ಸಾರಾಂಶ
ರಾಂ ಅಜೆಕಾರು
ಕನ್ನಡಪ್ರಭ ವಾರ್ತೆ ಕಾರ್ಕಳಪಶ್ಚಿಮಘಟ್ಟಗಳ ಸಾಲಿನ ಕುದುರೆ ಮುಖ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ವನಗಿರಿಯ ರಂಗು ಎಂಬ ಕಾರ್ಯಕ್ರಮದಡಿ ಚಿತ್ರಕಲೆಗಳ ಜೊತೆಗೆ ಪರಿಸರದ ಪಾಠವನ್ನು ಕಲಿಸಲು ಯುವತಿಯೊಬ್ಬಳು ಮುಂದಾಗಿದ್ದಾಳೆ.
ಉಡುಪಿ ಜಿಲ್ಲೆಯ ಕಾಪುವಿನ ರಮೇಶ್ ಹಾಗೂ ಶಶಿಕಲಾ ದಂಪತಿ ಪುತ್ರಿ, ಚಿತ್ರ ಕಲಾವಿದೆ ರಕ್ಷಾ ಪೂಜಾರಿ ಈ ಯೋಚನೆ, ಯೋಜನೆಯಲ್ಲಿ ತೊಡಗಿಸಿರುವ ಯುವತಿ.ಪಶ್ಚಿಮಘಟ್ಟಗಳ ಸಾಲಿನಲ್ಲಿ ಹಿಂದುಳಿದಿರುವ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಚಿತ್ರಕಲೆಗಳಲ್ಲಿ ಆಸಕ್ತಿ ಮೂಡಿಸುವುದೇ ಇವರ ಉದ್ದೇಶ. ಈಗಾಗಲೇ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯ ಕೆಳಸುಂಕ ಶಾಲೆಯಲ್ಲಿ ಈ ವನಗಿರಿ ರಂಗು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
500 ಶಾಲೆಗಳನ್ನು ತಲುಪುವ ಗುರಿ:ಪಶ್ಚಿಮಘಟ್ಟಗಳ ತಪ್ಪಲಿನ ಪ್ರದೇಶಗಳಾದ ಅಮಾವಾಸ್ಯೆಬೈಲು, ಹೆಬ್ರಿ, ನಾಡ್ಪಾಲು, ಮುದ್ರಾಡಿ, ಕಬ್ಬಿನಾಲೆ, ಮುನಿಯಾಲು, ಮುಟ್ಲುಪಾಡಿ, ಅಂಡಾರು, ಕಾರ್ಕಳ ತಾಲೂಕಿನ ಶಿರ್ಲಾಲು, ಅಜೆಕಾರು, ಕೆರುವಾಶೆ, ಮಾಳ, ನೂರಲ್ಬೆಟ್ಟು, ನಾರಾವಿ, ಹೊಸ್ಮಾರು, ಬೆಳ್ತಂಗಡಿ ತಾಲೂಕಿನ ಅಳದಂಗಡಿ, ಚಿಕ್ಕಮಗಳೂರಿನ ಕುದುರೆಮುಖ, ಕಳಸ, ಜಾಂಬಳೆ, ಸಂಸೆ, ಹೊರನಾಡು, ಶೃಂಗೇರಿ, ಕೊಗ್ರೆ, ಕಿಗ್ಗ, ಶಿವಮೊಗ್ಗ ಜಿಲ್ಲೆಯ ಆಗುಂಬೆ, ಹೊಸನಗರ ತಾಲೂಕಿನ ಭಾಗಗಳಲ್ಲಿ ಸಂಚರಿಸಿ ಸರ್ಕಾರಿ ಶಾಲೆಗಳಿಗೆ ತೆರಳಿ ಚಿತ್ರಕಲೆಯ ಜೊತೆಗೆ ಪರಿಸರದ ಪಾಠವನ್ನು ಕಲಿಸಲಿದ್ದಾಳೆ. ವಿದ್ಯಾರ್ಥಿಗಳಿಗೆ ಚಿತ್ರಕಲೆಗಳಿಗೆ ಬೇಕಾದ ವಸ್ತುಗಳ ಖರ್ಚನ್ನು ಸ್ವತಃ ಭರಿಸುತಿದ್ದಾರೆ. ದಾನಿಗಳನ್ನು ಸಂಪರ್ಕಿಸಿದ್ದು, ಸಹಕರಿಸುವ ನಿರೀಕ್ಷೆಯಿದೆ ಎನ್ನುತ್ತಾರೆ ರಕ್ಷಾ ಪೂಜಾರಿ.
