ರೈತರ ಜಮೀನುಗಳಲ್ಲಿನ ಸುಟ್ಟ ವಿದ್ಯುತ್‌ ಪರಿವರ್ತಕಗಳನ್ನು ಬದಲಾವಣೆ ಮಾಡುವಲ್ಲಿ ಯಾವುದೇ ವಿಳಂಬವಾಗಿಲ್ಲ ಎಂದು ಮುಖ್ಯಮಂತ್ರಿಗಳ ಕಚೇರಿ ಸ್ಪಷ್ಟನೆ ನೀಡಿದೆ.

ಹಾವೇರಿ: ರೈತರ ಜಮೀನುಗಳಲ್ಲಿನ ಸುಟ್ಟ ವಿದ್ಯುತ್‌ ಪರಿವರ್ತಕಗಳನ್ನು ಬದಲಾವಣೆ ಮಾಡುವಲ್ಲಿ ಯಾವುದೇ ವಿಳಂಬವಾಗಿಲ್ಲ ಎಂದು ಮುಖ್ಯಮಂತ್ರಿಗಳ ಕಚೇರಿ ಸ್ಪಷ್ಟನೆ ನೀಡಿದೆ.

ಹಾವೇರಿ ಜಿಲ್ಲೆಯಲ್ಲಿ ರೈತರ ಜಮೀನುಗಳಲ್ಲಿ ಅಳವಡಿಸಿದ್ದ ವಿದ್ಯುತ್ ಪರಿವರ್ತಕಗಳು ಸುಟ್ಟರೂ ಬದಲಾಯಿಸದ ಹೆಸ್ಕಾಂ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ ಎಂಬ ಕನ್ನಡಪ್ರಭದ ವರದಿಗೆ ಮುಖ್ಯಮಂತ್ರಿಗಳ ಕಚೇರಿಯಿಂದ ತಕ್ಷಣ ಸ್ಪಂದಿಸಿದೆ. ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಅವರ ವಿಶೇಷ ಕರ್ತವ್ಯಾಧಿಕಾರಿ ಡಾ. ಕೆ. ವೈಷ್ಣವಿ ಅವರು, ವಾಸ್ತವಾಂಶ ಪರಿಶೀಲಿಸಿ ತಕ್ಷಣ ಜಿಪಿಎಸ್‌ ಛಾಯಾಚಿತ್ರದೊಂದಿಗೆ ಅನುಪಾಲನಾ ವರದಿ ಸಲ್ಲಿಸುವಂತೆ ಹಾವೇರಿ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ನೀಡಿದ ಸೂಚನೆ ಮೇರೆಗೆ ಈ ಸ್ಪಷ್ಟನೆ ನೀಡಲಾಗಿದೆ.

ಹಾವೇರಿ ಉಪವಿಭಾಗದಲ್ಲಿ ಒಟ್ಟು 7 ಶಾಖೆಗಳಿದ್ದು, ಹಾವೇರಿ ನಗರದಲ್ಲಿ ಒಂದು ಪರಿವರ್ತಕ ದುರಸ್ತಿ ಕೇಂದ್ರ ಇದೆ. ಹಾವೇರಿ ವಿಭಾಗದಲ್ಲಿ ಒಟ್ಟು ಸುಟ್ಟ ಪರಿವರ್ತಕ ಬದಲಾವಣೆಗೆ 296 ಪರಿವರ್ತಕಗಳು ದಾಸ್ತಾನಿನಲ್ಲಿರಿಸಲಾಗಿದೆ. ಪ್ರತಿ ಉಪವಿಭಾಗಗಳಲ್ಲಿ ಸುಟ್ಟ ಪರಿವರ್ತಕಗಳನ್ನು ಬದಲಾಯಿಸಲು ದಾಸ್ತಾನಿನಲ್ಲಿರುವ ಪರಿವರ್ತಕಗಳಿಂದ 72 ಗಂಟೆಗಳೊಳಗಾಗಿ ಬದಲಾವಣೆ ಮಾಡಲಾಗುತ್ತಿದೆ.

ಹಾವೇರಿ ಉಪವಿಭಾಗದ ಗ್ರಾಮೀಣ ಶಾಖೆ-2ರ ವ್ಯಾಪ್ತಿಗೆ ಬರುವ ಕುರುಬಗೊಂಡ ಗ್ರಾಮದ ವ್ಯಾಪ್ತಿಯ 63 ಕೆವಿಎ ಹೆಡಿಯಾಳ ಎಂಬ ಪರಿವರ್ತಕ ನ. 26ರಂದು ಸುಟ್ಟಿರುವ ಬಗ್ಗೆ ಶಾಖಾಧಿಕಾರಿಗಳಿಗೆ ಮಾಹಿತಿ ಬಂದ ಮೇರೆಗೆ ನ.27ರಂದು ಮತ್ತೊಮ್ಮೆ ಪರೀಕ್ಷೆ ಮಾಡಿ ಪರಿಶೀಲಿಸಲಾಗಿದೆ. ಪರಿವರ್ತಕ ವಿಫಲವಾಗಿರುವುದನ್ನು ಖಚಿತಪಡಿಸಿಕೊಂಡು ಪರಿವರ್ತಕದ ಮೇಲೆ ಒಟ್ಟು 7.5 ಎಚ್‌ಪಿ ಸಾಮರ್ಥ್ಯದ 9 ನೀರಾವರಿ ಪಂಪಸೆಟ್‌ಗಳು ಚಾಲನೆಯಲ್ಲಿದ್ದವು. ಅದರಲ್ಲಿ 7 ಅಧಿಕೃತ ಹಾಗೂ 2 ಅನಧಿಕೃತ ಪಂಪಸೆಟ್‌ಗಳು ಚಾಲನೆ ಇರುವುದನ್ನು ಶಾಖಾಧಿಕಾರಿಗಳು ಖಚಿತಪಡಿಸಿಕೊಂಡಿದ್ದಾರೆ. ಅನಧಿಕೃತ ಪಂಪಸೆಟ್‌ಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದು, ಕಡಿತಗೊಳಿಸಿದ ಅನಧಿಕೃತ ಪಂಪಸೆಟ್‌ಗಳ ಬಳಕೆದಾರರು ಪರಿವರ್ತಕವನ್ನು ಬದಲಾವಣೆ ಮಾಡಿಸಿಕೊಡದೇ ಸಿಬ್ಬಂದಿಯೊಂದಿಗೆ ಜಗಳ ಮಾಡಿ ಪರಿವರ್ತಕವನ್ನು ಬದಲಾವಣೆ ಮಾಡಲು ಅವಕಾಶ ಕೊಡದೇ ಇರುವುದರಿಂದ, ಪರಿವರ್ತಕವನ್ನು 72 ಗಂಟೆಯೊಳಗಾಗಿ ಬದಲಾವಣೆ ಮಾಡಲು ಸಾಧ್ಯವಾಗಿರುವುದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅಲ್ಲದೇ ಡಿ.2ರಂದು ಉಪವಿಭಾಗ ಕಚೇರಿಗೆ ಬಂದು ಪರಿವರ್ತಕ ಹಾಕಿಕೊಡುವಂತೆ ಗಲಾಟೆ ಮಾಡಿದ ಮೇರೆಗೆ ಉಪವಿಭಾಗಾಧಿಕಾರಿಗಳು ಹಾಗೂ ಶಾಖಾಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಹೋಗಿ ಅನಧಿಕೃತ ಪಂಪಸೆಟ್‌ಗಳನ್ನು ಕಡಿತಗೊಳಿಸಿದ ಬಗ್ಗೆ ಖಚಿತಪಡಿಸಿಕೊಂಡು ಪರಿವರ್ತಕವನ್ನು ಅಳವಡಿಸಿ ಚಾಲನೆ ಮಾಡಿ ಕೊಟ್ಟಿರುತ್ತಾರೆ. ನೆಲೋಗಲ್ ಗ್ರಾಮದ 63 ಕೆವಿಎ ಬಣಕಾರ ಎಂಬ ಪರಿವರ್ತಕವು ಡಿ.1ರಂದು ಸುಟ್ಟಿದ್ದು, ಈ ಪರಿವರ್ತಕವನ್ನು ಡಿ.2ರಂದು ಬದಲಾವಣೆ ಮಾಡಲಾಗಿದೆ. ನಿಗದಿತ ಅವಧಿಯೊಳಗೆ ಸುಟ್ಟ ಟಿಸಿ ಬದಲಾವಣೆ ಮಾಡಲಾಗಿದ್ದು, ಈ ಪ್ರಕರಣಕ್ಕೆ ಸಂಬಂದಿಸಿದಂತೆ ಹೆಸ್ಕಾಂನಿಂದ ಯಾವುದೇ ವಿಳಂಬವಾಗಿರುವದಿಲ್ಲ ಎಂದು ಹಾವೇರಿ ಕಾರ್ಯನಿರ್ವಾಹಕ ಇಂಜಿನಿಯರ್‌ ವರದಿ ನೀಡಿದ್ದಾರೆ.