ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಐತಿಹಾಸಿಕ ಶ್ರೀಕೋಟೆ ವಿದ್ಯಾಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ ಪಟ್ಟಣದಾದ್ಯಂತ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.ಬಂದೋಬಸ್ತ್‌ಗಾಗಿ ನಿಯೋಜಿಸಿದ್ದ ಪೊಲೀಸರ ಪೈಕಿ ಬಹುತೇಕರು ಸಮವಸ್ತ್ರ ಧರಿಸಿದ್ದರೆ, ಹಲವರು ಮಫ್ತಿಯಲ್ಲಿ ಮೆರವಣಿಗೆ ವೇಳೆ ಅಶಾಂತಿ ಉಂಟು ಮಾಡಲು ಯತ್ನಿಸುವ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ವಿಶೇಷ ನಿಗಾವಹಿಸಿದ್ದರು.
ಅಧಿಕಾರಿಗಳಿಂದ ಭೇಟಿ ಪರಿಶೀಲನೆ:ಶುಕ್ರವಾರ ಮಧ್ಯಾಹ್ನ ಪಟ್ಟಣಕ್ಕೆ ಭೇಟಿ ಕೊಟ್ಟ ಜಿಲ್ಲಾಧಿಕಾರಿ ಡಾ.ಕುಮಾರ್ ಮತ್ತು ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಗಣೇಶ ಮೆರವಣಿಗೆಗೆ ಕೈಗೊಂಡಿರುವ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು.
ಪೊಲೀಸ್ ಸರ್ಪಗಾವಲು:ಕಳೆದ ಸೆ.11ರ ರಾತ್ರಿ ಪಟ್ಟಣದಲ್ಲಿ ಬದರಿಕೊಪ್ಪಲಿನ ಗಣೇಶಮೂರ್ತಿ ಮೆರವಣಿಗೆ ಸಂದರ್ಭದಲ್ಲಿ ಉಂಟಾದ ಕೋಮುಗಲಭೆ ರಾಷ್ಟ್ರಾದ್ಯಂತ ಸುದ್ದಿಯಾಗಿತ್ತು. ಇಂತಹ ಘಟನೆ ಮರುಕಳಿಸದಂತೆ ಎಚ್ಚೆತ್ತ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕೋಟೆ ವಿದ್ಯಾಗಣಪತಿ ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪಟ್ಟಣದೆಲ್ಲೆಡೆ ಪೊಲೀಸ್ ಸರ್ಪಗಾವಲು ಹಾಕಿತ್ತು.
ಮೈಸೂರು ರಸ್ತೆಯ ಎಲ್ಲಾ ಅಡ್ಡ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಮೈಸೂರು ರಸ್ತೆಯ ದರ್ಗಾ ಮುಂಭಾಗದಲ್ಲಿ 2 ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಿ ವಿಶೇಷ ಭದ್ರತೆ ಒದಗಿಸಲಾಗಿತ್ತು. ಹಿಂದೆಂದೂ ಕಾಣದ ರೀತಿಯಲ್ಲಿ ಭದ್ರತೆ ಮಾಡಲಾಗಿತ್ತು.ಡ್ರೋನ್, ಸಿಸಿ ಕ್ಯಾಮೆರಾಗಳ ಕಣ್ಗಾವಲು:
ಗಣೇಶ ಮೂರ್ತಿ ಮೆರವಣಿಗೆ ಹಾಗೂ ವಿಸರ್ಜನೆಗಾಗಿ ಪಟ್ಟಣದಾದ್ಯಂತ ಹದ್ದಿನ ಕಣ್ಣಿಟ್ಟಿದ್ದ ಪೊಲೀಸ್ ಇಲಾಖೆ, ಎಲ್ಲಾ ಚಲನವಲನಗಳನ್ನು ಸೆರೆ ಹಿಡಿಯುವ ಉದ್ದೇಶದಿಂದ ಮೆರವಣಿಗೆ ಸಾಗುವ ಎಲ್ಲಾ ರಸ್ತೆಗಳು ಮತ್ತು ಆಯಕಟ್ಟಿನ ಸ್ಥಳಗಳಲ್ಲಿ 40 ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಇದರ ಜೊತೆಗೆ 15 ವೀಡಿಯೋ ಮತ್ತು 2ಡ್ರೋನ್ ಕ್ಯಾಮೆರಾಗಳನ್ನೂ ಕೂಡ ಬಳಸಲಾಗಿತ್ತು.ಪಟ್ಟಣಕ್ಕೆ ಪ್ರವೇಶಿಸುವ ಎಲ್ಲಾ ಮುಖ್ಯರಸ್ತೆಯ ಹೊರ ಭಾಗದಲ್ಲಿ ನಾಲ್ಕು ಚೆಕ್‌ಪೋಸ್ಟ್‌ಗಳನ್ನು ತೆರೆದು ಎಲ್ಲಾ ವಾಹನಗಳು ಮತ್ತು ಅನುಮಾನಾಸ್ಪದ ವ್ಯಕ್ತಿಗಳನ್ನು ತಪಾಸಣೆ ಮಾಡಿ ಕಳಿಸಲಾಗುತ್ತಿತ್ತು.
ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತ ಬಂದ್:ಪಟ್ಟಣದ ಬಹುತೇಕ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳ ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಗಣೇಶೋತ್ಸವದಲ್ಲಿ ಪಾಲ್ಗೊಂಡಿದ್ದರು. ಶುಕ್ರವಾರದ ವಾರದ ಸಂತೆಯೂ ನಡೆಯಲಿಲ್ಲ. ತಾಲೂಕಿನಾದ್ಯಂತ ಎಲ್ಲಾ ಮಾದರಿಯ ಮದ್ಯದಂಗಡಿಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳು ಮುಚ್ಚಿದ್ದವು.
ಸಾವಿರಕ್ಕೂ ಹೆಚ್ಚು ಪೊಲೀಸರು:ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಇಬ್ಬರು ಎಎಸ್‌ಪಿ, 6 ಮಂದಿ ಡಿವೈಎಸ್‌ಪಿ, 16 ಮಂದಿ ಸಿಪಿಐ, 46 ಮಂದಿ ಪಿಎಸ್‌ಐ, 5 ಕೆಎಸ್‌ಆರ್‌ಪಿ, 5 ಡಿಎಆರ್ ತುಕಡಿ ಸೇರಿ ಒಟ್ಟು 1 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್‌ಗಾಗಿ ನಿಯೋಜಿಸಲಾಗಿತ್ತು.
ವಾಹನ ಸಂಚಾರದ ಮಾರ್ಗ ಬದಲಾವಣೆ:ಪಟ್ಟಣದ ಚಾಮರಾಜನಗರ ಜೀವರ್ಗಿ ರಾಷ್ಟ್ರೀಯಲ್ಲಿ ಗಣೇಶ ಮೆರವಣಿಗೆ ಸಾಗುವ ಸಮಯದಲ್ಲಿ ಪಟ್ಟಣಕ್ಕೆ ಪ್ರವೇಶಿಸುವ ಎಲ್ಲಾ ವಾಹನಗಳ ಸಂಚಾರದ ಮಾರ್ಗಗಳನ್ನು ಬದಲಿಸಲಾಗಿತ್ತು.
ಮೈಸೂರು ಕಡೆಯಿಂದ ನಾಗಮಂಗಲ ಪಟ್ಟಣ ಕಡೆಗೆ ಬರುತ್ತಿದ್ದ ಎಲ್ಲಾ ವಾಹನಗಳನ್ನು ಪಟ್ಟಣದ ಹೊರವಲಯದ ಕೆ.ಮಲ್ಲೇನಹಳ್ಳಿಯಿಂದ ಮಾರ್ಗ ಬದಲಿಸಿ ಕೆ.ಆರ್.ಪೇಟೆ ರಸ್ತೆಯ ಬಂಕಾಪುರ, ಶಿವನಹಳ್ಳಿ ಗೇಟ್ ಮೂಲಕ ತೆರಳುವಂತೆ ಮಾಡಲಾಗಿತ್ತು.ಅದೇ ರೀತಿ ಬೆಳ್ಳೂರು ಕಡೆಯಿಂದ ನಾಗಮಂಗಲಕ್ಕೆ ಬರುವ ಎಲ್ಲಾ ವಾಹನಗಳನ್ನು ಪಟ್ಟಣದ ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತದಿಂದ ಮಾರ್ಗಬದಲಿಸಿ ಬಿಂಡಿಗನವಿಲೆ ರಸ್ತೆಯ ಶಿವನಹಳ್ಳಿ ಗೇಟ್, ಬಂಕಾಪುರ, ಕೆ.ಮಲ್ಲೇನಹಳ್ಳಿ ಮಾರ್ಗವಾಗಿ ಮೈಸೂರು ಕಡೆಗೆ ಸಂಚರಿಸುವಂತೆ ಪೊಲೀಸರು ಸೂಚಿಸುತ್ತಿದ್ದರು.
