ಎರಡು ಸಭೆಗೆ ಸರಿಯಾದ ಮಾಹಿತಿ ನೀಡದೇ ಅಧಿಕಾರಿಗಳು ನುಣುಚಿಕೊಳ್ಳಲು ಮುಂದಾದರೆ ಸಹಿಸಿಕೊಳ್ಳಲ್ಲ

ಕೊಟ್ಟೂರು: ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿಯ ಜಿಲ್ಲಾ ಸಭೆಗೆ ಮತ್ತು ತಾಲೂಕು ಮಟ್ಟದ ಸಭೆಗೆ ಅಧಿಕಾರಿಗಳು ನೀಡಿರುವ ವರದಿಯಲ್ಲಿ ಸಾಕಷ್ಟು ಪ್ರಮಾಣದ ಅಂಕಿ- ಅಂಶಗಳ ವ್ಯತ್ಯಾಸ ಕಂಡು ಬಂದಿದೆ. ಎರಡು ಸಭೆಗೆ ಸರಿಯಾದ ಮಾಹಿತಿ ನೀಡದೇ ಅಧಿಕಾರಿಗಳು ನುಣುಚಿಕೊಳ್ಳಲು ಮುಂದಾದರೆ ಸಹಿಸಿಕೊಳ್ಳಲ್ಲ ಎಂದು ಕೊಟ್ಟೂರು ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅನಿಲ್ ಹೊಸಮನಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಗುರುವಾರ ಇಲ್ಲಿನ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ನವೆಂಬರ್ ತಿಂಗಳವರೆಗೆ ಮಾಸಿಕ ಹಣದ ಕಂತು ಬಿಡುಗಡೆಯಾಗಿದೆ. ಇದು ಸೇರಿದಂತೆ ಗೃಹಜ್ಯೋತಿ , ಶಕ್ತಿ, ಯುವನಿಧಿ, ಅನ್ನಭಾಗ್ಯ, ಯೋಜನೆಗಳ ಅಂಕಿ-ಅಂಶಗಳು ಏಕೆ ಹೋಲಿಕೆಯಾಗುತ್ತಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮುಂದಿನ ಸಭೆಯ ವೇಳೆಗೆ ಅಂಕಿ- ಅಂಶಗಳ ಸರಿಯಾಗಿ ಇರಬೇಕು ಎಂದು ತಾಕೀತು ಮಾಡಿದರು.

ಹಳ್ಳಿಗಳಲ್ಲಿ ವಿದ್ಯುತ್ ತಂತಿಗಳಿಗೆ ಕೊಂಡಿಗಳಲ್ಲಿ ಹಾಕಿಕೊಂಡವರಿಗೆ ಗೃಹಜ್ಯೋತಿಯ ಅನುಕೂಲ ಮಾಡಲು ಸಂಬಂಧಪಟ್ಟ ಇಲಾಖೆಯವರು ಮುಂದಾಗಬೇಕು ಎಂದು ಜೆಸ್ಕಾಂ ಎಇಇ ನಾಗರಾಜರಿಗೆ

ಅಧ್ಯಕ್ಷರು ಸೂಚಿಸಿದರು.

ಸಾರಿಗೆ ಸಂಸ್ಥೆ ಕೊಟ್ಟೂರಿಗೆ ಬಸ್ ಡಿಪೋ ಮಂಜೂರು ಮಾಡಿದ್ದು ಸೂಕ್ತ ಬಗೆಯ ನಿವೇಶನ ನೀಡಬೇಕೆಂದು ಕೆಕೆಆರ್ ಟಿಸಿ ಅಧಿಕಾರಿ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ಅನಿಲ್ ಹೊಸಮನಿ ನಿವೇಶನ ನೀಡುವ ಹಕ್ಕು ಶಾಸಕರು ಮತ್ತು ಪಪಂ ಅಧಿಕಾರ ವ್ಯಾಪ್ತಿಯಲ್ಲಿ ಬರುತ್ತದೆ ಎಂದರು.

ಜಿಲ್ಲಾ ಕೇಂದ್ರಕ್ಕೆ ಹೋಗಿ ಬರಲು ಜನರಿಗೆ ಹೆಚ್ಚಿನ ಬಸ್ ವ್ಯವಸ್ಥೆ ಮಾಡಬೇಕು. ಈಗ ಎಷ್ಟು ಬಸ್ ಗಳನ್ನು ಸಂಚರಿಸಲು ಬಿಟ್ಟಿದ್ದೀರಿ ಎಂದು ಸಾರಿಗೆ ಅಧಿಕಾರಿ ಎಚ್.ಕೆ. ವಿಶ್ವನಾಥ ಅವರನ್ನು ಗ್ಯಾ ರಂಟಿ ಯೋಜನೆಗಳ ತಾಲೂಕು ಅಧ್ಯಕ್ಷರು ಪ್ರಶ್ನಿಸಿದರು.

ತಾಲೂಕು, ಕೂಡ್ಲಿಗಿ ಡಿಪೋ ವ್ಯಾಪ್ತಿಯಲ್ಲಿ 20 ಸಾವಿರ ಮಹಿಳಾ ಫಲಾನುಭವಿಗಳು ಶಕ್ತಿ ಯೋಜನೆ ಅಡಿ ಪ್ರತಿದಿನ ಪ್ರಯಾಣ ಮಾಡುತ್ತಿದ್ದಾರೆ. ಹೆಚ್ಚು ಬಸ್‌ಗಳನ್ನು ಸಂಚರಿಸಲು ಡಿಫೋ ವ್ಯವಸ್ಥಾಪಕರೊಂದಿಗೆ ಮಾತನಾಡುವುದಾಗಿ ಸಾರಿಗೆ ಅಧಿಕಾರಿಗಳು ತಿಳಿಸಿದರು.

ತಾಲೂಕು ಇಒ ಡಾ.ಬಿ.ಆನಂದಕುಮಾರ್ ಇದ್ದರು. ತಾಲೂಕು ಸಮಿತಿ ಸದಸ್ಯರಾದ ಪಿ.ಸೆ. ಪ್ರಭುದೇವ್, ಸುಶೀಲಮ್ಮ , ಎನ್.ಚಂದ್ರಪ್ಪ, ಮಾರಪ್ಪ, ಗಾಯತ್ರಿ ಅಶೋಕ, ಶಿವರಾಜ್ ಟಿ., ಟಿ.ನಾಗಪ್ಪ, ಪಿ.ಕೆ. ಇಂದ್ರಜಿತ್, ತಿರುಕಪ್ಪ ಕರಡಿ, ಉಮಾಪತಿ ಸ್ವಾಮಿ, ಮಾಲ್ವಿ ಜಮೀರ್ ಖಾನ್, ಆನಂದ ಸಭೆಯಲ್ಲಿ ಭಾಗವಹಿಸಿದ್ದರು.