ವೈವಾಹಿಕ ಜೀವನಕ್ಕೆ ಕಾಲಿಟ್ಟ ರಂಗಕರ್ಮಿಗಳು

| Published : Nov 25 2025, 01:15 AM IST

ಸಾರಾಂಶ

ಪರಸ್ಪರ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿ ಪೋಷಕರಿಗೆ ಒಪ್ಪಿಸಿಯೇ ಮದುವೆ ಆಗಬೇಕೆಂಬುದು ಇವರ ಬಯಕೆಯಾಗಿತ್ತು.

ಫೋಟೋ - 24ಎಂವೈಎಸ್‌ 42ಕನ್ನಡಪ್ರಭ ವಾರ್ತೆ ಮೈಸೂರುಯಾವ ವಾದ್ಯ ಡೋಲುಗಳ ಸದ್ದು ಮದುವೆ ಮನೆಯ ಗದ್ದಲ ಅಲ್ಲಿರಲಿಲ್ಲ. ಅದೊಂದು ಸುಂದರ ಸರಳ ಆಂತರ್ಜಾತಿ ಪ್ರೇಮವಿವಾಹ ನೆರವೇರಿದ ಸುಸಂದರ್ಭ. ಅದು ಭಾವಗೀತೆ ಮತ್ತು ವಿಚಾರ ಮಂಥನಗಳಿಂದ ಕೂಡಿದ ವೇದಿಕೆಯಾಗಿತ್ತು.ರಂಗಭೂಮಿ ಕಲಾವಿದರಾದ ಶ್ರುತಿ ಮತ್ತು ಮಂಜುನಾಥ್ ಅವರು ಈ ವೇದಿಕೆಯಲ್ಲಿ ಸತಿಪತಿಗಳಾದ ವಧುವರರು.ತಿಪಟೂರಿನ ಶೃತಿ, ಬಳ್ಳಾರಿ ಸಿರಿಗೇರಿಯ ಮಂಜು ಇವರಿಬ್ಬರೂ ನೀನಾಸಂನಲ್ಲಿ ಶಿಕ್ಷಣ ಪಡೆಯುತ್ತಿದ್ದಾಗ ಪರಿಚಿತರಾಗಿದ್ದವರು. ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿ ಪೋಷಕರಿಗೆ ಒಪ್ಪಿಸಿಯೇ ಮದುವೆ ಆಗಬೇಕೆಂಬುದು ಇವರ ಬಯಕೆಯಾಗಿತ್ತು. ಆದರೆ ಆಡಂಬರದ ಮದುವೆಗೆ ಒಗ್ಗದ ಇವರ ಮನಸ್ಸು ಕುವೆಂಪು ಅವರ ಮಂತ್ರಮಾಂಗಲ್ಯದ ಆಶಯದಂತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಅಪೇಕ್ಷಿಸಿ ಗುರುಗಳಾದ ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಅವರಿಗೆ ತಿಳಿಸಿದ್ದಾರೆ.ಶ್ರುತಿ ಅವರು ಮೈಸೂರು ರಂಗಾಯಣದ ಭಾರತೀಯ ರಂಗ ಶಿಕ್ಣಣ ಕೇಂದ್ರದ ಶಿಕ್ಷಕಿಯಾಗಿದ್ದಾರೆ. ಮಂಜು ಅವರು ಸಿರಿಗೇರಿಯಲ್ಲಿ ಧಾತ್ರಿ ಎಂಬ ಹೆಸರಿನಲ್ಲಿ ಸಂಸ್ಥೆಯನ್ನು ಸ್ಥಾಪಿಸಿ ರಂಗಭೂಮಿ ಚಟುಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಇಬ್ಬರನ್ನೂ ಬಹಳ ವರ್ಷಗಳಿಂದ ಬಲ್ಲವರಾಗಿದ್ದ ಸತೀಶ್ ತಿಪಟೂರು ಅವರು ಇವರಿಬ್ಬರ ಆಶಯದಂತೆ ಮದುವೆ ಮಾಡಲು ನಿರ್ಧರಿಸಿ ಮೈಸೂರಿನ ಹೊರವಲಯದಲ್ಲಿ ರಂಗಾಯಣದ ಮತ್ತು ರಂಗಶಿಕ್ಷಣ ಕೇಂದ್ರದ ಗೆಳೆಯರು, ಸಂಬಂಧಿಕರು ಹಾಗೂ ನಾಡಿನ ಚಿಂತಕರ ಸಮ್ಮುಖದಲ್ಲಿ ಈ ಮದುವೆ ನೆರವೇರಿದ್ದು ವಿಶೇಷವಾಗಿತ್ತು.