ಧಾರವಾಡ:
ಜಿಲ್ಲೆಯಲ್ಲಿ ಈ ಬಾರಿ ಬೇಸಿಗೆ ವೇಳೆ ಕುಡಿಯುವ ನೀರಿನ ಕೊರತೆ ಆಗುವ 90 ಹಳ್ಳಿಗಳ ಪಟ್ಟಿ ಮಾಡಿದ್ದು ಈ ಗ್ರಾಮಗಳಿಗೆ ನೀರು ನೀಡಲು ಈಗಾಗಲೇ 186 ಖಾಸಗಿ ಕೊಳವೆ ಬಾವಿ ಕೊರೆಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ಮಾಹಿತಿ ನೀಡಿದರು.ಸಚಿವರು ಮಾತನಾಡಿ, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುವ ಸಾಧ್ಯತೆ ಇದ್ದು ಅವಳಿ ನಗರ ಸೇರಿದಂತೆ ಜಿಲ್ಲೆಯ ಯಾವ ಗ್ರಾಮಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ಬರದಂತೆ ಎಚ್ಚರ ವಹಿಸಬೇಕು. ಸಮರ್ಪಕ ಹಾಗೂ ಶುದ್ಧ ಕುಡಿಯುವ ನೀರು ಒದಗಿಸಬೇಕು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಂಪನ್ಮೂಲದ ಕೊರತೆ ಇಲ್ಲ. ಆದರೆ, ಮಲಪ್ರಭಾ ನದಿ ಹಾಗೂ ಕೊಳವೆ ಬಾವಿಗಳಿಂದ ಪೂರೈಕೆಯಾಗುವ ನೀರು ಎಷ್ಟು ಶುದ್ಧವಿದೆ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು. ಕಲುಷಿತ ನೀರು ಸೇವಿಸಿ ಅನಾಹುತ ಸಂಭವಿಸಿದರೆ ಅಧಿಕಾರಿಗಳೇ ಹೊಣೆ ಎಂದು ಸಚಿವರು ಖಡಕ್ ಎಚ್ಚರಿಕೆ ನೀಡಿದರು.
ಈ ವೇಳೆ ಮಾಹಿತಿ ನೀಡಿದ ಗ್ರಾಮೀಣ ಕುಡಿಯುವ ನೀರು ಸರಬರಾಜು, ನೈರ್ಮಲ್ಯ ಇಲಾಖಾಧಿಕಾರಿಗ ಜಗದೀಶ, ಕುಂದಗೋಳ, ನವಲಗುಂದ, ಹುಬ್ಬಳ್ಳಿ ಭಾಗದಲ್ಲಿ ಬಹುತೇಕ ಕೆರೆಗಳಿಂದ ಜನರಿಗೆ ಕುಡಿಯುವ ನೀರು ನೀಡುತ್ತಿದ್ದು, ಈಗಾಗಲೇ ಅವುಗಳನ್ನು ತುಂಬಿಸಲಾಗಿದೆ. ಧಾರವಾಡ, ಹುಬ್ಬಳ್ಳಿಯ ನಾಲ್ಕು ಗ್ರಾಮಗಳಿಗೆ ಮಾತ್ರ ಕುಡಿಯುವ ನೀರಿನ ಸಮಸ್ಯೆ ಇದ್ದು ಕೊಳವೆ ಬಾವಿ ಮೂಲಕ ನೀಡುವ ಜತೆಗೆ ನೀರಿನ ತಪಾಸಣೆ ವೈಜ್ಞಾನಿಕವಾಗಿ ಮಾಡಲಾಗುವುದು ಎಂದು ತಿಳಿಸಿದರು.ಕೃಷಿ ವಿವಿ ಏನ್ ಮಾಡ್ತಿದೆ:
