ಬ್ಯಾರೀಸ್ ಇಂಟೆಗ್ರೇಟೆಡ್ ಪಿಯು ಕಾಲೇಜು ಉದ್ಘಾಟನೆ

| Published : Jun 02 2024, 01:45 AM IST

ಸಾರಾಂಶ

ಟಿಯು ವಿಶ್ವವಿದ್ಯಾನಿಲಯದಿಂದ ರ್‍ಯಾಂಕ್‌ ವಿಜೇತರಾದ ಬಿಐಟಿ ಕಾಲೇಜಿನ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. 2023-24ನೇ ಶೈಕ್ಷಣಿಕ ವರ್ಷದ ಪಠ್ಯೇತರ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸ್ಮರಣಿಕೆ, ಪ್ರಮಾಣ ಪತ್ರ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿನ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಪ್ರತಿಷ್ಠಿತ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ನೂತನ ಬ್ಯಾರೀಸ್ ಇಂಟೆಗ್ರೇಟೆಡ್ ಪಿಯು ಕಾಲೇಜು ಶನಿವಾರ ಉದ್ಘಾಟನೆಗೊಂಡಿತು.ಮಂಗಳೂರು ವಿವಿ ಸಮೀಪದ ಇನೋಳಿಯಲ್ಲಿರುವ ಬ್ಯಾರೀಸ್ ಕಾಲೇಜ್‌ ಕ್ಯಾಂಪಸ್‌ನಲ್ಲಿ ಸುಸಜ್ಜಿತ ಅತ್ಯಾಧುನಿಕ ನೂತನ ಕಟ್ಟಡದಲ್ಲಿ‌ ಕಾಲೇಜು ಆರಂಭಗೊಂಡಿದೆ.

ರಾಜ್ಯ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ನೂತನ ಕಾಲೇಜು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಬ್ಯಾರೀಸ್ ಗ್ರೂಪ್‌ನ ಬ್ಯಾರೀಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ (BIT), ಬ್ಯಾರೀಸ್ ಎನ್ವಿರೋ ಅರ್ಕಿಟೆಕ್ಚರ್ ಡಿಸೈನ್ ಸ್ಕೂಲ್ (BEADS), ಬ್ಯಾರೀಸ್ ಇನ್ಸ್ ಟಿಟ್ಯೂಟ್ ಆಫ್ ಎಮರ್ಜಿಂಗ್ ಸಯನ್ಸಸ್ (BIES) ಹಾಗು ಬ್ಯಾರೀಸ್ ಪಾಲಿ ಟೆಕ್ನಿಕ್ ಗಳ ವಾರ್ಷಿಕೋತ್ಸವ ‘ಬ್ಯಾರೀಸ್ ಉತ್ಸವ್ 2024’ ಕೂಡ ನಡೆಯಿತು.ಬಳಿಕ ಮಾತನಾಡಿದ ಸ್ಪೀಕರ್‌ ಯು.ಟಿ.ಖಾದರ್‌, ಬ್ಯಾರೀಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಸಯ್ಯದ್ ಮುಹಮ್ಮದ್ ಬ್ಯಾರಿ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಕನಸು ಕಂಡು ಅದನ್ನು ನನಸಾಗಿಸಲು ಶ್ರಮಿಸುತ್ತಿದ್ದಾರೆ. ದೇಶ-ವಿದೇಶ ಸುತ್ತಿ ಶಿಕ್ಷಣ ಕ್ಷೇತ್ರದ ಹೊಸ ಮಜಲುಗಳನ್ನು ಅರಿತುಕೊಂಡಿದ್ದಾರೆ. ಹಾಗಾಗಿ ಶಿಕ್ಷಣ ಕ್ಷೇತ್ರದಲ್ಲಿ ಅವರ ವಿಶೇಷ ಯೋಜನೆಗಳಿಗೆ ಗ್ರಾಮಸ್ಥರು ಸರ್ವ ರೀತಿಯ ಸಹಕಾರ ನೀಡಬೇಕಿದೆ ಎಂದರು. ಮಂಗಳೂರು ನಗರ ಪೊಲೀಸ್ ಕಮಿಷನರ್‌ ಅನುಪಮ್ ಅಗರ್‌ವಾಲ್‌ ಮಾತನಾಡಿ, ದೇಶದ ಭವಿಷ್ಯವು ಸುಶಿಕ್ಷಿತರ ಪರಿಶ್ರಮವನ್ನು ಅವಲಂಬಿಸಿದೆ‌‌ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾರೀಸ್ ಅಕಾಡೆಮಿ ಆಫ್ ಲರ್ನಿಂಗ್‌ನ ಅಧ್ಯಕ್ಷ ಹಾಗೂ ಆಡಳಿತ ಟ್ರಸ್ಟಿ ಸಯ್ಯದ್ ಮೊಹಮ್ಮದ್ ಬ್ಯಾರಿ, ನಾನು ಹುಟ್ಟಿದ್ದು ಮೂಡಿಗೆರೆ ಮತ್ತು ಬೆಳೆದದ್ದು ಕುಂದಾಪುರದಲ್ಲಿ‌. ಆದರೆ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಿದ್ದು ಮಾತ್ರ ಮಂಗಳೂರಿನಲ್ಲಿ. 1993ರಲ್ಲಿ ಮಂಗಳೂರಿನಲ್ಲಿ ಹಿಸ್‌ಗ್ರೇಸ್ ಶಿಕ್ಷಣ ಸಂಸ್ಥೆ ಆರಂಭಿಸಿದಾಗ ಇಷ್ಟು ದೊಡ್ಡ ಬ್ಯಾರೀಸ್ ಶಿಕ್ಷಣ ಸಂಸ್ಥೆಗಳು ತಲೆಎತ್ತಿ ನಿಲ್ಲಬಹುದೆಂದು ಊಹಿಸಿರಲಿಲ್ಲ ಎಂದರು.

