ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮೂಲಭೂತ ಸೌಕರ್ಯಗಳನ್ನು ನೀಡುವ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸುತ್ತಿದ್ದು, ಪ್ರತಿ ಮಹಾನಗರಪಾಲಿಕೆಗಳ ಅಭಿವೃದ್ಧಿ ಯೋಜನೆಗಳಿಗೆ ನಗರಾಭಿವೃದ್ದಿ ಇಲಾಖೆಯು 200 ಕೋಟಿ ರು. ಮಂಜೂರು ಮಾಡಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ತಿಳಿಸಿದರು.ನಗರದ ಬೊಮ್ಮನಕಟ್ಟೆ ‘ಬಿ’ ಬ್ಲಾಕ್ ನಲ್ಲಿ ಶಿವಮೊಗ್ಗ ಮಹಾನಗರಪಾಲಿಕೆಯ ವತಿಯಿಂದ ಶನಿವಾರ ಏರ್ಪಡಿಸಿದ್ದ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ (ಹಂತ-2), ಎನ್.ಜಿ.ಟಿ. ಅನುದಾನದ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ ಬಡಾವಣೆಯ ನಾಮಕರಣ ಸಮಾರಂಭದಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಅನುದಾನದ ಕೊರತೆ ಇಲ್ಲ. 4.56 ಲಕ್ಷ ಕೋಟಿ ರು. ವೆಚ್ಚದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ (ಹಂತ-2) ಯಡಿ ಸುಮಾರು 127.5 ಕೋಟಿ ವೆಚ್ಚದ ಕಾಮಗಾರಿಗೆ ಶನಿವಾರ ಚಾಲನೆ ನೀಡಿದ್ದು, ಮುಂದಿನ 20 ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಿದರು.ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಹಂತ ಹಂತವಾಗಿ ಹಣ ಮಂಜೂರು ಮಾಡುವ ಮೂಲಕ ಯೋಜನೆಯನ್ನು ಸಾಕಾರಗೊಳಿಸಲು ಕಟಿಬದ್ದರಾಗಿದ್ದೇವೆ. ಪೌರ ಕಾರ್ಮಿಕರ ವಸತಿ ಯೋಜನೆಯಡಿ ಬಾಕಿ ಕಾಮಗಾರಿಗೆ ಅಗತ್ಯವಾದ ಅನುದಾನ ಕೊಡಿಸಲಾಗುವುದು. ನಗರ, ಪಟ್ಟಣ, ಪಾಲಿಕೆಗಳಿಗೆ ಕುಡಿಯುವ ನೀರಿಗಾಗಿ 25 ಸಾವಿರ ಕೋಟಿ ರು. ನೀಡಲಾಗಿದೆ. ಶೇ.70ರಷ್ಟು ನಗರಗಳಿಗೆ ಕುಡಿಯುವ ನೀರು ಮತ್ತು ಯುಜಿಡಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಕೆರೆಯ ನೀರನ್ನು ಕೆರೆಗೆ ಚೆಲ್ಲು ಎಂಬಂತೆ ನಿಮ್ಮ ಹಣದಿಂದಲೇ ಅಭಿವೃದ್ಧಿ ಯೋಜನೆ ಸರ್ಕಾರ ಕೈಗೊಳ್ಳುತ್ತಿದೆ. ಸರ್ಕಾರ ಸ್ಮಾರ್ಟ್ ಸಿಟಿಗೆ ಶೇ.50 ರಷ್ಟು ಹಣ ನೀಡಿದೆ. ಯುಬಿಐಡಿ ಪ್ರಕಾರ ಪ್ರತಿ ತಿಂಗಳು ಜೀವನ ನಡೆಸಲು ಅಗತ್ಯವಾದ ಆರ್ಥಿಕ ಸಹಾಯ ಒದಗಿಸುತ್ತಿರುವ ಸರ್ಕಾರ ಇಡೀ ಪ್ರಪಂಚದಲ್ಲೇ ನಮ್ಮದಾಗಿದೆ ಎಂದರು.ವಿವಿಧ ನಿಗಮದ ಅಧ್ಯಕ್ಷರಾದ ಕೆ.ಚೇತನ್, ಜಿ. ಪಲ್ಲವಿ, ಚಂದ್ರಭೂಪಾಲ್, ಜಿಲ್ಲಾಧಿಕಾರಿ(ಪ್ರಭಾರ) ಎನ್.ಹೇಮಂತ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್, ಎಡಿಸಿ ಅಭಿಷೇಕ್, ಡಿಯುಡಿಸಿ ಯೋಜನಾ ನಿರ್ದೇಶಕ ರಂಗಸ್ವಾಮಿ, ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ ಇದ್ದರು.
