ಕನ್ನಡಪ್ರಭ ವಾರ್ತೆ ಯಲ್ಲಾಪುರ
ತಾಲೂಕಿನ ಟಿ.ಎಂ.ಎಸ್ ಸಂಸ್ಥೆಯ ಚುನಾವಣೆ ಕಳೆದ ೯ ತಿಂಗಳ ಹಿಂದೆ ನಡೆದು, ಉಚ್ಛ ನ್ಯಯಾಲಯದವರೆಗೂ ೨ ಗುಂಪುಗಳ ನಡುವೆ ಹೋರಾಟ ನಡೆದು ಅಂತಿಮವಾಗಿ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಸೋಮವಾರ ಚುನಾವಣಾ ಫಲಿತಾಂಶವನ್ನು ಚುನಾವಣಾಧಿಕಾರಿ ಕುಮಟಾ ಸಹಾಯಕ ನಿಬಂಧಕ ಬಿ.ಡಿ. ಡಿಸೋಜಾ ಪ್ರಕಟಿಸಿದರು.ಸಾಮಾನ್ಯ ಕ್ಷೇತ್ರದಿಂದ ನಾರಾಯಣ ಕಾಮೇಶ್ವರ ಭಟ್ಟ, ವೆಂಕಟ್ರಮಣ ಓಂಕಾರ ಭಟ್ಟ, ಹಿಂದುಳಿದ ಅ ವರ್ಗದಲ್ಲಿ ಅಪ್ಪು ವಾಸುದೇವ ಆಚಾರಿ, ಎಸ್ಟಿ ವರ್ಗದಲ್ಲಿ ಸಾಲು ನಾಗೇಶ ಸಿದ್ದಿ, ಮಹಿಳಾ ಮೀಸಲಿನಲ್ಲಿ ಸೀತಾ ಕಮಲಾಕರ ಮೆಣಸುಮನೆ, ಸೌಮ್ಯಾ ವಿಶ್ವನಾಥ ಭಟ್ಟ, ಪ.ಜಾತಿಯಲ್ಲಿ ಹನುಮಂತ ಕೊರವರ್ (ಅವಿರೋಧ), ಹಿಂದುಳಿದ ಬ ವರ್ಗದಲ್ಲಿ ರಾಜೇಂದ್ರ ಶಿವಾಜಿ ಗೌಡರ್, ಸಹಕಾರಿ ಸಂಘಗಳ ಪ್ರತಿನಿಧಿ ಕ್ಷೇತ್ರದಲ್ಲಿ ನರಸಿಂಹ ಕೋಣೆಮನೆ, ಸುಬ್ಬಣ್ಣ ಬೋಳ್ಮನೆ, ಜಿ.ವಿ.ಹೆಗಡೆ ಹಿತ್ಲಳ್ಳಿ, ಮಂಜುನಾಥ ಹೆಗಡೆ ಜಡ್ಡಿಗದ್ದೆ, ಗಣಪತಿ ಮುದ್ದೆಪಾಲ, ಆರ್.ಎನ್.ಹೆಗಡೆ ಗೋರ್ಸಗದ್ದೆ ಆರಿಸಿದ್ದಾರೆ.
ಆಯ್ಕೆಯಾದ ಗಣಪತಿ ಮುದ್ದೇಪಾಲ ಮತ್ತು ಆರ್.ಎನ್. ಹೆಗಡೆ ಗೋರ್ಸಗದ್ದೆ ಬಾರದಿರುವುದರಿಂದ ಇವರನ್ನು ಹೊರತುಪಡಿಸಿ ಉಳಿದ ಎಲ್ಲರಿಗೂ ಚುನಾವಣಾಧಿಕಾರಿಗಳು ಪ್ರಮಾಣ ಪತ್ರ ನೀಡಿದರು.ಸತ್ಯಕ್ಕೆ, ಧರ್ಮಕ್ಕೆ ಜಯ: ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ
ಟಿಎಂಎಸ್ ಚುನಾವಣೆ ರೈತರು ಒಗ್ಗಟ್ಟಾಗಿ ಇದ್ದರೆ ಏನಾಗುತ್ತದೆ ಎಂಬುದನ್ನು ತೋರಿಸಿಕೊಟ್ಟಿದೆ. ಅಧಿಕಾರಿ, ಹಣ, ಸರ್ಕಾರದ ಬಲವಿದ್ದರೂ ಜನರ ಮುಂದೆ ಏನೂ ಅಲ್ಲ ಎಂಬುದು ಈ ಚುನಾವಣೆಯಲ್ಲಿ ತೋರಿಸಿದ್ದಲ್ಲದೇ ಸತ್ಯಕ್ಕೆ, ಧರ್ಮಕ್ಕೆ ಜಯ ಎಂಬುದು ಸಾಬೀತುಪಡಿಸಿದೆ ಎಂದು ನಿಕಟಪೂರ್ವ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.