ಮೀಫ್ ಅಧ್ಯಕ್ಷ ಮೂಸಬ್ಬ ಬ್ಯಾರಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿರುವ ಶಿಕ್ಷಣ ಸಂಸ್ಥೆಗಳ ಮೂಲಭೂತ ಸೌಕರ್ಯಗಳ ಕೊರತೆ ನೀಗಿಸಲು ಸಯ್ಯದ್ ಮುಹಮ್ಮದ್ ಬ್ಯಾರಿ ತನ್ನದೇ ಆದ ಕೊಡುಗೆಗಳನ್ನು ‌ನೀಡುತ್ತಿದ್ದಾರೆ‌ ಎಂದರು.

ಬ್ಯಾರೀಸ್ ಶಿಕ್ಷಣ ಸಂಸ್ಥೆಗಳ ಟ್ರಸ್ಟಿ ಅಬೂಬಕರ್ ಸಿದ್ದಿಕ್‌ ಬ್ಯಾರಿ, ಅಬ್ದುಲ್ ರಹ್ಮಾನ್, ಡಾ. ಆಸೀಫ್, ಬಿಐಟಿ ಪ್ರಾಂಶುಪಾಲ ಡಾ. ಎಸ್‌ಐ ಮಂಜುರ್ ಬಾಷಾ, ಡಾ. ಅಝೀಝ್ ಮುಸ್ತಫಾ, ಖಲೀಲ್ ರಝಾಕ್ ಮತ್ತಿತರರು ಇದ್ದರು. ಬ್ಯಾರೀಸ್ ಇಂಟರ್‌ಗ್ರೇಟೆಡ್ ಪಿಯು ಕಾಲೇಜಿನ‌ ಪ್ರಾಂಶುಪಾಲ ಅಬ್ದುಲ್ ಲತೀಫ್ ಸ್ವಾಗತಿಸಿದರು. ವಿದ್ಯಾರ್ಥಿನಿ‌ ಹನ್ನಾ ಮುಹಮ್ಮದ್ ನಿರೂಪಿಸಿದರು.

ಈ ಸಂದರ್ಭ ವಿಟಿಯು ವಿಶ್ವವಿದ್ಯಾನಿಲಯದಿಂದ ರ್‍ಯಾಂಕ್‌ ವಿಜೇತರಾದ ಬಿಐಟಿ ಕಾಲೇಜಿನ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. 2023-24ನೇ ಶೈಕ್ಷಣಿಕ ವರ್ಷದ ಪಠ್ಯೇತರ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸ್ಮರಣಿಕೆ, ಪ್ರಮಾಣ ಪತ್ರ ನೀಡಲಾಯಿತು.

ಪಿಯು ದಾಖಲಾತಿ ಆರಂಭ ಹೊಸ ಪಿಯು ಕಾಲೇಜಿನಲ್ಲಿ ದಾಖಲಾತಿ ಆರಂಭವಾಗಿದ್ದು, ಈ ತಿಂಗಳಲ್ಲೇ ತರಗತಿಗಳು ಪ್ರಾರಂಭವಾಗಲಿವೆ. ಇಲ್ಲಿ ವಿಜ್ಞಾನ (PCMB ಮತ್ತು PCMC) ಹಾಗು ವಾಣಿಜ್ಯ (EBAC) ವಿಷಯಗಳಲ್ಲಿ ಪಿಯು ಕೋರ್ಸ್‌ಗಳಿವೆ. ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಅನುಭವೀ ಶಿಕ್ಷಕರು, ಕಲಿಯುವ ಅತ್ಯುತ್ತಮ ವಾತಾವರಣ, ಶಿಸ್ತುಬದ್ಧ ಹಾಗೂ ನೈತಿಕ ಮೌಲ್ಯಗಳ ಜೊತೆ ಕಲಿಕೆಗೆ ಪೂರಕ ಸೌಲಭ್ಯಗಳು ಇಲ್ಲಿವೆ ಎಂದು ಬ್ಯಾರೀಸ್ ಅಕಾಡೆಮಿ ಆಫ್ ಲರ್ನಿಂಗ್‌ನ ಅಧ್ಯಕ್ಷ ಸಯ್ಯದ್ ಬ್ಯಾರಿ ತಿಳಿಸಿದ್ದಾರೆ.