ಕೃಷಿ, ತೋಟಗಾರಿಕೆ ವಿವಿ ಸೇರಿದಂತೆ ಕೃಷಿಗಾಗಿ ಸಾಕಷ್ಟು ಸರ್ಕಾರಿ ವ್ಯವಸ್ಥೆಗಳಿವೆ. ಇಷ್ಟಾಗಿಯೂ ರೈತರು ಹಾಗೂ ಕೃಷಿ ತೊಂದರೆದಾಯಕ ಸ್ಥಿತಿಯಲ್ಲಿಯೇ ಇದ್ದಾರೆ. ಕುಂದಗೋಳದಲ್ಲಿ ಬೆಳೆದ ಕೆಂಪು ಮೆಣಸಿನಕಾಯಿ ಬ್ಯಾಡಗಿ ಮಾರುಕಟ್ಟೆಗೆ ಹೋಗಿ ಪ್ರಸಿದ್ಧವಾಗಿದೆ. ಈಗ ಕುಂದಗೋಳದಲ್ಲಿ ಮೆಣಸಿಕಾಯಿ ಕಾಣುತ್ತಿಲ್ಲ. ಧಾರವಾಡದಲ್ಲಿ ಮಾವು ಈ ಬಾರಿ ರೋಗಕ್ಕೆ ತುತ್ತಾಗಿ ಹೂ ಉದುರುತ್ತಿದೆ. ಕೃಷಿಯಲ್ಲಿ ಕೃಷಿ ಇಲಾಖೆಯಾಗಲಿ, ಕೃಷಿ ವಿವಿಗಳಾಗಲಿ ಹೊಸತನ ಅಳವಡಿಸುತ್ತಿಲ್ಲ. ಬ್ರೇಜಿಲ್‌ನಲ್ಲಿ ಕಬ್ಬಿನ ತಳಿ ಏಳು ವರ್ಷ ಬರುತ್ತದೆ. ನಮ್ಮಲ್ಲೇಕೆ ಇಂತಹ ಅದ್ಭುತಗಳು ನಡೆಯುತ್ತಿಲ್ಲ. ಕೃಷಿ ವಿಜ್ಞಾನಿಗಳು ನೀಡುವ ಮಾರ್ಗದರ್ಶನ ರೈತರಿಗೆ ಏತಕ್ಕೆ ಮುಟ್ಟುತ್ತಿಲ್ಲ. ರೈತರು ಹಾಗೂ ಅವರ ಕೃಷಿ ಬಗ್ಗೆ ಏನು ಅಧ್ಯಯನ ನಡೆಯುತ್ತಿದೆ ಎಂದು ಸಚಿವರು ಕೃಷಿ ವಿವಿಗೆ ಪ್ರಶ್ನಿಸಿದರು. ಜತೆಗೆ ಕುಲಪತಿ ಪ್ರೊ. ಪಿ.ಎಲ್. ಪಾಟೀಲ ಅವರ ಕಾರ್ಯವೈಖರಿ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು.
ಬಿತ್ತನೆ ಭೂಮಿ ಎಷ್ಟಿದೆ?:
ಕಳೆದ ಹತ್ತು ವರ್ಷಗಳಿಂದ ಜಿಲ್ಲೆಯಲ್ಲಿ ಬಿತ್ತನೆ ಕ್ಷೇತ್ರ 3.43 ಲಕ್ಷ ಹೆಕ್ಟೇರ್ ಇದೆ ಎಂದು ಕೃಷಿ ಇಲಾಖೆ ಹೇಳುತ್ತಿದೆ. ನಿತ್ಯ ಕೃಷಿ ಭೂಮಿ ಕೃಷಿಯೇತರ ಭೂಮಿ (ಎನ್‌ಎ) ಆಗುತ್ತಿದೆ. ವಿವಿಧ ಕೈಗಾರಿಕೆಗಳಿಗೆ ಭೂ ಸ್ವಾಧೀನ ಆಗುತ್ತದೆ. ರೈತರು ಕೃಷಿಯಿಂದ ತೋಟಗಾರಿಕೆಗೂ ಹೋಗುತ್ತಾರೆ. ಜತೆಗೆ ಕೆಲವು ರೈತರು ಬಿತ್ತನೆ ಭೂಮಿಯಲ್ಲಿ ವಾಣಿಜ್ಯ ಬಳಕೆಯು ಆಗುತ್ತದೆ. ಇಷ್ಟಾಗಿಯೂ ಬಿತ್ತನೆ ಪ್ರದೇಶ 3.43 ಲಕ್ಷ ಹೆಕ್ಟೇರ್ ಎಂದೇ ಹೇಳುತ್ತೀರಿ ಏಕೆ ಎಂದು ಲಾಡ್ ಕೃಷಿ ಇಲಾಖೆ ಜಂಟಿ ನಿರ್ದೇಶಕರನ್ನು ಪ್ರಶ್ನಿಸಿದರು. ಈ ಬಗ್ಗೆ ಮಾಹಿತಿ ಪಡೆಯಲು ಸೂಚಿಸಿದರು.ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ, ಕುಂದಗೋಳ ಶಾಸಕ ಎಂ.ಆರ್. ಪಾಟೀಲ, ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ ತಮ್ಮ ಕ್ಷೇತ್ರಗಳ ಕುಡಿಯುವ ನೀರು, ಕೃಷಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ಮಾಡಿದರು. ಜಿಲ್ಲಾಧಿಕಾರಿ ಸ್ನೇಹಲ್ ಆರ್., ಎಸ್ಪಿ ಗುಂಜನ್ ಆರ್ಯ ಇದ್ದರು. ಉದುರಿದ ಮಾವಿನ ಹೂ..