ಚಿತ್ರಕಲೆಯೇ ಜೀವಾಳ:ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸೇರಿದಂತೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಆದರೆ ಹಳ್ಳಿಯ ಸರ್ಕಾರಿ ಶಾಲೆ ಮಕ್ಕಳು ಚಿತ್ರಕಲೆ ವಿಷಯಗಳಿಂದ ವಂಚಿತರಾಗಬಾರದು ಎಂಬುದೇ ವನಗಿರಿಯ ರಂಗು ಕಾರ್ಯಕ್ರಮದ ಉದ್ದೇಶ.
ಈಗಾಗಲೇ ರಕ್ಷಾ ಪೂಜಾರಿ ಬೆಂಗಳೂರು, ಮೈಸೂರು, ಕೋಲ್ಕತ್ತಾ ಸೇರಿದಂತೆ ದೇಶಾದ್ಯಂತ ರಾಷ್ಟ್ರೀಯ ಮಟ್ಟದಲ್ಲಿ ನೂರಾರು ಕಲಾಕೃತಿಗಳ ಪ್ರದರ್ಶನ ನೀಡಿದ್ದಾರೆ. ವಿವಿಧ ಕಲಾಕೃತಿಗಳನ್ನು ರಚಿಸಿ ಮಾರಾಟ ಮಾಡುತ್ತಾರೆ. ಆಯಿಲ್ ಪೈಂಟಿಗ್, ವಾಲ್ ಮ್ಯೂರಲ್ಸ್, ವಾಲ್ ಪೈಂಟಿಂಗ್‌ಗಳ ರಚನೆಯಲ್ಲಿ ಈಕೆ ನಿಸ್ಸೀಮರು.ಪರಿಸರದ ಪಾಠ:ಉಡುಪಿ ಜಿಲ್ಲೆಯ ಸಾಸ್ತಾನದ ವನ್ಯಜೀವಿ ಛಾಯಾಚಿತ್ರ ಗ್ರಾಹಕ ಮನೋಜ್ ಭಂಡಾರಿ ತೆಗೆದಿರುವ ವಿವಿಧ ಕಾಡು ಪ್ರಾಣಿ, ಪಕ್ಷಿಗಳ ಚಿತ್ರಗಳನ್ನು ವಿದ್ಯಾರ್ಥಿಗಳಿಗೆ ತೋರಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣಾ ಪ್ರಬಂಧಗಳು, ಮಾಹಿತಿ ಕಾರ್ಯಾಗಾರ ನಡೆಸುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಗುತ್ತಿದೆ.ಮನೋವಿಕಸನಕ್ಕೆ ಸಹಕಾರಿ:
ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಚಿತ್ರ ಕಲೆ ಹಾಗೂ ಕಲಾಕೃತಿಗಳನ್ನು ತಯಾರಿಸುವ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳ ಮನೋವಿಕಸನ ಸಾಧ್ಯವಾಗುತ್ತದೆ. ಚಿತ್ರಕಲೆ ಮಕ್ಕಳ ರಚನಾ ಸಾಮರ್ಥ್ಯದ ಬೆಳವಣಿಗೆ, ಭಾವಾಭಿವ್ಯಕ್ತಿ, ಕಲ್ಪನಾಶಕ್ತಿ ಹೆಚ್ಚಿಸಲು ಸಹಕಾರಿಯಾಗುತ್ತದೆ. ಮಗು ಮಾತಿನಲ್ಲಿ ವ್ಯಕ್ತಪಡಿಸಲಾಗದ ತನ್ನ ಸಂವೇದನೆಯನ್ನು ಹೊರಚೆಲ್ಲಲು ಚಿತ್ರಕಲೆಗಳು ಮುಖ್ಯ ವೇದಿಕೆಯಾಗಿದೆ.--------------ನನ್ನ ಕಲಾಪ್ರೇಮಕ್ಕ ನನ್ನ ತಂದೆ ತಾಯಿಯೇ ಸ್ಫೂರ್ತಿ. ಗೆಳೆಯರ ಪ್ರೋತ್ಸಾಹದಿಂದ ರಾಷ್ಟ್ರೀಯ ಮಟ್ಟದಲ್ಲಿ ಕಲಾಕೃತಿಗಳ ಪ್ರದರ್ಶನ ನೀಡಲು ಸಹಕಾರವಾಗಿದೆ. ರಾಜ್ಯದ ವಿವಿಧೆಡೆ ಸಂಚರಿಸಿ 80ಕ್ಕೂ ಹೆಚ್ಚು ಚಿತ್ರಕಲಾ ಶಿಬಿರಗಳನ್ನು ಏರ್ಪಡಿಸಿದ್ದೇನೆ.
