ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು ದೇಶದಲ್ಲಿಯೇ ಸುದೀರ್ಘ 45 ವರ್ಷ ಚುನಾಯಿತರಾಗಿ ಪರಿಷತ್‌ ಸದಸ್ಯರಾದವರು ಯಾರು ಇಲ್ಲ. ಹೊರಟ್ಟಿ ಅವರು ನೂರಾರು ಕೆಲಸ ಮಾಡಿದ್ದಾರೆ. ರಾಜಕಾರಣಿಗಳಿಗೆ, ಯುವಸಮುದಾಯಕ್ಕೆ ಮಾದರಿಯಾಗಿದ್ದಾರೆ. ಅವರನ್ನು ಅಭಿನಂದಿಸುತ್ತಿರುವುದು ನಮ್ಮೆಲ್ಲರ ಹೆಮ್ಮೆಯ ವಿಷಯ.

ಹುಬ್ಬಳ್ಳಿ:

45 ವರ್ಷದಿಂದ ವಿಧಾನಪರಿಷತ್‌ಗೆ ಸದಸ್ಯರಾಗಿ, ಬರೋಬ್ಬರಿ 8 ಬಾರಿ ಆಯ್ಕೆಯಾಗಿ ವಿಶ್ವ ದಾಖಲೆ ನಿರ್ಮಿಸಿದ, ಸಭಾಪತಿ, ಸೋಲ್ಲಿಲ್ಲದ ಸರದಾರ ಬಸವರಾಜ ಹೊರಟ್ಟಿ ಅವರ ಅಭಿನಂದನಾ ಸಮಾರಂಭವು ಶನಿವಾರ (ಡಿ. 13) ಸಂಜೆ 4 ಗಂಟೆಗೆ ನೆಹರು ಮೈದಾನದಲ್ಲಿ ನಡೆಯಲಿದೆ.

ಇದಕ್ಕಾಗಿ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಗಣ್ಯಾತಿಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದು, ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಶುಕ್ರವಾರ ಸಂಜೆ ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿದರು. ಅಭಿಮಾನಗಳ ಬಳಗದಿಂದ ಗೌರವ ಸನ್ಮಾನ ಏರ್ಪಡಿಸಿದ್ದು ಸಮಿತಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ನೇತೃತ್ವದಲ್ಲಿ ಅದ್ಧೂರಿ ಕಾರ್ಯಕ್ರಮಕ್ಕೆ ಅಂತಿಮ ಸಿದ್ಧತೆ ಪೂರ್ಣಗೊಳಿಸಲಾಗಿದೆ. ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ಗಣ್ಯರ ಅಭಿನಂದನೆಯ ಬ್ಯಾನರ್‌, ಬಂಟಿಂಗ್ಸ್‌, ಕಟೌಟ್‌ ರಾರಾಜಿಸುತ್ತಿವೆ.

ಸಿಎಂ-ಡಿಸಿಎಂ ಭಾಗಿ:

ಹೊರಟ್ಟಿ ಅವರು ನಡೆದು ಬಂದ ದಾರಿ ಕುರಿತು ಕಿರುಚಿತ್ರ ಪ್ರದರ್ಶಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಎಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಭಾಧ್ಯಕ್ಷ ಯು.ಟಿ. ಖಾದರ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ. ಪಾಟೀಲ, ಸಚಿವ ಸಂತೋಷ ಲಾಡ್, ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಸೇರಿದಂತೆ ವಿವಿಧ ಖಾತೆಗಳ ಸಚಿವರು, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

೬೦/೪೦ ವೇದಿಕೆ:

ಕಾರ್ಯಕ್ರಮಕ್ಕಾಗಿ ೬೦/೪೦ ಅಡಿಯ ಮುಖ್ಯ ವೇದಿಕೆ ನಿರ್ಮಿಸಿದ್ದು 45 ಗಣ್ಯರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ವೇದಿಕೆಯ ಎರಡು ಬದಿ ೨೦/೨೦ ಅಡಿಯ ಸಣ್ಣ ವೇದಿಕೆ ನಿರ್ಮಿಸಿದ್ದು ಎಲ್‌ಇಡಿ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದ್ದು, ಪೊಲೀಸ್‌ ಭದ್ರತೆ ಏರ್ಪಡಿಸಲಾಗಿದೆ. ಎರಡು ಗೇಟ್‌ಗಳಲ್ಲಿ ಜನರಿಗೆ ಹೋಗಲು, ಬರಲು ವ್ಯವಸ್ಥೆ ಮಾಡಲಾಗಿದೆ.

ಸಚಿವ ಲಾಡ್‌ ಭೇಟಿ:

ಶುಕ್ರವಾರ ಸಂಜೆ ಸಚಿವ ಸಂತೋಷ ಲಾಡ್‌ ಮೈದಾನಕ್ಕೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು. ಬಳಿಕ ಅಭಿನಂದನಾ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಸಚಿವರು, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು ದೇಶದಲ್ಲಿಯೇ ಸುದೀರ್ಘ 45 ವರ್ಷ ಚುನಾಯಿತರಾಗಿ ಪರಿಷತ್‌ ಸದಸ್ಯರಾದವರು ಯಾರು ಇಲ್ಲ. ಹೊರಟ್ಟಿ ಅವರು ನೂರಾರು ಕೆಲಸ ಮಾಡಿದ್ದಾರೆ. ರಾಜಕಾರಣಿಗಳಿಗೆ, ಯುವಸಮುದಾಯಕ್ಕೆ ಮಾದರಿಯಾಗಿದ್ದಾರೆ. ಅವರನ್ನು ಅಭಿನಂದಿಸುತ್ತಿರುವುದು ನಮ್ಮೆಲ್ಲರ ಹೆಮ್ಮೆಯ ವಿಷಯ ಎಂದರು.

ಈ ವೇಳೆ ಅಭಿನಂದನಾ ಸಮಿತಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ, ಲಿಂಗರಾಜ ಪಾಟೀಲ, ಮೋಹನ ಲಿಂಬಿಕಾಯಿ, ರಾಜಣ್ಣ ಕೊರವಿ, ವೀರೇಶ ಸಂಗಳದ, ಶಶಿ ಸಾಲಿ, ಅನಿಲಕುಮಾರ ಪಾಟೀಲ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.