ಕೊಬ್ಬರಿ ಖರೀದಿಸಿ ಎರಡು ತಿಂಗಳಾದರೂ ಹಣ ಇಲ್ಲ: ರೈತ ಸಂಘದ ಎಲ್.ಸುರೇಶ್

| Published : Jun 02 2024, 01:45 AM IST

ಕೊಬ್ಬರಿ ಖರೀದಿಸಿ ಎರಡು ತಿಂಗಳಾದರೂ ಹಣ ಇಲ್ಲ: ರೈತ ಸಂಘದ ಎಲ್.ಸುರೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಆರು ತಿಂಗಳ ಹಿಂದೆ ಖರೀದಿಸಬೇಕಿದ್ದ ಕೊಬ್ಬರಿಯನ್ನು ಬಹಳ ತಡವಾಗಿ ಖರೀದಿಸಲಾಗಿದೆ. ಕೊಬ್ಬರಿ ಖರೀದಿಸಿ ಎರಡು ತಿಂಗಳಾದರೂ ಕೂಡ ರೈತರ ಬ್ಯಾಂಕ್ ಖಾತೆಗೆ ಹಣ ಹಾಕಿಲ್ಲ. ಶಾಲಾ- ಕಾಲೇಜುಗಳು ಪ್ರಾರಂಭವಾಗುತ್ತಿದ್ದು, ಮಕ್ಕಳ ವಿದ್ಯಾಭ್ಯಾಸದ ಶುಲ್ಕ ಪಾವತಿಸಲಾಗಗುತ್ತಿಲ್ಲ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಕೊಬ್ಬರಿ ಖರೀದಿಸಿ ಎರಡು ತಿಂಗಳಾದರೂ ಇದುವರೆಗೂ ಬ್ಯಾಂಕ್ ಖಾತೆಗೆ ಸರ್ಕಾರ ಹಣ ಜಮೆ ಮಾಡದಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಮೂಲ ಸಂಘಟನೆ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಲ್.ಸುರೇಶ್ ಆರೋಪಿಸಿದರು.

ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ತಡವಾಗಿ ಕೊಬ್ಬರಿ ಕೇಂದ್ರ ತೆರೆದಿರುವುದರಿಂದ ರೈತರು ಅತಂತ್ರ ಪರಿಸ್ಥಿತಿಗೆ ಸಿಲುಕುವಂತಾಗಿದೆ ಎಂದರು.

ಆರು ತಿಂಗಳ ಹಿಂದೆ ಖರೀದಿಸಬೇಕಿದ್ದ ಕೊಬ್ಬರಿಯನ್ನು ಬಹಳ ತಡವಾಗಿ ಖರೀದಿಸಲಾಗಿದೆ. ಕೊಬ್ಬರಿ ಖರೀದಿಸಿ ಎರಡು ತಿಂಗಳಾದರೂ ಕೂಡ ರೈತರ ಬ್ಯಾಂಕ್ ಖಾತೆಗೆ ಹಣ ಹಾಕಿಲ್ಲ. ಶಾಲಾ- ಕಾಲೇಜುಗಳು ಪ್ರಾರಂಭವಾಗುತ್ತಿದ್ದು, ಮಕ್ಕಳ ವಿದ್ಯಾಭ್ಯಾಸದ ಶುಲ್ಕ ಪಾವತಿಸಲಾಗಗುತ್ತಿಲ್ಲ. ರೈತರು ಸಾಲ ಮಾಡಿ, ಮಾಡಿದ ಸಾಲವನ್ನು ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ತಂದೊಡ್ಡಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ರೈತರಿಂದ ಖರೀದಿಸಿರುವ ಕೊಬ್ಬರಿ ಹಣವನ್ನು ತಕ್ಷಣ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡುವ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ತುಮಕೂರು ಜಿಲ್ಲೆಯ ಕೊಬ್ಬರಿ ಖರೀದಿ ಕೇಂದ್ರಗಳಲ್ಲಿ ರೈತರಿಂದ ಖರೀದಿಸಿರುವ ಕೊಬ್ಬರಿ ಹಣವನ್ನು 15 ದಿನದೊಳಗೆ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಆದರೆ, ಜಿಲ್ಲೆಯಲ್ಲಿ ನಮ್ಮ ತಾಲೂಕಿನವರೇ ಉಸ್ತುವಾರಿ ಸಚಿವರಾಗಿದ್ದರೂ ಕೂಡ ಜಿಲ್ಲೆಯ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.

ತಾಲೂಕಿನಲ್ಲಿ ಗ್ರಾಮಲೆಕ್ಕಾಧಿಕಾರಿಗಳು ಆರ್‌ಟಿಸಿಗೆ ಆಧಾರ್ ಜೋಡಣೆ ಮಾಡದಿರುವುದರಿಂದ ತಾಲೂಕಿನ ಬಹುತೇಕ ರೈತರಿಗೆ ಬರ ಪರಿಹಾರದ ಹಣ ಸಿಕ್ಕಿಲ್ಲ. ಆದ್ದರಿಂದ ಈ ಕೂಡಲೇ ಅಂತಹ ರೈತರ ಮನೆ ಬಾಗಿಲಿಗೆ ಭೇಟಿ ಕೊಟ್ಟು ಆರ್‌ಟಿಸಿಗೆ ಆಧಾರ್ ಜೋಡಣೆ ಮಾಡಬೇಕು ಎಂದರು.

ಅಕ್ರಮ ಸಕ್ರಮ ಯೋಜನೆ ಕೈಬಿಟ್ಟಿರುವುದರಿಂದ ಹೊಸದಾಗಿ ಕೊಳವೆಬಾವಿ ಕೊರೆಸುವ ರೈತರಿಗೆ ವಿದ್ಯುತ್ ಸಂಪರ್ಕ ಪಡೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಈ ಯೋಜನೆಯನ್ನು ಮರು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ತಾಲೂಕಿನ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ 50 ರಿಂದ 60 ಸಾವಿರ ದುಬಾರಿ ಶುಲ್ಕ ಪಡೆಯುತ್ತಿದ್ದು, ಈ ಸಮಸ್ಯೆಗಳನ್ನು ಶೀಘ್ರದಲ್ಲಿ ಸರಿಪಡಿಸುವ ನಿಟ್ಟಿನಲ್ಲಿ ತಾಲೂಕು ಮತ್ತು ಜಿಲ್ಲಾಡಳಿತ ಅಗತ್ಯ ಕ್ರಮ ವಹಿಸುವಂತೆ ಮನವಿ ಸಲ್ಲಿಸಲಾಗುವುದು. ಸಮಸ್ಯೆ ಬಗೆಹರಿಸದಿದ್ದರೆ ಮೂಲ ಸಂಘಟನೆಯ ರೈತ ಸಂಘದ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಕೆ.ಎಸ್.ರಾಜು, ಪ್ರಧಾನ ಕಾರ್ಯದರ್ಶಿ ಸಿ.ಟಿ.ಚಿಕ್ಕೇಗೌಡ(ಲೋಕೇಶ್), ಖಜಾಂಚಿ ಬೋರೇಗೌಡ, ಪದಾಧಿಕಾರಿಗಳಾದ ಡಿ.ಬಿ.ಮಂಜು, ರವಿಕಿರಣ್, ಎನ್.ಆರ್.ಮನೋಜ್, ವೆಂಕಟೇಶ್, ರವಿ, ಸಿದ್ದಲಿಂಗಯ್ಯ, ರಾಜಣ್ಣ ಸೇರಿ ಹಲವರು ಇದ್ದರು.