ನೂರಾರು ಮಕ್ಕಳ ಕಲರವದಿಂದ ಗಿಜಿಗುಡುತ್ತಿದ್ದ ತಾಲೂಕಿನ ಐದು ಸರ್ಕಾರಿ ಪ್ರಾಥಮಿಕ ಶಾಲೆಗಳು ಇದೀಗ ವಿದ್ಯಾರ್ಥಿಗಳ ಕೊರತೆಯಿಂದಾಗಿ ಬಾಗಿಲು ಮುಚ್ಚಿವೆ.

ಖಾಸಗಿ ಶಾಲೆಗಳ ಸೆಳೆತಕ್ಕೆ ಮುಚ್ಚಿದ ಸರ್ಕಾರಿ ಶಾಲೆಗಳು

ವರ್ಷದ ಆರಂಭದಲ್ಲೇ ಅಂಕೋಲಾದ ೫ ಶಾಲೆಗಳು ಬಂದ್‌

ರಾಘು ಕಾಕರಮಠ

ಕನ್ನಡಪ್ರಭ ವಾರ್ತೆ ಅಂಕೋಲಾ

ನೂರಾರು ಮಕ್ಕಳ ಕಲರವದಿಂದ ಗಿಜಿಗುಡುತ್ತಿದ್ದ ತಾಲೂಕಿನ ಐದು ಸರ್ಕಾರಿ ಪ್ರಾಥಮಿಕ ಶಾಲೆಗಳು ಇದೀಗ ವಿದ್ಯಾರ್ಥಿಗಳ ಕೊರತೆಯಿಂದಾಗಿ ಬಾಗಿಲು ಮುಚ್ಚಿವೆ!

ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳ ದಾಖಲಾತಿ ಕುಸಿಯುತ್ತಿರುವ ಆತಂಕಕಾರಿ ಬೆಳವಣಿಗೆ ಮಧ್ಯೆ, ಉಳಿದಿದ್ದ ಒಂದೊ-ಎರಡೋ ವಿದ್ಯಾರ್ಥಿಗಳು ಸಹ ಸಮೀಪದ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆದಿದ್ದರಿಂದ ಈ ಸಾಲೆಗಳಿಗೆ ಶಾಶ್ವತ ಬೀಗ ಬಿದ್ದಿದೆ.

ತಾಲೂಕಿನ ಕಿ.ಪ್ರಾ. ಉರ್ದು ಶಾಲೆ ಬೊಬ್ರವಾಡ, ಕಿ.ಪ್ರಾ. ಶಾಲೆ ದಂಡೇಭಾಗ ಹಿಚ್ಕಡ, ಕಿ.ಪ್ರಾ. ಶಾಲೆ ಬೇಣದಹಳ್ಳಿ, ಕಿ.ಪ್ರಾ. ಶಾಲೆ ಕಲ್ಲೇಶ್ವರ, ಕಿ.ಪ್ರಾ. ಶಾಲೆ ಕೈಕಿಣಿ ಇವು ಬಂದ್‌ ಆಗಿವೆ.

ಖಾಸಗಿ ಶಾಲೆಗಳ ಆಕರ್ಷಣೆ:

ಖಾಸಗಿ ಶಾಲೆಗಳತ್ತ ಪಾಲಕರ ಹೆಚ್ಚುತ್ತಿರುವ ಒಲವು ಹಾಗೂ ಇಂಗ್ಲಿಷ್ ಮಾಧ್ಯಮ ಶಿಕ್ಷಣದ ಮೇಲಿನ ಆಸಕ್ತಿ ಸರ್ಕಾರಿ ಶಾಲೆಗಳ ದಾಖಲಾತಿಗೆ ಹೊಡೆತ ನೀಡುತ್ತಿದೆ. ಇದರ ಪರಿಣಾಮವಾಗಿ ಕೆಲ ಶಾಲೆಗಳಲ್ಲಿ ಒಂದೆರಡು ಮಕ್ಕಳು ಮಾತ್ರ ಉಳಿದಿದ್ದರಿಂದ ಶಾಲೆಗಳನ್ನು ಪ್ರತ್ಯೇಕವಾಗಿ ನಡೆಸುವುದು ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