ನಿವೃತ್ತ ಪ್ರಾಧ್ಯಾಪಕಿ ಡಾ.ವೆಂ. ವನಜ ಅವರು ವಧುವರರಿಗೆ ಕುವೆಂಪು ಮಂತ್ರಮಾಂಗಲ್ಯದ ವಿವಾಹ ಪ್ರಮಾಣ ವಚನ ಬೋಧಿಸಿದರು. ಮಂತ್ರ ಮಾಂಗಲ್ಯದ ವಿವಾಹ ಸಂಹಿತೆಯನ್ನು ಮಾನವ ಮಂಟಪದ ಸಂಚಾಲಕ ಪ್ರೊ.ಕೆ. ಕಾಳಚನ್ನೇಗೌಡ ಓದಿದರು.ರಂಗಾಯಣದ ಮಾಜಿ ನಿರ್ದೇಶಕ ಸಿ. ಬಸವಲಿಂಗಯ್ಯ ಮಾತನಾಡಿ, ಅಂತರ್ಜಾತಿ ಮದುವೆಯಾದ ದಂಪತಿಗಳ ಮಕ್ಕಳು ಜಾತ್ಯಾತೀತವಾಗಿ ಬೆಳೆಯಬೇಕು. ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವಾಗ ಜಾತಿ ಕಾಲಂ ನಲ್ಲಿ ಭಾರತೀಯ ಎಂದು ಬರೆಸಬೇಕು. ಜಾತಿ ನಿರ್ಮೂಲನಗೆ ನೀವು ನೀಡುವ ಕೊಡುಗೆ ಅದು, ಗಾಂಧೀ ಅಂಬೇಡ್ಕರ್ ಅವರ ಆಶಯವೂ ಅದೇ ಆಗಿತ್ತು ಎಂದು ತಿಳಿಸಿದರು.ಪ್ರೀತಿಸಿ ಮದುವೆಯಾಗುವವರನ್ನು ಬಹುತೇಕ ಪೋಷಕರು ಒಪ್ಪದೇ ನಿರಾಕರಿಸುತ್ತಾರೆ. ಆದರೆ ಈ ಮದುವೆಯಲ್ಲಿ ಇಬ್ಬರ ಪೋಷಕರು ಈ ಅಂತರ್ಜಾತಿ ವಿವಾಹವನ್ನು ತಾವೇ ನಿಂತು ನೆರವೇರಿಸಿಕೊಡುತ್ತಿರುವುದು ಸಂತೋಷದ ವಿಷಯ. ಹಾಗಾಗಿ ಈ ಎರಡೂ ಕುಟುಂಬಗಳನ್ನು ಅಭಿನಂದಿಸಲೇಬೇಕು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಹಿರಿಯ ಜಾನಪದ ವಿದ್ವಾಂಸ ಪ್ರೊ. ಕಾಳೇಗೌಡ ನಾಗವಾರ ಮಾತನಾಡಿ, ಆಡಂಬರದ ಮದುವೆ ವಿರೋಧಿಸಿ ಈ ರೀತಿ ಸರಳವಾಗಿ ಅಂತರ್ಜಾತಿ ಪ್ರೇಮ ವಿವಾಹ ನೆರವೇರುತ್ತಿರುವುದು ಒಂದು ಉತ್ತಮ ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಸಾಕ್ಷಿಯಾಗುತ್ತವೆ. ರಾಷ್ಟ್ರಕವಿ ಕುವೆಂಪು ಅವರು ತಮ್ಮ ಮಗ ಪೂರ್ಣಚಂದ್ರ ತೇಜಸ್ವಿ ಮದುವೆ ರಾಜೇಶ್ವರಿಯವರೊಡನೆ ಮಾಡಿದ್ದು ಇದೇ ರೀತಿ ಪರಿಸರದ ನಡುವೆಯೇ ಮಂತ್ರಮಾಂಗಲ್ಯದಂತೆ ನೆರವೇರಿತು. ಇದರಿಂದ ಪ್ರೇರೇಪಿತರಾದ ಅನೇಕ ಪ್ರಗತಿಪರ ಚಿಂತನೆಯ ಯುವಕರು ಸಾವಿರಾರು ಸಂಖ್ಯೆಯಲ್ಲಿ ಮದುವೆಯಾಗಿ ಚನ್ನಾಗಿ ಜೀವನ ರೂಪಿಸಿಕೊಂಡಿದ್ದಾರೆ. ನಾನೂ ಕೂಡ 1972 ರಲ್ಲಿ ಸರಳವಾಗಿ ಒಂದು ವಿಚಾರ ಸಂಕಿರಣ ಏರ್ಪಡಿಸಿ ಮಾದುವೆಯಾದೆ. ರಾಜಕಾರಿಣಿ ಕೆ.ಎಚ್. ರಂಗನಾಥ್ ನಮ್ಮ ಮದುವೆಯಲ್ಲಿ ಪ್ರಮಾಣವಚನ ಬೋಧಿಸಿದರು ಎಂದು ಅವರು ಸ್ಮರಿಸಿದರು.ಕವಯತ್ರಿ ಡಾ. ಲತಾ ಮೈಸೂರು ಮಾತನಾಡಿ, ಅಂತರ್ಜಾತಿ ಮದುವೆಯಾದವರು ಬಹಳ ಎಚ್ಚರಿಕೆಯಿಂದ ಸಮಾಜದಲ್ಲಿ ತಮ್ಮ ಜೀವನ ರೂಪಿಸಿಕೊಳ್ಳಬೇಕು. ಇವರು ಪ್ರೀತಿಸಿ ಮದವೆಯಾದವರು ಕೊನೆವರೆಗೂ ಇರಲು ಸಾಧ್ಯವೇ? ಎಂದು ಕೆಲವರು ಪ್ರಶ್ನಿಸುತ್ತಾ ಅನುಮಾನದಿಂದ ನೋಡುತ್ತಿರುತ್ತಾರೆ. ಪ್ರೇಮ ವಿವಾಹಗಳು ಗಟ್ಟಿಯಾಗಬೇಕಾದರೆ ಪರಸ್ಪರ ಹೊಂದಾಣಿಕೆ ಮತ್ತು ಪರಸ್ಪರ ಗೌರವ ಇರಬೇಕು ಎಂದರು.ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ನಟ ಮಂಡ್ಯ ರಮೇಶ್, ಹೋರಾಟಗಾರ ಉಗ್ರನರಸಿಂಹೇಗೌಡ, ಹಿರಿಯ ಪತ್ರಕರ್ತ ಕೆ. ನರಸಿಂಹಮೂರ್ತಿ, ಮಹಿಳಾ ಹೋರಾಟಗಾರರಾದ ಸುಶೀಲಾ ಬಸು, ರಂಗಾಯಣದ ಹಿರಿಯ ಕಲಾವಿದ ಕೆ.ಆರ್. ನಂದಿನಿ, ಕೋಲಾರ ಹೊಸಕೋಟೆಯ ನಗರಸಭಾ ಸದಸ್ಯ ಸೋಮಶೇಖರ್, ಕಲಾವಿದೆ ವಾಣಿ ಸತೀಶ್, ನಾಟಕ ಅಕಾಡೆಮಿ ಸದಸ್ಯ ಜಾಯಿದಾ ಇವರು ಅಂತರ್ಜಾತಿ ಮದುವೆಗಳ ಸಾಧ್ಯತೆ ಬಾಧ್ಯತೆ ಕುರಿತು ಮಾತನಾಡಿದರು.ರಂಗಾಯಣದ ಹಿರಿಯ ಕಲಾವಿದೆ ಶಶಿಕಲಾ, ಪ್ರಮೀಳಾ ಬೇಂಗ್ರೆ, ದ್ವಾರಕನಾಥ್, ರಂಗಾಯಣ ಸಿಬ್ಬಂದಿ, ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು. ಸಂಚಲನ ದೀಪಕ್ ಮೈಸೂರು, ರಂಗಕರ್ಮಿ ಯೋಗಾನಂದ್ ಅರಸೀಕೆರೆ, ರಂಗಾಯಣದ ಅಂಜುಸಿಂಗ್, ಆಲೂರು ದೊಡ್ಡನಿಂಗಪ್ಪ, ಬಸವರಾಜು, ಉಪನ್ಯಾಸಕಿ ಎನ್‌.ಆರ್. ಸ್ನೇಹಾ, ಪತ್ರಕರ್ತ‌, ನೈಸರ್ಗಿಕ ಕೃಷಿಕ ಪಿ. ಓಂಕಾರ್ ಹಾಗೂ ವಧುವರರ ಇತರೆ ಸ್ನೇಹಿತರು ಇದ್ದರು.