ಸಂಪುಟ ವಿಸ್ತರಣೆ ಹೈಕಮಾಂಡ್ ನಿರ್ಧಾರ: ಬೈರತಿ ಸುರೇಶ್
ಶಿವಮೊಗ್ಗ: ರಾಜ್ಯದ ಮಹಾನಗರಗಳ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಸರ್ಕಾರವು 2600 ಕೋಟಿ ರು. ಮೀಸಲಿಡಲಾಗಿದೆ. ಅದರಲ್ಲಿ ಶಿವಮೊಗ್ಗ ನಗರಕ್ಕೆ 200 ಕೋಟಿ ರು. ಅನುದಾನ ನೀಡಲಾಗಿದೆ ಎಂದು ಸಚಿವ ಭೈರತಿ ಸುರೇಶ್ ತಿಳಿಸಿದರು. ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಅನುದಾನದಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇವತ್ತು ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು. ಗ್ಯಾಸ್ ಮತ್ತು ಇಂಧನ ಬೆಲೆ ಏರಿಕೆ ಕುರಿತು ಆಕ್ರೋಶ ವ್ಯಕ್ತಪಡಿಸಿದ ಅವರು, ಐದು ರಾಜ್ಯಗಳಲ್ಲಿ ಚುನಾವಣೆ ಮುಗಿಯುತ್ತಿದ್ದಂತೆಯೇ ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡುವ ಮೂಲಕ ಬಡವರ ಮೇಲೆ ಹೊರೆ ಹಾಕುತ್ತಿದೆ. ಪೆಟ್ರೋಲ್, ಡಿಸೇಲ್ ಮತ್ತು ಗ್ಯಾಸ್ ಬೆಲೆ ಏರಿಕೆಯು ವಿದ್ಯುತ್ ಉತ್ಪಾದನಾ ವೆಚ್ಚದ ಮೇಲೆಯೂ ಪ್ರಭಾವ ಬೀರುತ್ತದೆ. ಇದಕ್ಕೆಲ್ಲ ಕೇಂದ್ರದ ತಪ್ಪು ನೀತಿಗಳೇ ಕಾರಣ ಎಂದು ಆರೋಪಿಸಿದರು. ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಬಗ್ಗೆ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಪಕ್ಷ ನೀಡುವ ಜವಾಬ್ದಾರಿಯನ್ನು ನಿರ್ವಹಿಸಲು ನಾವೆಲ್ಲರೂ ಬದ್ಧ. ಬಿಜೆಪಿಯವರು ಈ ಹಿಂದೆ ಮೂವರು ಮುಖ್ಯಮಂತ್ರಿಗಳನ್ನು ಬದಲಿಸಿದ್ದರು, ಹಾಗಿದ್ದ ಮೇಲೆ ಸಂಪುಟದಲ್ಲಿ ಬದಲಾವಣೆ ಮಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.ಜನಪರ ಯೋಜನೆಗಳಲ್ಲಿ ಬಂಗಾರಪ್ಪನವರು ಜೀವಂತ: ಸಚಿವ ಮಧು
ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಬಡಜನರ ಕಲ್ಯಾಣಕ್ಕಾಗಿ ಶ್ರಮಿಸಿದ ಮಾಜಿ ಮುಖ್ಯಮಂತ್ರಿಗಳಾದ ದಿ.ಎಸ್. ಬಂಗಾರಪ್ಪ ಅವರ ಹೆಸರನ್ನು ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಗೆ ನಾಮಕರಣ ಮಾಡಬೇಕು ಎಂದು2016ರಿಂದ ಪಕ್ಷಾತೀತವಾದ ಬೇಡಿಕೆ ಇತ್ತು. ಇಂದು ಅದು ಸಾಕಾರಗೊಳ್ಳುತ್ತಿರುವುದಕ್ಕೆ ಸಂತಸವಾಗಿದೆ ಎಂದರು.
