ಸಾರಾಂಶ
ಚಿತ್ರದುರ್ಗ: ಹಿಂದೊಮ್ಮೆ ತಹಸೀಲ್ದಾರ್ ಆಗಿದ್ದವರು ಈಗ ಅಪರ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಯಾಗಿದ್ದವರು ಜಿಲ್ಲಾಧಿಕಾರಿ.
ಚಿತ್ರದುರ್ಗದ ಆಯಕಟ್ಟಿನ ಜಾಗಕ್ಕೆ ಅಧಿಕಾರಿಗಳು ಮರಳಿ ಬಂದಿರುವ ಬೊಂಬಾಟ್ ಪ್ರಸಂಗವಿದು. ತಹಸೀಲ್ದಾರ್ ಆಗಿದ್ದ ಬಿ.ಟಿ.ಕುಮಾರಸ್ವಾಮಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೆ. ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರವಹಿಸಿಕೊಂಡಿರುವ ಟಿ.ವೆಂಕಟೇಶ್ ಚಿತ್ರದುರ್ಗದಲ್ಲಿ ಉಪ ವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಈ ಇಬ್ಬರೂ ಮರಳಿರುವುದು ಚಿತ್ರದುರ್ಗ ನೆಲದಲ್ಲಿ ಅಚ್ಚರಿ ಹಾಗೂ ಬೆರಗು ಮೂಡಲು ಕಾರಣವಾಗಿದೆ.ಜಿಲ್ಲಾಧಿಕಾರಿಯಾಗಿದ್ದ ದಿವ್ಯಾಪ್ರಭು ಅವರನ್ನು ಸೋಮವಾರ ರಾತ್ರೋರಾತ್ರಿ ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು. ಸಾಮಾನ್ಯವಾಗಿ ಐಎಎಸ್ ಅಧಿಕಾರಿಗಳ ವರ್ಗಾವಣೆಯಾದಲ್ಲಿ ನಾಲ್ಕಾರು ಮಂದಿ ಪಟ್ಟಿ ಬಿಡುಗಡೆಯಾಗುತ್ತದೆ. ಒಂದೇ ಆದೇಶ ಮಾಡಿರುವ ರಾಜ್ಯ ಸರ್ಕಾರ ವೆಂಕಟೇಶ್ ಅವರನ್ನು ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಿ ದಿವ್ಯಾಪ್ರಭು ಅವರಿಗೆ ಜಾಗ ತೋರಿಸಿಲ್ಲ.
ರಾತ್ರಿ ಹೊರ ಬಿದ್ದ ಆದೇಶವ ಕೈಲಿಡಿದೇ ತಡಮಾಡದೆ ಮಂಗಳವಾರ ಮುಂಜಾನೆ ಚಿತ್ರದುರ್ಗಕ್ಕೆ ಆಗಮಿಸಿದ ವೆಂಕಟೇಶ್ ಮೊದಲು ನೇರವಾಗಿ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇಗುಲಕ್ಕೆ ಹೋಗಿ ಮಂಗಳಾರತಿ ತೆಗೆದುಕೊಂಡು ನಂತರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಅಧಿಕಾರ ವಹಿಸಿಕೊಂಡರು. ನೂತನ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರು ಹೂಗುಚ್ಛ ನೀಡಿ ಸ್ವಾಗತಿಸಿದರು. 2015ರ ಬ್ಯಾಚ್‍ನ ಐಎಎಸ್ ಅಧಿಕಾರಿಯಾಗಿರುವ ಟಿ.ವೆಂಕಟೇಶ್ ಅವರು, ಈ ಮೊದಲು ಚಿತ್ರದುರ್ಗ ಉಪವಿಭಾಗಾಧಿಕಾರಿಯಾಗಿ, ಹರಪನಹಳ್ಳಿ ಉಪವಿಭಾಗಾಧಿಕಾರಿ, ಚಿಕ್ಕಬಳ್ಳಾಪುರ ಜಿಲ್ಲೆ ಅಪರ ಜಿಲ್ಲಾಧಿಕಾರಿ, ಮೈಸೂರು ಜಿಲ್ಲೆ ಅಪರ ಜಿಲ್ಲಾಧಿಕಾರಿ, ರಾಜ್ಯ ಪುರಾತತ್ವ ಇಲಾಖೆ ಆಯುಕ್ತ, ಕೆಎಸ್‍ಆರ್‌ಟಿಸಿ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಹಾಗೂ ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ.ಚಿತ್ರದುರ್ಗ ಜಿಲ್ಲೆ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರವಹಿಸಿಕೊಂಡ ನಂತರ ಮಾತನಾಡಿದ ಅವರು ಪ್ರಸ್ತುತ ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ತಲೆದೋರಿದ್ದು, ಬರ ಪರಿಹಾರ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು. ಅಲ್ಲದೆ ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಜನರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ರೂಪಿಸಿರುವ ಯೋಜನೆಗಳನ್ನು ಅರ್ಹ ಎಲ್ಲ ಫಲಾನುಭವಿಗಳಿಗೆ ತಲುಪಿಸಲು ಆದ್ಯತೆ ನೀಡಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಪ್ರಭಾರ ಉಪವಿಭಾಗಾಧಿಕಾರಿ ವಿವೇಕ್, ಜಿಪಂ ಉಪಕಾರ್ಯದರ್ಶಿ ಬಿ. ಆನಂದ್ ಸೇರಿದಂತೆ ವಿವಿಧ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.