ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯಜಿಲ್ಲೆಯಲ್ಲಿ ಸೌಹಾರ್ದ ಮತ್ತು ಶಾಂತಿ ಕದಡುತ್ತಿರುವ ಶಕ್ತಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹಾಗೂ ಕೆರಗೋಡು ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಫೆ.1ರಂದು ನಗರದ ಪ್ರವಾಸಿ ಮಂದಿರದಲ್ಲಿ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಲಾಗುವುದು ಎಂದು ಸಮಾನ ಮನಸ್ಕರ ವೇದಿಕೆ ಟಿ.ಎಲ್.ಕೃಷ್ಣೇಗೌಡ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ಸಂಘಟನೆಗಳ ಮುಖಂಡರು ಮತ್ತು ಸಾಹಿತಿಗಳು ಸೇರಿದಂತೆ ಜಗದೀಶ್ ಕೊಪ್ಪ, ಗುರುಪ್ರಸಾದ್ ಕೆರಗೋಡು, ಕೋಟಿಗಾನಹಳ್ಳಿ ರಾಮಯ್ಯ, ಪ್ರೊ.ಹುಲ್ಕೆರೆ ಮಹದೇವು, ಜಿ.ಟಿ.ವೀರಪ್ಪ ನೇತೃತ್ವದಲ್ಲಿ ಸಭೆ ಆರಂಭವಾಗಲಿದೆ ಎಂದರು.ಕ್ಷುಲ್ಲಕ ವಿಚಾರ ಮುಂದಿಟ್ಟುಕೊಂಡು ಜಿಲ್ಲೆಯ ಸೌಹಾರ್ದ ಪರಂಪರೆಗೆ ಮಸಿ ಬಳಿದು, ಶಾಂತಿ ಮತ್ತು ನೆಮ್ಮದಿ ಕೆಡಿಸುತ್ತಿರುವ ಶಕ್ತಿಗಳ ವಿರುದ್ಧ ಜಾಗೃತಿ ಮೂಡಿಸಲು, ಜಿಲ್ಲೆಯನ್ನು ಸೌಹಾರ್ದದ ನೆಲೆಯಾಗಿ ಉಳಿಸಿಕೊಳ್ಳುತ್ತೇವೆ ಎಂಬ ಸಂದೇಶ ಕೊಡಲು ಸಂಘಟನೆಗಳು ಮುಂದಾಗಿವೆ. ಈ ಸಂಬಂಧ ಫೆ.7ರಂದು ಮಂಡ್ಯ ನಗರ ಬಂದ್‌ಗೆ ಕರೆ ನೀಡುವುದು ಬೇಡವೋ ಅಥವಾ ಬೇಕೋ ಎಂಬುದನ್ನು ಚರ್ಚೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದರು.
ಕೆರಗೋಡು ಗ್ರಾಮದಲ್ಲಿಯೂ ಒಂದು ಸಭೆ ನಡೆಸುತ್ತೇವೆ. ಆ ಸಭೆಯಲ್ಲಿ ಎಲ್ಲರನ್ನೂ ಒಟ್ಟುಗೂಡಿಸಿ ಶಾಂತಿ ಕಾಪಾಡಲು ಮನವಿ ಮಾಡಲಾಗುವುದು ಹಾಗೂ ಮನಃ ಪರಿವರ್ತೆನೆಗೂ ಪ್ರಯತ್ನ ಪಡುತ್ತೇವೆ. ಕಾನೂನು ಮುರಿಯುವ ಮತ್ತು ಶಾಂತಿ ಕದಡುವ ಶಕ್ತಿಗಳ ಮೇಲೆ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕು. ರಾಷ್ಟ್ರ ಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಸಿದ ವಿಕೃತ ಮನಸ್ಸಿನ ವ್ಯಕ್ತಿಗಳ ಮೇಲೂ ಕ್ರಮ ಆಗಬೇಕು ಎಂದರು.ರಾಜಕೀಯ ಪಕ್ಷಗಳು ಜವಾಬ್ದಾರಿಯಿಂದ ವರ್ತಿಸಬೇಕು. ಜಿಲ್ಲೆ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ವಿರುದ್ಧ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದ ಅಡಿಯಲ್ಲಿ ಹೋರಾಡಲಿ. ಅದು ಬಿಟ್ಟು ಕ್ಷುಲ್ಲಕ ರಾಜಕಾರಣ ಮಾಡಬಾರದು ಎಂದರು.
ಜನರನ್ನು ಭಾವನಾತ್ಮಕ ವಿಷಯಗಳ ಮೇಲೆ ಕೆರಳಿಸಿ ಬದುಕಿನ ಪ್ರಶ್ನೆಗಳನ್ನು ಮೂಲೆಗೆ ತಳ್ಳುವ ನೀಚ ರಾಜಕಾರಣವನ್ನು ಯಾವುದೇ ಸಂಘಟನೆ ಅಥವಾ ಪಕ್ಷ ಮಾಡಬಾರದು ಎಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಎಂ.ಬಿ.ನಾಗಣ್ಣಗೌಡ, ಲಕ್ಷ್ಮಣ್ ಚೀರನಹಳ್ಳಿ, ಬಿ.ಬೊಮ್ಮೇಗೌಡ, ಸಿ.ಕುಮಾರಿ, ಟಿ.ಡಿ.ಬಸವರಾಜ್, ಸಿದ್ದರಾಜು, ಎಚ್.ಡಿ.ಜಯರಾಮ, ಕೆಂಪಣ್ಣ ಸಾಗ್ಯಾ, ಎಂ.ವಿ.ಕೃಷ್ಣ, ನರಸಿಂಹಮೂರ್ತಿ ಇದ್ದರು.