ವಿದ್ಯಾರ್ಥಿಗಳ ಪರದಾಟ:ತಾಲೂಕಿನ ಗ್ರಾಮೀಣ ಪ್ರದೇಶದಿಂದ ಪಟ್ಟಣದ ವಿವಿಧ ಶಾಲಾ ಕಾಲೇಜುಗಳಿಗೆ ಆಗಮಿಸಿದ್ದ ವಿದ್ಯಾರ್ಥಿಗಳು ಊರಿಗೆ ವಾಪಸ್ ಹೋಗಲು ಬಸ್‌ಗಳಿಲ್ಲದೆ ಪರದಾಡಿದರು. ಪಟ್ಟಣದ ಹೊರವಲಯದ ಚೆಕ್‌ಪೋಸ್ಟ್ ವರೆಗೂ ಕಾಲ್ನಡಿಗೆಯಲ್ಲಿ ಹೋಗಿ ಬಸ್‌ಗಾಗಿ ಕಾಯುವಂತಾಗಿತ್ತು.
ಪಟ್ಟಣದಲ್ಲೇ ವಾಸ್ತವ್ಯ ಹೂಡಿದ್ದ ಸಚಿವರನಾಗಮಂಗಲ: ಪಟ್ಟಣದ ಐತಿಹಾಸಿಕ ಶ್ರೀಕೋಟೆ ವಿದ್ಯಾಗಣಪತಿ ಉತ್ಸವವವನ್ನು ಶಾಂತಿಯುತವಾಗಿ ನೆರವೇರಿಸುವ ದೃಷ್ಟಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಕ್ಷೇತ್ರದಲ್ಲೇ ಇದ್ದುಕೊಂಡು ರಾತ್ರಿ ಪಟ್ಟಣದಲ್ಲಿ ವಾಸ್ತವ್ಯ ಹೂಡಿದ್ದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ಗಣೇಶ ಮೆರವಣಿಗೆ ಹಾಗೂ ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆಗಳೂ ಕೂಡ ಮರುಕಳಿಸದಂತೆ ಬಹಳ ಎಚ್ಚರಿಕೆ ವಹಿಸಬೇಕು. ಸಣ್ಣ ಪುಟ್ಟ ಸಮಸ್ಯೆಯಾದರೂ ಕೂಡ ನಾನು ಸಹಿಸುವುದಿಲ್ಲ ಎಂದು ಕಟ್ಟು ನಿಟ್ಟಿನ ಸೂಚನೆ ನೀಡಿದರು.ಪುನೀತ್ ಕೆರೆಹಳ್ಳಿಗೆ ಅವಕಾಶ ನೀಡದ ಪೊಲೀಸರು
ನಾಗಮಂಗಲ: ಪಟ್ಟಣದಲ್ಲಿ ಶುಕ್ರವಾರ ನಡೆದ ಗಣೇಶ ಮೂರ್ತಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಬಜರಂಗದಳದ ಮುಖಂಡ ಪುನೀತ್ ಕೆರೆಹಳ್ಳಿ ಅವರನ್ನು ಪೊಲೀಸರು ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಪಟ್ಟಣದ ಟಿ.ಮರಿಯಪ್ಪ ವೃತ್ತದಲ್ಲಿ ಅವರನ್ನು ತಡೆದು ವಾಪಸ್ ಕಳುಹಿಸಿದ ಘಟನೆಯೂ ನಡೆಯಿತು.