ಸಾರಾಂಶ
ಪ್ರಜಾಪ್ರಭುತ್ವದಲ್ಲಿ ಪಾಳೆಗಾರಿಕೆ ವ್ಯವಸ್ಥೆ ನಡೆಯುವುದಿಲ್ಲ. ಹಲವು ಲೈಂಗಿಕವಾಗಿ ಅತ್ಯಂತ ದುರ್ಬಲ ಮಹಿಳೆಯರನ್ನು ಬಳಸಿಕೊಂಡಿದ್ದು ಘನಘೋರ ಅಪರಾಧವಾಗಿದ್ದು, ಕೂಡಲೇ ಆರೋಪಿ ಸಂಸದ ಪ್ರಜ್ವಲ ರೇವಣ್ಣ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಸಾಹಿತಿ ದೇವರಾಜ ಹುಣಸಿಕಟ್ಟಿ ಹೇಳಿದರು.
ರಾಣಿಬೆನ್ನೂರು: ಪ್ರಜಾಪ್ರಭುತ್ವದಲ್ಲಿ ಪಾಳೆಗಾರಿಕೆ ವ್ಯವಸ್ಥೆ ನಡೆಯುವುದಿಲ್ಲ. ಹಲವು ಲೈಂಗಿಕವಾಗಿ ಅತ್ಯಂತ ದುರ್ಬಲ ಮಹಿಳೆಯರನ್ನು ಬಳಸಿಕೊಂಡಿದ್ದು ಘನಘೋರ ಅಪರಾಧವಾಗಿದ್ದು, ಕೂಡಲೇ ಆರೋಪಿ ಸಂಸದ ಪ್ರಜ್ವಲ ರೇವಣ್ಣ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಸಾಹಿತಿ ದೇವರಾಜ ಹುಣಸಿಕಟ್ಟಿ ಹೇಳಿದರು. ನಗರದ ಕೋರ್ಟ್ ಆವರಣದ ಬಳಿ ಮಂಗಳವಾರ ಎಸ್‌ಎಫ್‌ಐ, ಡಿವೈಎಫ್‌ಐ, ರೈತ, ಕಾರ್ಮಿಕ, ದಲಿತ, ಸಾಹಿತಿಗಳು ಹಾಗೂ ತಾಲೂಕಿನ ಸಮಾನ ಮನಸ್ಕ ಜನಪರ ಸಂಘಟನೆಗಳ ನೇತೃತ್ವದಲ್ಲಿ ಹೋರಾಟದ ನಡಿಗೆ ಹಾಸನದ ಕಡೆಗೆ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು.
ಮತ್ತೆ ಇಂತಹ ಪ್ರಕರಣ ನಡೆಯದಂತೆ ಪಾಳೆಗಾರಿಕೆ ಅಧಿಕಾರಸ್ಥರಿಗೆ ಬಿಸಿ ಮುಟ್ಟಬೇಕೆಂಬುದು ನಮ್ಮೆಲ್ಲರ ಆಶಯ. ಈ ಜನಪರ ಚಳುವಳಿಗೆ ಸಾಹಿತಿಗಳ ಸಂಪೂರ್ಣ ಬೆಂಬಲ ಇದೆ ಎಂದು ಗಟ್ಟಿಯಾಗಿ ಹೇಳುತ್ತೇನೆ ಎಂದರು.ರೈತ ಸಂಘದ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ಅತ್ಯಂತ ಹೀನ ಕೃತ್ಯ ನಡೆಸಿದ ಪ್ರಜ್ವಲ್ ರೇವಣ್ಣ ಕೂಡಲೇ ಬಂಧಿಸಬೇಕು. ಕೇಂದ್ರ ಸರ್ಕಾರ ಅವರನ್ನು ರಕ್ಷಣೆ ಮಾಡುತ್ತಿರುವುದು ಖಂಡನೀಯ. ಜನಪರ ಚಳುವಳಿ ಕರೆ ಕೊಟ್ಟಿರುವ ಹಾಸನ ಚಲೋ ಯಶಸ್ವಿಯಾಗಲಿ. ಪ್ರಜ್ಞಾವಂತರು, ಚಳುವಳಿಗಾರರು, ರೈತರು ಅಪಾರ ಸಂಖ್ಯೆಯಲ್ಲಿ ಸೇರಲಿ ಎಂದರು.ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್. ಮಾತನಾಡಿ, ಹಾಸನದ ಸಂಸದ ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರ ಮೇಲೆ ನಡೆಸಿರುವ ವಿಕೃತ ಲೈಂಗಿಕ ದೌರ್ಜನ್ಯ, ಅತ್ಯಾಚಾರಗಳ ವಿರುದ್ಧ ಈಗಾಗಲೇ ಅತ್ಯಂತ ವ್ಯಾಪಕವಾಗಿ ತೀವ್ರ ಆಕ್ರೋಶ ಮತ್ತು ಪ್ರತಿಭಟನೆ ವ್ಯಕ್ತವಾಗಿದೆ. ಎಸ್‌ಎಫ್‌ಐ ಸೇರಿದಂತೆ ಸಾರ್ವಜನಿಕವಾಗಿ ವ್ಯಕ್ತವಾದ ತೀವ್ರ ಒತ್ತಡದಿಂದಾಗಿ ರಾಜ್ಯ ಸರ್ಕಾರ ಈಗಾಗಲೇ ಎಸ್‌ಐಟಿ ರಚಿಸಿ ಪ್ರಕರಣದ ತನಿಖೆ ನಡೆಯುತ್ತಿದೆ. ಆದರೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಪ್ರಕರಣದ ದಿಕ್ಕು ತಪ್ಪಿಸಲು ಹಾಗೂ ಪ್ರಕರಣದ ತನಿಖೆಯನ್ನು ಎಸ್‌ಐಟಿ ಬದಲು ಸಿಬಿಐಗೆ ವಹಿಸುವಂತೆ ಒತ್ತಾಯಿಸುತ್ತಿವೆ. ಆ ಮೂಲಕ ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಮಹಿಳೆಯರ ವಿಶ್ವಾಸ ಕುಗ್ಗಿಸಿ ಅವರು ಎಸ್‌ಐಟಿ ಎದುರು ಹಾಜರಾಗದಂತ ಪರಿಸ್ಥಿತಿ ಸೃಷ್ಟಿಸುತ್ತಿವೆ. ಕಾಂಗ್ರೆಸ್ ಪಕ್ಷ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರ ಕೂಡ ಈ ರಾಜಕೀಯ ಲಾಭನಷ್ಟಗಳ ಲೆಕ್ಕಾಚಾರದ ಆಚೆಗೆ ಸಂತ್ರಸ್ತ ಮಹಿಳೆಯರ ರಕ್ಷಣೆ, ಪುನರ್ವಸತಿ ಹಾಗೂ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿರುವ ಪ್ರಜ್ವಲ್ ರೇವಣ್ಣ ಮತ್ತು ಲೈಂಗಿಕ ವಿಡಿಯೋಗಳನ್ನು ಸಾರ್ವಜನಿಕವಾಗಿ ಬಿತ್ತರಿಸಿರುವವರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಲು ಬೇಕಾದ ಸೂಕ್ಷ್ಮತೆ, ಪ್ರಬುದ್ಧತೆ ಮತ್ತು ದಿಟ್ಟತನವನ್ನು ತೋರಿಸಬೇಕಿದೆ ಎಂದರು.ಶ್ರೀಧರ ಛಲವಾದಿ, ರಮೇಶ ತಳವಾರ, ಮಲ್ಲೇಶಪ್ಪ ಮದ್ಲೇರ, ಬಸವರಾಜ ತಳವಾರ, ಹರಿಹರಗೌಡ ಪಾಟೀಲ, ಮಾಲತೇಶ ಬ್ಯಾಡಗಿ, ಅನಿಲ ಮುನ್ನವಳ್ಳಿ ಮತ್ತಿತರರಿದ್ದರು.