ಕದರಮಂಡಲಗಿ ಹೊರವಲಯದಲ್ಲಿ ಚಿರತೆ ಪ್ರತ್ಯಕ್ಷ

| Published : Oct 26 2024, 12:54 AM IST

ಸಾರಾಂಶ

ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ಸಂಜೆ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ಬ್ಯಾಡಗಿ: ತಾಲೂಕಿನ ಕದರಮಂಡಲಗಿ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ಸಂಜೆ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ಇತ್ತೀಚೆಗೆ ಬುಡಪನಹಳ್ಳಿ ಗ್ರಾಮದ ನಾಟಿಕೋಳಿ ಸಾಕಾಣಿಕೆ ಘಟಕದ (ಫಾರಂ) ಮೇಲೆ ಚಿರತೆಯೊಂದು ದಾಳಿ ನಡೆಸಿ 200ಕ್ಕೂ ಕೋಳಿಗೆ ಸಾವಿಗೆ ಕಾರಣವಾಗಿದ್ದು ಘಟನೆ ಮಾಸುವ ಮುನ್ನವೇ ಗ್ರಾಮಕ್ಕೆ ಹತ್ತಿರ ಅಷ್ಟಕ್ಕೂ ಜನರು ಓಡಾಡುವ ಪ್ರದೇಶದಲ್ಲಿ ಚಿರತೆ ನಿರ್ಭೀತವಾಗಿ ಓಡಾಡುತ್ತಿರುವ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿವೆ.

ಓಲೇಕಾರ ಎಂಬುವರ ಜಮೀನಿಗೆ ಹೋಗುವ ದಾರಿಯಲ್ಲಿ ಚಿರತೆ ಪತ್ಯಕ್ಷವಾಗಿ ಕಂಡುಬಂದಿದೆ. ಈ ಕುರಿತು ಕದರ ಮಂಡಲಗಿ ಗ್ರಾಮದ ಫಕ್ಕೀರೇಶ ಹೂಲಿಹಳ್ಳಿ ಎಂಬುವರ ಚಿರತೆಯನ್ನು ನೋಡಿ ಸದರಿ ವಿಷಯವನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ.

ಒಂದಲ್ಲ ಮೂರು ಚಿರತೆ: ಈ ಭಾಗದಲ್ಲಿ ಒಂದು ದೊಡ್ಡ ಚಿರತೆ ಹಾಗೂ 2 ಮರಿಗಳು ಸುಳಿದಾಡುತ್ತಿರುವ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ಲಭ್ಯವಾಗಿತ್ತು, ಮುಂಜಾಗ್ರತಾ ಕ್ರಮವಾಗಿ ಬುಡಪನಹಳ್ಳಿಯಲ್ಲಿ ಬೋನ ಅಳವಡಿಸಿದ್ದರೂ ಚಾಣಾಕ್ಷ ಚಿರತೆಗಳು ಮಾತ್ರ ಬೋನಿಗೆ ಬಿದ್ದಿರಲಿಲ್ಲ.

ಅಧಿಕಾರಿಗಳಿಂದ ಸ್ಥಳ ಪರಿಶೀಲನೆ: ಸ್ಥಳ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಇರುವುದನ್ನು ದೃಢೀಕ ರಿಸಿದ್ದಾರೆ, ರೈತರು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು, ಸಂಜೆ ವೇಳೆಯಲ್ಲಿ ಆದಷ್ಟು ಬೇಗನೆ ಮನೆ ಸೇರಬೇಕು ಹೊಲಗಳಿಗೆ ಯಾವುದೇ ಕಾರಣಕ್ಕೂ ಒಂಟಿಯಾಗಿ ಹೋಗದೇ, ಮೂರ‍್ನಾಲ್ಕು ಜನರು ಒಟ್ಟಿಗೆ ತೆರಳಬೇಕು ಸಾಧ್ಯವಾದಷ್ಟು ಸದ್ದು ಗದ್ದಲ ಮಾಡಿಕೊಂಡು ಓಡಾಡಿದಲ್ಲಿ ಚಿರತೆ ಬೆದರಿ ನಿಮ್ಮ ಮೇಲೆ ಮುಗಿ ಬೀಳುವ ಸಾಧ್ಯತೆ ಕಡಿಮೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.ಶೀಘ್ರ ಬಂಧಿಸಲು ಸೂಚನೆ:ಕೃಷಿ ಚಟುವಟಿಕೆಗಳು ಬಹಳಷ್ಟು ಜೋರಾಗಿ ನಡೆಯುತ್ತಿವೆ, ಆದರೆ ಚಿರತೆ ಪ್ರತ್ಯಕ್ಷದಿಂದ ರೈತರು ಸಾರ್ವಜನಿಕರು ಭಯಭೀತರಾಗಿದ್ದಾರೆ, ಆದಷ್ಟು ಬೇಗನೆ ಚಿರತೆಯನ್ನು ಬಂಧಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು ಕೃಷಿ ಕೆಲಸಗಳಿಗೆ ತೊಂದರೆಯಾಗದAತೆ ಎಚ್ಚರಿಕೆ ವಹಿಸಲು ಸೂಚಿಸಿದ್ದೇನೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ಬೋನ್ ಸ್ಥಳಾಂತರಕ್ಕೆ ಚಿಂತನೆ:ಬುಡಪನಹಳ್ಳಿಯಲ್ಲಿರುವ ಚಿರತೆ ಬಂಧಿಸುವ ಬೋನನ್ನು ಕದರಮಂಡಲಗಿ ಗ್ರಾಮಕ್ಕೆ ಸ್ಥಳಾಂತರಿಸಲು ಚಿಂತನೆ ನಡೆಸಲಾಗಿದ್ದು ಈ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಉಪವಲಯ ಅರಣ್ಯಾಧಿಕಾರಿ ಚಮಲಿ ಕಾಲೇಕಾನವರ ಹೇಳಿದರು.