ಆರ್ಥಿಕ ಸಂಕಷ್ಟದಲ್ಲೂ ಮೂಲಸೌಲಭ್ಯ ಕಲ್ಪಿಸುವ ಜವಾಬ್ದಾರಿಯಿದೆ-ಶಾಸಕ ಮಾನೆ

| Published : Sep 17 2024, 12:50 AM IST

ಆರ್ಥಿಕ ಸಂಕಷ್ಟದಲ್ಲೂ ಮೂಲಸೌಲಭ್ಯ ಕಲ್ಪಿಸುವ ಜವಾಬ್ದಾರಿಯಿದೆ-ಶಾಸಕ ಮಾನೆ
Share this Article
  • FB
  • TW
  • Linkdin
  • Email

ಸಾರಾಂಶ

ಆರ್ಥಿಕ ಸಂಕಷ್ಟ, ಸವಾಲಿನ ಮಧ್ಯೆಯೂ ಜನತೆಯ ನೆಮ್ಮದಿಯ ಜೀವನಕ್ಕೆ ಮೂಲಸೌಲಭ್ಯ ಕಲ್ಪಿಸುವ ಗುರುತರ ಜವಾಬ್ದಾರಿ ನಮ್ಮ ಮುಂದಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಹಾನಗಲ್ಲ: ಬೆಲೆ ಏರಿಕೆಯ ಬಿಸಿಯಿಂದ ಬಸವಳಿದ ಜನಸಾಮಾನ್ಯರಿಗೆ ಆರ್ಥಿಕ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಂದ ಶಿಕ್ಷಣ, ಆರೋಗ್ಯ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ನಿರೀಕ್ಷೆಗೆ ತಕ್ಕಂತೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ಸ್ವಲ್ಪಮಟ್ಟಿನ ಹಿನ್ನಡೆಯಾಗಿದೆ. ಆರ್ಥಿಕ ಸಂಕಷ್ಟ, ಸವಾಲಿನ ಮಧ್ಯೆಯೂ ಜನತೆಯ ನೆಮ್ಮದಿಯ ಜೀವನಕ್ಕೆ ಮೂಲಸೌಲಭ್ಯ ಕಲ್ಪಿಸುವ ಗುರುತರ ಜವಾಬ್ದಾರಿ ನಮ್ಮ ಮುಂದಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.ತಾಲೂಕಿನ ಆಡೂರು ಗ್ರಾಮದಲ್ಲಿ ₹ ೧.೩೦ ಕೋಟಿ ವೆಚ್ಚದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಅತಿವೃಷ್ಟಿ, ಬರಗಾಲದ ಕಾರಣಗಳಿಂದ ಆರ್ಥಿಕ ಸ್ಥಿತಿಗತಿ ಇನ್ನಷ್ಟೇ ಸುಧಾರಣೆ ಕಾಣಬೇಕಿದೆ. ಸರಕಾರದ ಪ್ರಥಮ ಆದ್ಯತೆಯ ಕಾರ್ಯಕ್ರಮಗಳ ಅನುಷ್ಠಾನದ ಒತ್ತಡದ ಕಾರಣ ಶಿಕ್ಷಣ ಕ್ಷೇತ್ರವೂ ಕಷ್ಟಕ್ಕೆ ಸಿಲುಕಿದೆ. ಈ ಕಷ್ಟದ ಮಧ್ಯೆಯೂ ತಾಲೂಕಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕಳೆದ ಎರಡು, ಮೂರು ವರ್ಷಗಳಲ್ಲಿ ಸಾಕಷ್ಟು ಸುಧಾರಣೆ ತರಲಾಗಿದೆ. ಹಾನಗಲ್ ನಗರದಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಸರಕಾರಿ ಪ್ರೌಢಶಾಲೆ ಆರಂಭಿಸಲಾಗಿದೆ. ತಾಲೂಕಿನ ಎರಡು ಶಾಲೆಗಳು ಪಿಎಂಶ್ರೀ ಯೋಜನೆಗೆ ಆಯ್ಕೆಯಾಗಿವೆ. ೪ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ, ೪ ಶಾಲೆಗಳಲ್ಲಿ ಎಲ್‌ಕೆಜಿ ಆರಂಭಿಸಲಾಗಿದೆ. ಅನುದಾನದ ಕೊರತೆ ಇದ್ದರೂ ದಾನಿಗಳ ನೆರವಿನಿಂದಲೇ ಸರಕಾರಿ ಶಾಲೆಗಳನ್ನು ಸುಧಾರಿಸುವ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿರುವುದಾಗಿ ಅವರು ತಿಳಿಸಿದರು.ಜಿಪಂ ಮಾಜಿ ಸದಸ್ಯ ನಿಂಗಪ್ಪ ಪೂಜಾರ ಮಾತನಾಡಿ, ಹಾನಗಲ್ ತಾಲೂಕಿನ ಪ್ರಮುಖ ಗ್ರಾಮಗಳಲ್ಲಿ ಆಡೂರು ಸಹ ಒಂದಾಗಿದೆ. ಗ್ರಾಮದಲ್ಲಿ ಸರಕಾರಿ ಭೂಮಿ ಹೆಚ್ಚಿದ್ದು, ಶೈಕ್ಷಣಿಕವಾಗಿ ಉಪಯೋಗಿಸಿಕೊಳ್ಳಬಹುದಾಗಿದೆ. ಮಾಲತೇಶ ದೇವರ ಗುಡ್ಡದ ಬಳಿ ಇರುವ ೫ ಎಕರೆ ಭೂಮಿಯನ್ನು ಸರಕಾರಿ ಪದವಿ ಪೂರ್ವ ಕಾಲೇಜಿಗೆ ದೊರಕಿಸುವಂತೆ ಶಾಸಕ ಶ್ರೀನಿವಾಸ ಮಾನೆ ಅವರಿಗೆ ಮನವಿ ಮಾಡಿದರು.ಗ್ರಾಪಂ ಅಧ್ಯಕ್ಷ ಮಾರ್ತಾಂಡಪ್ಪ ಬಾರ್ಕಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ನಾಗಪ್ಪ ಪೋಲೇಶಿ, ಸದಸ್ಯರಾದ ದೀಪಾ ತಹಶೀಲ್ದಾರ್, ರೇಖಾ ದೇವಗಿರಿ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಸ್.ಗುಂಡಪಲ್ಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಮುಖಂಡರಾದ ಭರಮಣ್ಣ ಶಿವೂರ, ಬಾಬು ನಿಕ್ಕಂ, ಬಾಬುಲಾಲ್ ನಾಯ್ಕರ್, ಮುಖ್ಯೋಪಾಧ್ಯಾಯ ಕೆ.ಎಂ.ಗುರನಳ್ಳಿ, ಪ್ರಾಚಾರ್ಯ ಹೆಗ್ಗಪ್ಪನವರ, ಉಪಪ್ರಾಚಾರ್ಯ ಮೋಹನ ನಾಯಕ, ಸಿಆರ್‌ಪಿ ನಾಗರಾಜ ಸಿಂಗಾಪೂರ ಮೊದಲಾದವರು ಈ ಸಂದರ್ಭದಲ್ಲಿದ್ದರು.