ಈ ಬಾರಿ ಜಿಲ್ಲೆಯಲ್ಲಿ ಮಾವಿನ ಮರಗಳು ಕಣ್ತುಂಬುವಂತೆ ಹೂ ಬಿಟ್ಟಿದ್ದವು. ಆದರೀಗ ರೋಗ ಬಿದ್ದು ಹೂ ಸಂಪೂರ್ಣ ಉದುರಿ ಹೋಗಿದ್ದು ಬೆಳಗಾರರು ಸಂಕಷ್ಟದಲ್ಲಿದ್ದಾರೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಗಮನ ಸೆಳೆದರು. ಜತೆಗೆ, ಹವಾಮಾನ ವೈಪರೀತ್ಯದಿಂದ ಈ ರೀತಿ ಆಗುವ ಸಂಭಾವ್ಯ ರೋಗಗಳ ಹತೋಟಿಗೆ ವಿಜ್ಞಾನಿಗಳು ಮುಂಜಾಗೃತ ಕ್ರಮ ವಹಿಸಬೇಕು ಎಂಬ ಸೂಚನೆ ನೀಡಿದರು. ಧಾರವಾಡ ಮಾವಿಗೆ ಜಿಯೋ ಟ್ಯಾಗ್ ಮಾಡುವ ಪ್ರಯತ್ನ ಹಾಗೂ ಮಾವು ಮೌಲ್ಯ ವರ್ಧನೆಗಾಗಿ ನಿರ್ಮಿಸುತ್ತಿರುವ ಇಂಟಿಗ್ರೇಟೆಡ್ ಪ್ಯಾಕ್ ಹೌಸ್ ಕಾಮಗಾರಿ ವೀಕ್ಷಿಸುವುದಾಗಿ ಸಚಿವ ಲಾಡ್ ತಿಳಿಸಿದರು. ಎಲ್ ಆ್ಯಂಡ್ ಟೀ ಮೇಲೆ ಕ್ರಿಮಿನಲ್ ಕೇಸ್ಹುಬ್ಬಳ್ಳಿ-ಧಾರವಾಡ ಅವಳಿ ಸೇರಿ ಜಿಲ್ಲೆಯಲ್ಲಿ ನಿರಂತರ ನೀರು ಯೋಜನೆ ನಿರ್ವಹಿಸುತ್ತಿರುವ ಎಲ್ ಆ್ಯಂಡ್ ಟೀ ನಿಗದಿತ ಸಮಯಕ್ಕೆ ಕಾಮಗಾರಿ ಮುಗಿಸುತ್ತಿಲ್ಲ. ಇದರಿಂದ ಜನರಿಗೆ ತೊಂದರೆಯಾಗುತ್ತದೆ. ಪ್ರತಿ ಬಾರಿ ಸಭೆಯಲ್ಲಿ ಅವರೊಂದಿಗೆ ವಾಗ್ವಾದ ಮಾಡುವುದು ಸಾಕು. ಕೋಟಿಗಟ್ಟಲೇ ದಂಡದ ಪ್ರಯೋಗ ಸಹ ಮಾಡಿದರೂ ಅಧಿಕಾರಿಗಳು ತಮ್ಮ ವರ್ತನೆ ಸರಿಪಡಿಸಿಕೊಳ್ಳುತ್ತಿಲ್ಲ ಎಂದು ಸಿಟ್ಟಾದ ಸಚಿವರು ಕಂಪನಿ ಮೇಲೆ ಕ್ರಿಮಿನಲ್ ಮೊಕ್ಕದಮೆ ದಾಖಲಿಸಲು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರಿಗೆ ಸೂಚಿಸಿದರು. ಮಾರ್ಚ್ 15 ರಿಂದ 3ದಿನಕ್ಕೊಮ್ಮೆ ನೀರು..ಹು-ಧಾ ಅವಳಿ ನಗರದ 36 ವಾರ್ಡ್‌ಗಳಿಗೆ ನಿರಂತರ ನೀರು ಹಾಗೂ 46 ವಾರ್ಡ್‌ಗಳಿಗೆ ಈಗ ಆರೇಳು ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಮಾ. 10ರ ನಂತರ ಮತ್ತೆ 43 ಎಂಎಲ್‌ಡಿ ನೀರು ಲಭ್ಯವಾಗಲಿದ್ದು, ಮಾ. 15ಕ್ಕೆ ಈ ವಾರ್ಡ್‌ಗಳಿಗೆ ಮೂರು ದಿನಗಳಿಗೊಮ್ಮೆ ನೀರು ಪೂರೈಸಲಾಗುವುದು ಎಂದು ಹು-ಧಾ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಹಾಗೂ ಕಾರ್ಯನಿರ್ವಾಹಕ ಅಭಿಯಂತರರಾದ ಸವಿತಾ ಕೆಡಿಪಿ ಸಭೆಗೆ ತಿಳಿಸಿದರು. ಹು-ಧಾ ನಗರದ 10 ಸಾವಿರ ಮನೆಗಳಿಗೆ ಬೋರ್‌ವೆಲ್ ನೀರು ಪೂರೈಸಲಾಗುತ್ತಿದೆ. ಅದಕ್ಕಾಗಿ 1,320 ಬೋರ್‌ವೆಲ್ ಬಳಸಲಾಗುತ್ತಿದೆ. ಅದೇ ರೀತಿ ಬೇಸಿಗೆ ಸಂದರ್ಭ ಯಾವುದೇ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲು 53 ಟ್ಯಾಂಕರ್‌ಗಳು ಲಭ್ಯ ಇವೆ ಎಂದರು.