಡಿದರು.

ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಶ್ರೀಧರ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಮಟ್ಟದ ಪುಷ್ಠಿ ಯೋಜನೆ ಅಡಿಯಲ್ಲಿ ಉತ್ತಮ ಎಸ್‌ಡಿಎಂಸಿ ಪ್ರಶಸ್ತಿಗೆ ಈ ಶಾಲೆ ಆಯ್ಕೆಯಾಗಿದ್ದು, ಇದರ ಜೊತೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಮನೋಜ ಶೆಟ್ಟಿ ರಾ. ಪ್ರಾ. ಶಾ. ಶಿಕ್ಷಕರ ಸಂಘದ ವತಿಯಿಂದ ನೀಡಲಾದ ಪ್ರತಿಷ್ಠಿತ ಜ್ಯೋತಿಬಾ ಫುಲೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿರುವ ಹಿನ್ನೆಲೆ ಶಾಲೆಯ ಈ ಮಹೋನ್ನತ ಸಾಧನೆಗೆ ಕಾರಣರಾದ ಶಾಲಾ ಶಿಕ್ಷಕರಾದ ಮನೋಜ್ ಶೆಟ್ಟಿ ಹಾಗೂ ಸವಿತಾ ಹೆರವಟ್ಟ ಅವರನ್ನು ಎಸ್‌ಡಿಎಂಸಿ ಸದಸ್ಯರು ಹಾಗೂ ಊರ ನಾಗರಿಕರು ಸನ್ಮಾನಿಸಿದರು.

ವರುಷದ ಹರುಷ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುರುಡೇಶ್ವರ ಲಯನ್ಸ್ ಕ್ಲಬ್ ಅಧ್ಯಕ್ಷ ಕಿರಣ್ ಕಾಯ್ಕಿಣಿ ವಹಿಸಿದ್ದರು. ಪ್ಲೇ ಪಾರ್ಕ್ ನಿರ್ಮಿಸಲು ಸಹಕರಿಸಿದ ದಾನಿಗಳಾದ ಮೇಘನಾ ಕಾಮತ್ ಹಾಗೂ ತಿಮ್ಮಪ್ಪ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ನಿಕಟಪೂರ್ವ ಗ್ರಾಪಂ ಸದಸ್ಯ ರಾಮಚಂದ್ರ ನಾಯ್ಕ, ಬಿಆರ್‌ಸಿ ಸಮನ್ವಯಾಧಿಕಾರಿ ಪೂರ್ಣಿಮಾ ಮೊಗೇರ್, ದೈಹಿಕ ಪರಿವೀಕ್ಷಕ ಪ್ರಕಾಶ್ ಶಿರಾಲಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಎನ್. ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಉಲ್ಲಾಸ ನಾಯ್ಕ, ಬೆಂಗ್ರೆ ಪಂಚಾಯಿತಿ ಪಿಡಿಒ ರಮೇಶ್ ನಾಯ್ಕ, ಸಿಆರ್‌ಪಿ ಶ್ರೀರಾಮ ಗೌಡ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಮನೋಜ ಶೆಟ್ಟಿ ಸ್ವಾಗತಿಸಿದರು. ಸಹ ಶಿಕ್ಷಕಿ ಸವಿತಾ ಹೆರವಟ್ಟ ವಂದಿಸಿದರು. ಶಿಕ್ಷಕರಾದ

ಸುರೇಶ್ ಮುರುಡೇಶ್ವರ ಹಾಗೂ ಜನಾರ್ದನ್ ಮೊಗೇರ ನಿರೂಪಿಸಿದರು.