ಕನ್ನಡಪ್ರಭ ವಾರ್ತೆ ಕೊಪ್ಪಳ

ತಾಲೂಕಿನ ಹಾಲವರ್ತಿ ಗ್ರಾಮದಲ್ಲಿ ದಲಿತರು ಮತ್ತು ಸವರ್ಣೀಯರ ನಡುವೆ ಗಲಾಟೆಯಾಗಿದ್ದು, ಗ್ರಾಮದಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 14 ಜನರ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, 6 ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಭಾನುವಾರ ಗ್ರಾಮದಲ್ಲಿ ಜಡೇಸಿದ್ಧೇಶ್ವರ ಜಾತ್ರೆಯ ನಿಮಿತ್ತ ನಡೆಯುತ್ತಿದ್ದ ಮೆರವಣಿಗೆಯಲ್ಲಿ ಯುವಕರ ಮಧ್ಯೆ ವಾಗ್ವಾದವಾಗಿದೆ. ಅದರಲ್ಲೂ ನಾಲ್ಕು ಯುವಕರ ಗುಂಪೊಂದು ಅಂಬೇಡ್ಕರ್ ಭಾವಚಿತ್ರವಿರುವ ಬಾವುಟ ಹಿಡಿದು ಬಂದಿದ್ದು ಆಕ್ರೋಶಕ್ಕೆ ಕಾರಣವಾಯಿತು. ಇದುವೇ ಮಾತಿಗೆ ಮಾತು ಬೆಳೆದು ಪರಸ್ಪರ ಗಲಾಟೆಯಾಗಿದೆ.

ಈ ಕುರಿತು ಗ್ರಾಮದ ಹಿರಿಯರು ಶತಾಯ ಗತಾಯ ಪ್ರಯತ್ನ ಮಾಡಿದರೂ ಸಹ ತಡರಾತ್ರಿ ಗವಿಸಿದ್ದಪ್ಪ ಹೊಸಮನಿ ಎಂಬುವವರ ಮನೆಗೆ ನುಗ್ಗಿ ಹೊಡೆಯಲು ಹೋಗಿದ್ದರಿಂದ ಪರಿಸ್ಥಿತಿ ಕೈಮಿರಿ ವಾಗ್ವಾದ, ತಳ್ಳಾಟ, ನೂಕಾಟವಾಗಿದೆ. ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದೆ. ಈ ಗ್ರಾಮದಲ್ಲಿ ಗಲಾಟೆ ಇದೇ ಮೊದಲೇನು ಅಲ್ಲ, ದಲಿತರು ಮತ್ತು ಸರ್ವಣೀಯರ ಮಧ್ಯೆ ಆಗಾಗ ಗಲಾಟೆಯಾಗುತ್ತಲೇ ಇರುತ್ತದೆ. ಈಗ ದಲಿತರು ಮತ್ತು ಭೋವಿ, ಕುರುಬರ ಮಧ್ಯೆ ಈಗ ಜಗಳವಾಗಿದ್ದು, ಸ್ಥಳಕ್ಕೆ ಎಸ್ಪಿ ಡಾ.ರಾಮ ಎಲ್. ಅರಸಿದ್ದಿ ಹಾಗೂ ಗ್ರಾಮೀಣ ಠಾಣೆಯ ಪಿಐ ಜಯಪ್ರಕಾಶ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಗ್ರಾಮದಲ್ಲಿ ಬಿಗಿ ಪೊಲೀಸ್ ಪಹರೆ ಹಾಕಲಾಗಿದೆ.