ಶಾಲೆಗಳು ಮುಚ್ಚಿದ್ದರಿಂದ ವಿದ್ಯಾರ್ಥಿಗಳು ಇದೀಗ ದೂರದ ಶಾಲೆಗಳಿಗೆ ತೆರಳಿ ಶಿಕ್ಷಣ ಪಡೆಯಬೇಕಾದ ಪರಿಸ್ಥಿತಿ ಎದುರಾಗಿದೆ. ಶಿಕ್ಷಣ ತಜ್ಞರ ಅಭಿಪ್ರಾಯದಂತೆ ಸರ್ಕಾರಿ ಶಾಲೆಗಳಲ್ಲಿನ ಮೂಲಸೌಕರ್ಯ, ಗುಣಮಟ್ಟದ ಬೋಧನೆ, ಡಿಜಿಟಲ್ ಶಿಕ್ಷಣ, ಪಠ್ಯೇತರ ಚಟುವಟಿಕೆಗಳು ಹಾಗೂ ಸಾರ್ವಜನಿಕರ ವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಇನ್ನಷ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇಲ್ಲದಿದ್ದರೆ ಮುಂದಿನ ವರ್ಷಗಳಲ್ಲಿ ಇನ್ನಷ್ಟು ಸರ್ಕಾರಿ ಶಾಲೆಗಳು ಇದೇ ಪರಿಸ್ಥಿತಿಯನ್ನು ಎದುರಿಸುವ ಅಪಾಯವಿದೆ ಎಂದು ಶಿಕ್ಷಣತಜ್ಞರು ಎಚ್ಚರಿಸುತ್ತಾರೆ.

ಶಾಲೆಗೆ ದಾಖಲಾದ ಒಂದೊ-ಎರಡೋ ವಿದ್ಯಾರ್ಥಿಗಳು ಸಮೀಪದ ಶಾಲೆಗಳಿಗೆ ಪ್ರವೇಶ ಪಡೆದಿದ್ದಾರೆ. ವಿದ್ಯಾರ್ಥಿ ಪಾಲಕರಿಗೆ ಮಕ್ಕಳನ್ನು ಇದೇ ಶಾಲೆಯಲ್ಲಿ ಮುಂದುವರೆಸುವಂತೆ ಮನವಿ ಮಾಡಿದ್ದೇವು ಆದರೂ ಸಹ ಸ್ವಯಂ ಪ್ರೇರಿತವಾಗಿ ಮಕ್ಕಳನ್ನು ಹತ್ತಿರದ ಶಾಲೆಗಳಿಗೆ ಸೇರಿಸಿದ್ದಾರೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.ಬೇರೆ ಶಾಲೆಗಳಿಗೆ ಶಿಕ್ಷಕರ ನಿಯೋಜನೆ:ಅಂಕೋಲಾ ತಾಲೂಕಿನಲ್ಲಿ ೭೮ ಕಿರಿಯ ಪ್ರಾಥಮಿಕ ಹಾಗೂ ೭೯ ಹಿರಿಯ ಪ್ರಾಥಮಿಕ ಶಾಲೆಗಳಿದ್ದವು. ಈಗ ತಾಲೂಕಿನಲ್ಲಿ ೫ ಕಿ.ಪ್ರಾ.ಶಾಲೆಗಳು ಕಣ್ಣು ಮುಚ್ಚಿದ್ದರಿಂದ ಕಿ.ಪ್ರಾ. ಶಾಲೆಯ ಸಂಖ್ಯೆ ೭೩ ಕ್ಕೆ ಕುಸಿದಿದೆ. ಬಾಗಿಲು ಮುಚ್ಚಿದ ಶಾಲೆಗಳಲ್ಲಿ ಕರ್ತವ್ಯದಲ್ಲಿದ್ದ ಶಿಕ್ಷಕರನ್ನು ಬೇರೆ ಶಾಲೆಗಳಿಗೆ ನಿಯೋಜನೆಗೊಳಿಸಲಾಗಿದೆ.

ಸರ್ಕಾರಿ ಶಾಲೆಗಳ ಮೇಲಿನ ವಿಶ್ವಾಸವನ್ನು ಪುನಃ ಬೆಳೆಸುವುದು ಸರ್ಕಾರ, ಶಿಕ್ಷಣ ಇಲಾಖೆ, ಜನಪ್ರತಿನಿಧಿಗಳು, ಶಿಕ್ಷಕರು ಹಾಗೂ ಪಾಲಕರೆಲ್ಲರ ಜವಾಬ್ದಾರಿಯಾಗಿದ್ದು, ಈ ದಿಕ್ಕಿನಲ್ಲಿ ಸಮನ್ವಯದ ಪ್ರಯತ್ನಗಳು ಅಗತ್ಯವಾಗಿವೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಶಾಂಬಾ ನಾಯ್ಕ.

ಯಾವುದೇ ಮಗುವಿನ ಶಿಕ್ಷಣಕ್ಕೆ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜೊತೆಗೆ ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಿಸಲು ಜಾಗೃತಿ ಕಾರ್ಯಕ್ರಮಗಳು, ಮನೆಮನೆ ಭೇಟಿ ಹಾಗೂ ಪಾಲಕರ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಬಿಇಒ ಮಂಗಲಲಕ್ಷ್ಮೀ ಪಾಟೀಲ ತಿಳಿಸಿದ್ದಾರೆ.