। ರಕ್ಷಾ ಪೂಜಾರಿ,--------------
ರಾಜ್ಯದ ವಿವಿಧ ಅಭಯಾರಣ್ಯಗಳಿಗೆ ತೆರಳಿ ಪ್ರಾಣಿ ಛಾಯಾಚಿತ್ರಗಳನ್ನು ತೆಗೆಯುವುದು ಹವ್ಯಾಸ. ಪ್ರಾಣಿ, ಪಕ್ಷಿಗಳು, ಮರಗಳು ಸೇರಿದಂತೆ ಅಪರೂಪದ ಛಾಯಚಿತ್ರಗಳನ್ನು ವಿದ್ಯಾರ್ಥಿಗಳಿಗೆ ತೋರಿಸಿ ಪರಿಚಯಿಸಲಾಗುತ್ತದೆ. ಇಂದಿನ ಮಕ್ಕಳೆ ನಾಳಿನ ಪ್ರಜೆಗಳು. ಮಕ್ಕಳಿಗೆ ಪರಿಸರ ಜ್ಞಾನ ರೂಪಿಸುವುದು ನಮ್ಮೆಲ್ಲರ ಜವಾಬ್ದಾರಿ. ಪರಿಸರವನ್ನು ಉಳಿಸುವಲ್ಲಿ ಮಕ್ಕಳ ಪಾತ್ರ ಮಹತ್ವದ್ದಾಗಿದೆ.। ಮನೋಜ್ ಶೆಟ್ಟಿಗಾರ್, ವನ್ಯಜೀವಿ ಛಾಯಾಗ್ರಾಹಕ
--------------ಮಗಳು ಸರ್ಕಾರಿ ಶಾಲೆಗಳಿಗೆ ಚಿತ್ರಕಲೆಗಳನ್ನು ಕಲಿಸುವ ಕಾರ್ಯಕ್ಕೆ ನಮ್ಮ ಸಹಕಾರವಿದೆ. ಚಿತ್ರಕಲೆಗಳಲ್ಲಿಯೇ ಖುಷಿಯನ್ನು ಕಾಣುತ್ತಾಳೆ. ಸರ್ಕಾರಿ ಶಾಲೆ ಮಕ್ಕಳಿಗೆ ಪರಿಸರ ಕಾಳಜಿ ಜೊತೆಗೆ ಚಿತ್ರಕಲೆಯನ್ನು ಕಲಿಸಿ ಕೊಡುವ ವಿನೂತನ ಪ್ರಯತ್ನ ಇದಾಗಿದೆ. ಈಗಾಗಲೇ ಕೊಲ್ಕತ್ತಾದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಚಿತ್ರಕಲೆ ಕಾರ್ಯಾಗಾರದಲ್ಲಿ ತಾನು ಬಿಡಿಸಿದ ಚಿತ್ರಗಳ ಪ್ರದರ್ಶನ ನೀಡಿದ್ದಾಳೆ. ಮಗಳ ಸಾಹಸ ನಿಜಕ್ಕೂ ಹೆಮ್ಮೆ ತರುತ್ತದೆ.। ರಮೇಶ್, ರಕ್ಷಾ ಪೂಜಾರಿ ತಂದೆ