ಸೋಮವಾರ ಸಂಜೆ ಯಲ್ಲಾಪುರ ಟಿಎಂಎಸ್ ಸಭಾಭವನದಲ್ಲಿ ಚುನಾವಣಾ ಫಲಿತಾಂಶ ಪ್ರಕಟಗೊಂಡ ನಂತರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನನ್ನನ್ನು ಬಿಟ್ಟರೆ ಯಾರೂ ಇಲ್ಲ ಎನ್ನುವ ಭಾವನೆ ಒಳಿತಲ್ಲ ಎಂಬುದಕ್ಕೆ ಇದೇ ಸಾಕ್ಷಿ. ನ್ಯಾಯಕ್ಕೆ, ಧರ್ಮಕ್ಕೆ ಎಂದೂ ಚ್ಯುತಿಯಾಗದು. ಅಧರ್ಮಕ್ಕೆ ಶಾಶ್ವತ ಬೆಲೆ ದೊರೆಯದು. ನಮ್ಮ ರೈತರು ಬದುಕಿದ್ದರೆ ಮಾತ್ರ ಸಂಘವು ಉಳಿಯುತ್ತದೆ. ನಮಗೆ ಸಂಘದ ಉಳಿವು, ರೈತರ ಬದುಕು ಮಹತ್ವದ್ದು. ನಮ್ಮ ಕಳೆದ ೧೦ ವರ್ಷದ ಅವಧಿಯಲ್ಲಿ ರೈತರ ಬರ, ಜನಪರ ಆಡಳಿತ ನೀಡಿದ್ದೇವೆ. ಜೊತೆಯಲ್ಲಿ ಕಳೆದ ೯ ತಿಂಗಳ ನ್ಯಾಯಾಲಯದ ಹೋರಾಟದಲ್ಲಿ ನನಗೆ ಅನೇಕರು ಸಹಕಾರ ನೀಡಿದ್ದಾರೆ. ಅವರನ್ನೆಲ್ಲ ಸ್ಮರಿಸುತ್ತೇನೆ ಎಂದರು.ಹಿರಿಯ ಸಹಕಾರಿ ಪ್ರಮೋದ ಹೆಗಡೆ ಮತನಾಡಿ, ಪ್ರಜಾಪ್ರಭುತ್ವದಲ್ಲಿ ಸರ್ಕಾರ, ಹಣ, ಅಧಿಕಾರ ಇದ್ದರೂ ನ್ಯಾಯಾಲಯದಲ್ಲಿ ಸತ್ಯಕ್ಕೆ ಜಯ ಸಿಗುತ್ತದೆ ಎಂಬುದನ್ನು ಈ ಚುನಾವಣೆ ರುಜುವಾತುಪಡಿಸಿದೆ ಎಂದರು.ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ, ಮಾಜಿ ನಿರ್ದೇಶಕ ವೆಂಕಟ್ರಮಣ ಬೆಳ್ಳಿ, ನಿವೃತ್ತ ವ್ಯವಸ್ಥಾಪಕ ವಿ.ಟಿ.ಹೆಗಡೆ ತೊಂಡೆಕೆರೆ, ಜಿಪಂ ಮಾಜಿ ಸದಸ್ಯ ರಾಘವೇಂದ್ರ ಭಟ್ಟ ಹಾಸಣಗಿ, ಹಾಲಿ ನಿರ್ದೇಶಕ ಸುಬ್ಬಣ್ಣ ಬೋಳ್ಮನೆ ಮಾತನಾಡಿದರು. ಎಲ್ಲ ನಿರ್ದೇಶಕರು ಉಪಸ್ಥಿತರಿದ್ದರು. ಸುಬ್ಬಣ್ಣ ಉದ್ದಾಬೈಲ ಸೌಆಗತಿಸಿದರು. ಟಿ.ಆರ್. ಹೆಗಡೆ ನಿರ್ವಹಿಸಿದರು. ಕೆ.ಟಿ. ಹೆಗಡೆ ವಂದಿಸಿದರು.