ಬಂಗಾರಪ್ಪನವರು ಜಾರಿಗೆ ತಂದ ರೈತರ ಪಂಪ್‌ಸೆಟ್‌ಗೆ, ಉಚಿತ ವಿದ್ಯುತ್ ಯೋಜನೆಗೆ 20 ಸಾವಿರ ಕೋಟಿ ರು. ಅನುದಾನ ಸರ್ಕಾರ ನೀಡುತ್ತಿದೆ. ಗ್ರಾಮೀಣ ಭಾಗದ ಯುವಜನತೆಯನ್ನು ಮುಂದೆ ತರಲು, ಉತ್ತಮ ಅವಕಾಶ ನೀಡಲು ಶೇ. 15 ಗ್ರಾಮೀಣ ಕೃಪಾಂಕ ಯೋಜನೆ ನಾವೆಲ್ಲ ಸ್ಮರಿಸುತ್ತಿದ್ದೇವೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದವರು ವಾಸಿಸುವ ಪ್ರದೇಶಗಳಲ್ಲಿ ಪ್ರಾರ್ಥನಾ ಮಂದಿರಗಳು ಹಾಗೂ ಪೂಜಾ ಸ್ಥಳಗಳನ್ನು ನಿರ್ಮಿಸಲು ಮತ್ತು ಜೀರ್ಣೋದ್ಧಾರ ಮಾಡಲು ಆರ್ಥಿಕ ನೆರವು ನೀಡುವ ಆರಾಧನಾ ಯೋಜನೆ ಜಾರಿಗೆ ತಂದು ಎಲ್ಲರಿಗೂ ಸಮಾನ ಅವಕಾಶ ನೀಡಿದ್ದಾರೆ ಎಂದು ಸ್ಮರಿಸಿದರು.-----
ಅಂದಿನ ಅಹಿಂದ ಪರವಾದ ನಾಯಕ ಬಂಗಾರಪ್ಪನವರನ್ನು ನೋಡಿ ಬೆಳೆದ ನಮಗೆಲ್ಲ ಅವರು ಆದರ್ಶ ವ್ಯಕ್ತಿ. ಅವರ ಕಾರ್ಯಕ್ರಮ ನೋಡಿಯೇ ರಾಜಕಾರಣಕ್ಕೆ ಪ್ರವೇಶಿಸಿದ್ದೇನೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುತ್ತಿದ್ದೇನೆ.ಭೈರತಿ ಸುರೇಶ್, ಸಚಿವರು, ನಗರಾಭಿವೃದ್ಧಿ ಮತ್ತು ನಗರ ಯೋಜನೆ
------ಆರಾಧನಾ, ಅಕ್ಷಯ, ಆಶ್ರಯ ಯೋಜನೆಗಳನ್ನು ನೀಡಿದ ಬಡವರ ನಾಯಕ ಬಂಗಾರಪ್ಪನವರನ್ನು ನಾವು ಮರೆಯುವ ಹಾಗಿಲ್ಲ. ಜಿಲ್ಲೆಯ ಕುಡಿಯುವ ನೀರಿಗೆ ಎಲ್ಲ ಮುಖ್ಯಮಂತ್ರಿಗಳು ಸಹಕರಿಸಿದ್ದಾರೆ. ಪ್ರಸ್ತುತ ಬೆಳೆಯುತ್ತಿರುವ ಶಿವಮೊಗ್ಗ ನಗರಕ್ಕೆ ಕುಡಿಯುವ ನೀರಿನ ಯೋಜನೆಗೆ 490 ಕೋಟಿ ರು. ಅವಶ್ಯಕತೆ ಇದ್ದು, ಕ್ರಿಯಾ ಯೋಜನೆ ತಯಾರಿಸಿದ್ದು ನಗರಾಭಿವೃದ್ಧಿ ಸಚಿವರು ಈ ಬಗ್ಗೆ ಭರವಸೆ ನೀಡಿದ್ದಾರೆ. ಪೌರ ಕಾರ್ಮಿಕರಿಗೆ ವಸತಿ ಯೋಜನೆಯ ಬಾಕಿ ಕಾಮಗಾರಿಗಳಿಗೆ ಅವಶ್ಯವಿರುವ 27 ಕೋಟಿ ರು. ಅನುದಾನ ನೀಡಬೇಕೆಂದು ಮನವಿ ಮಾಡುತ್ತೇನೆ.
