ಎಚ್ಐವಿ ತಡೆಗಟ್ಟಲು ಸೋಂಕಿತರಿಗೆ ಮಾನವೀಯತೆ ತೋರಿಸುವುದೇ ಮುಖ್ಯ ಉದ್ದೇಶವಾಗಿದ್ದು, ಡಿಸೆಂಬರ್ ಅಂತ್ಯದವರೆಗೆ ಜಿಲ್ಲೆಯ ಎಲ್ಲ ಸೋಂಕಿತರ ವಿವರ ಪಡೆದು ಚಿಕಿತ್ಸೆ ಪಡೆಯುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು.

ಗದಗ: ಎಚ್ಐವಿ ಲಕ್ಷಣಗಳನ್ನು ಗುರುತಿಸಿ ಕ್ಯು ಆರ್ ಕೋಡ್‌ನ್ನು ಸ್ಕ್ಯಾನ್ ಮಾಡಿ, ಎಚ್ಐವಿ ಸ್ಥಿತಿಯನ್ನು ತಿಳಿದುಕೊಳ್ಳಿ ಹಾಗೂ ಸೋಂಕಿತರಿಗೆ ಆತ್ಮಸ್ಥೈರ್ಯ, ಮಾನಸಿಕ ಬೆಂಬಲ ಜತೆಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ್‌ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇತ್ತೀಚೆಗೆ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ವಿಭಾಗದ ವತಿಯಿಂದ ನಡೆದ ಮಿಷನ್ ಏಡ್ಸ್ ಸುರಕ್ಷಾ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಾಲಾ- ಕಾಲೇಜುಗಳಲ್ಲಿ ಈ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡಬೇಕು. ಎಚ್ಐವಿ ಪೀಡಿತರಿಗೆ ತಾರತಮ್ಯವಿಲ್ಲದೆ ಬದುಕಲು ಸಹಾಯ ಮಾಡುವುದು, ಉದ್ಯೋಗ ಮತ್ತು ಶಿಕ್ಷಣಕ್ಕೆ ಬೆಂಬಲ ನೀಡಬೇಕು. ಮಿಷನ್ ಏಡ್ಸ್ ಸುರಕ್ಷಾ ಕಾರ್ಯಕ್ರಮದ ಗುರಿಗಳನ್ನು ಜಿಲ್ಲಾ ಮಟ್ಟದಲ್ಲಿ ಸಾಧಿಸುವ ನಿಟ್ಟಿನಲ್ಲಿ ಮೊದಲನೇ 95 ಎಚ್ಐವಿ ಸೋಂಕಿತ ವ್ಯಕ್ತಿಗಳಲ್ಲಿ ಕನಿಷ್ಠ ಶೇ. 95ರಷ್ಟು ಜನರು ತಮ್ಮ ಸೋಂಕಿನ ಸ್ಥಿತಿಯನ್ನು ತಿಳಿದುಕೊಳ್ಳಬೇಕು ಎಂದರು.

ಎಚ್ಐವಿ ತಡೆಗಟ್ಟಲು ಸೋಂಕಿತರಿಗೆ ಮಾನವೀಯತೆ ತೋರಿಸುವುದೇ ಮುಖ್ಯ ಉದ್ದೇಶವಾಗಿದ್ದು, ಡಿಸೆಂಬರ್ ಅಂತ್ಯದವರೆಗೆ ಜಿಲ್ಲೆಯ ಎಲ್ಲ ಸೋಂಕಿತರ ವಿವರ ಪಡೆದು ಚಿಕಿತ್ಸೆ ಪಡೆಯುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಹೊಸ ಸೋಂಕನ್ನು ಪತ್ತೆ ಹಚ್ಚಲು ಕ್ಯು ಆರ್ ಕೋಡ್ ಬಳಸಿ ನಿಮ್ಮ ಎಚ್ಐವಿ ಸ್ಥಿತಿಯನ್ನು ತಿಳಿದುಕೊಳ್ಳಿ ಎನ್ನುವಂತೆ ಎಲ್ಲ ಎಚ್ಆರ್‌ಜಿ ಮತ್ತು ಸಮುದಾಯವನ್ನು ಎಚ್ಐವಿ ತಪಾಸಣೆ ಮಾಡಿಸುವಂತೆ ಮನವೊಲಿಸಲು ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಎಸ್.ವಿ. ಯಾವ್ ಎಂ. ಸಂಯೋಜಕ ಡಾ. ದೀಪಕ ಅವರು, 95:95:99 ಹಾಗೂ ಮಿಷನ್ ಏಡ್ಸ್ ಸುರಕ್ಷಾ ಕಾರ್ಯಕ್ರಮದ ಕುರಿತು ವಿವರವಾದ ಮಾಹಿತಿ ನೀಡಿದರು. ಮಿಷನ್ ಏಡ್ಸ್ ಸುರಕ್ಷಾ ಅಭಿಯಾನ- 2026ರ ಎಚ್ಐವಿ ಸ್ಥಿತಿಯನ್ನು ತಿಳಿದುಕೊಳ್ಳಿ ಎನ್ನುವ ಕ್ಯು ಆರ್ ಕೋಡ್ ಪೋಸ್ಟರ್‌ನ್ನು ಬಿಡುಗಡೆ ಮಾಡಲಾಯಿತು.ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್.ಕೆ.ಆರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಿ.ಸಿ. ಕರಿಗೌಡರ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಅರುಂಧತಿ ಕೆ., ಡಾ. ಮೀನಾಕ್ಷಿ ಕೆ.ಎಸ್., ಡಾ. ರಮೇಶ ಸೇರಿದಂತೆ ತಾಲೂಕು ಆರೋಗ್ಯಾಧಿಕಾರಿಗಳು, ಸಿಬ್ಬಂದಿ ಇದ್ದರು. ಡಿಎಚ್‌ಒ ಡಾ. ಎಸ್.ಎಸ್. ನೀಲಗುಂದ ಸ್ವಾಗತಿಸಿದರು. ಜಿಲ್ಲಾ ಐಸಿಟಿಸಿ ಮೇಲ್ವಿಚಾರಕ ಬಿ.ಬಿ. ಲಾಳಗಟ್ಟಿ ವಂದಿಸಿದರು.