- ನಗರದ ಸ್ಕೌಟ್ಸ್ ಭವನದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪಕರ ದಿನಾಚರಣೆ,

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಸ್ಕೌಟ್ಸ್ ಮತ್ತು ಗೈಡ್ಸ್ ಯುವಕ ಮತ್ತು ಯುವತಿಯರಿಗೆ ನಿಸ್ವಾರ್ಥ ಸಮಾಜ ಸೇವೆ ಸಲ್ಲಿಸುವ ಜವಾಬ್ದಾರಿ ಬೆಳೆಸುತ್ತದೆ ಎಂದು ಕರ್ನಾಟಕ ಪರಿಸರ ಮೌಲ್ಯಮಾಪನ ತಜ್ಞರ ಸಮಿತಿ ಅಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.

ನಗರದ ಸ್ಕೌಟ್ಸ್ ಭವನದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಆಯೋಜಿಸಿದ್ಧ ಸಂಸ್ಥಾಪಕರ ದಿನಾಚರಣೆ, ನಿಪುನ್ ಪರೀಕ್ಷಾ ಶಿಬಿರಕ್ಕೆ ಚಾಲನೆ ಮತ್ತು ಪ್ರಶಸ್ತಿ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ 1902ರಲ್ಲಿ ಇಂಗ್ಲೆಂಡ್‌ ರಾಷ್ಟ್ರದಲ್ಲಿ ಸಂಸ್ಥಾಪಕ ರಾಬರ್ಟ್ ಬೇಡನ್ ಪೊವಲ್ ಕೇವಲ 20 ಹುಡುಗರೊಂದಿಗೆ ಒಂದು ಪ್ರಾಯೋಗಿಕ ಶಿಬಿರದ ಮೂಲಕ ಸ್ಕೌಟ್ ಮತ್ತು ಗೈಡ್ ಚಳವಳಿ ಪ್ರಾರಂಭಿಸಿದ್ದರು. ಮಕ್ಕಳಲ್ಲಿ ಸಮುದಾಯದ ಶಕ್ತಿ- ಸಾಮರ್ಥ್ಯಗಳಿಗೆ ಸಂಘಟನೆ, ಶಿಸ್ತು ಮತ್ತು ಸೇವಾ ಮನೋಭಾವನೆ ಮೂಡಿಸುವುದು ಗುರಿಯಾಗಿತ್ತು ಎಂದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ನೂರಕ್ಕೂ ಹೆಚ್ಚು ವರ್ಷದ ಇತಿಹಾಸವಿದೆ. ಈ ಸಂಸ್ಥೆ ಜಗತ್ತಿನ 200ಕ್ಕೂ ಹೆಚ್ಚು ದೇಶಗಳಲ್ಲಿ ಶಾಖೆಗಳನ್ನು ಹೊಂದಿದೆ. ಪರಿಸರ ಸಂರಕ್ಷಣೆ ಸೇರಿ ಹಲವು ಸಮಾಜಪರ ಕಾರ್ಯಕ್ರಮ ಆಯೋಜಿಸುವ ಮೂಲಕ ಮಕ್ಕಳಲ್ಲಿ ಶಿಸ್ತು, ಸಂಯಮ ಹಾಗೂ ಉದಾರ ಮನೋಭಾವ ಬಿತ್ತುತ್ತಿದೆ ಎಂದು ಹೇಳಿದರು.


ಪ್ರಕೃತಿ ವಿಕೋಪ, ಭೂಕಂಪ, ಸುನಾಮಿ ಸೇರಿದಂತೆ ಜಗತ್ತಿಗೆ ಮಾರಕವಾದ ಆಪತ್ತನ್ನು ಎದುರಿಸುವ ಸಲುವಾಗಿ ಮುಂಜಾಗ್ರತಾ ಕ್ರಮವಾಗಿ ಸಂಸ್ಥೆ ವಿದ್ಯಾರ್ಥಿಗಳಲ್ಲಿ 3 ದಿನಗಳ ಆಪದ್ ಮಿತ್ರ ತರಬೇತಿ ಶಿಬಿರ ಆಯೋಜಿಸಿ ಸನ್ನದ್ಧ ಗೊಳಿಸುವ ಕೆಲಸಕ್ಕೆ ಕೈಹಾಕಿದೆ. ಇದು ದಿಢೀರನೇ ಎದುರಾಗುವ ಪ್ರಕೃತಿ ವಿಕೋಪಕ್ಕೆ ಸಜ್ಜುಗೊಳಿಸಲು ಸಹಕಾರಿ ಎಂದರು.

ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಎಂ.ಎನ್.ಷಡಕ್ಷರಿ ಮಾತನಾಡಿ, ಸ್ಕೌ ಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಅಭಿವೃದ್ಧಿಗಾಗಿ ಮಹೇಶ್‌ ರಾಜ್ಯಮಟ್ಟದಲ್ಲಿ ಚರ್ಚಿಸಿ ಸುಮಾರು ಮೂರ‍್ನಾಲ್ಕು ಕೋಟಿ ಅನುದಾನ ತಂದು ಸಮಾಜಸೇವೆಗೆ ಕಂಕಣಬದ್ಧರಾಗಿದ್ದಾರೆ ಎಂದು ತಿಳಿಸಿದರು.

ಈ ವೇಳೆ ಜಿಲ್ಲಾ ಗೈಡ್ಸ್ ಆಯುಕ್ತರಾದ ಮಮತಾ, ಸ್ಕೌಟ್ಸ್ ಆಯುಕ್ತ ಫಣಿರಾಜ್, ಖಜಾಂಚಿ ಕೆ.ಎಸ್. ರಮೇಶ್, ತರಬೇತಿ ಆಯುಕ್ತೆ ಸಂಧ್ಯಾರಾಣಿ, ಕಾರ್ಯದರ್ಶಿ ನೀಲಕಂಠಚಾರ್, ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಬಿ.ಆರ್.ರಕ್ಷಿತ್, ಸಂಘಟಕ ಕಿರಣ್‌ಕುಮಾರ್ ಉಪಸ್ಥಿತರಿದ್ದರು.ಫೋಟೋ

ನಗರದ ಸ್ಕೌಟ್ಸ್ ಭವನದಲ್ಲಿ ಶನಿವಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಆಯೋಜಿಸಿದ್ಧ ಸಂಸ್ಥಾಪಕರ ದಿನಾಚರಣೆ, ನಿಪುನ್ ಪರೀಕ್ಷಾ ಶಿಬಿರಕ್ಕೆ ಚಾಲನೆ ಮತ್ತು ಪ್ರಶಸ್ತಿ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವನ್ನು ಪರಿಸರ ಮೌಲ್ಯಮಾಪನ ತಜ್ಞರ ಸಮಿತಿ ಅಧ್ಯಕ್ಷ ಎ.ಎನ್.ಮಹೇಶ್ ಉದ್ಘಾಟಿಸಿದರು. ಈ ವೇಳೆ ಜಿಲ್ಲಾ ಮುಖ್ಯ ಆಯುಕ್ತ ಎಂ.ಎನ್.ಷಡಕ್ಷರಿ, ಜಿಲ್ಲಾ ಗೈಡ್ಸ್ ಆಯುಕ್ತ ಮಮತಾ, ಸ್ಕೌಟ್ಸ್ ಆಯುಕ್ತ ಫಣಿರಾಜ್, ಖಜಾಂಚಿ ಕೆ.ಎಸ್. ರಮೇಶ್ ಮೊದಲಾದವರಿದ್ದರು.