-ಎಸ್. ಎನ್ ಚನ್ನಬಸಪ್ಪ, ಶಾಸಕ.-----
ಬಡವರಿಗಾಗಿ ಆರಾಧನಾ, ಆಶ್ರಯ, ಬಗರ್ ಹುಕುಂ, ಗ್ರಾಮೀಣ ಕೃಪಾಂಕ, ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಹೀಗೆ ಹಲವಾರು ಯೋಜನೆ ನೀಡಿದ ಮಾಜಿ ಮುಖ್ಯಮಂತ್ರಿಗಳಾದ ಎಸ್.ಬಂಗಾರಪ್ಪನವರು ನನ್ನಂತಹ ಯುವ ನಾಯಕರನ್ನು ಸಹ ಬೆಳೆಸಿದ್ದಾರೆ.-ಗೋಪಾಲಕೃಷ್ಣ ಬೇಳೂರು, ಶಾಸಕ.
----ಬಡವರ ಬಂಧು ಬಂಗಾರಪ್ಪನವರು ನೀಡಿರುವ ಕೊಡುಗೆಗಳು, ಕೆಲಸಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಬೇಕಿದೆ. ರೈತರ ಪಂಪ್‌ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುವ ಯೋಜನೆ, ಬಗರ್ ಹುಕುಂ ಸಮಿತಿ ರಚನೆ ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನು ನೀಡಿರುವುದು ಅತ್ಯಂತ ಅನುಕೂಲವಾಗಿದೆ.
- ಶಾರದಾ ಪೂರ್ಯಾನಾಯ್ಕ್, ಶಾಸಕಿ.----
ಇತಿಹಾಸ ತಿಳಿಯದೆ ಭವಿಷ್ಯ ಕಟ್ಟಲು ಸಾಧ್ಯವಿಲ್ಲ. ಆದ್ದರಿಂದ ದಿ.ಎಸ್.ಬಂಗಾರಪ್ಪನವರ ಕೊಡುಗೆಗಳ ಬಗ್ಗೆ ತಿಳಿಯಬೇಕಿದೆ. ಶಿವಮೊಗ್ಗ ನಗರದಲ್ಲಿ ಸ್ಲಮ್‌ಗಳ ಅಭಿವೃದ್ಧಿ ಆಗಬೇಕು.-ಬಲ್ಕೀಶ್ ಬಾನು, ವಿಧಾನ ಪರಿಷತ್ ಸದಸ್ಯೆ.
---ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಪಾಲಿಕೆ ತೆರಿಗೆ ವ್ಯವಸ್ಥೆ ಸರಳೀಕರಣ ಮಾಡಿ, ರಿಯಾಯಿತಿ ನೀಡಬೇಕು.
-ಡಿ.ಎಸ್ ಅರುಣ್, ವಿಧಾನ ಪರಿಷತ್ ಶಾಸಕರು