ಸಾರಾಂಶ
ಹೊಸದುರ್ಗ: ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸಲು ಶಾಸಕರು ರಾಜ್ಯ ಸರ್ಕಾರದ ಗಮನ ಸೇಳೆಯುವಂತೆ ಒತ್ತಾಯಿಸಿ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದವತಿಯಿಂದ ಶಾಸಕ ಬಿ.ಜಿ.ಗೋವಿಂದಪ್ಪ ಅವರಿಗೆ ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಶನಿವಾರ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಆರ್.ಗಂಗಾಧರಪ್ಪ ಮಾತನಾಡಿ, 7ನೇ ವೇತನ ಆಯೋಗದ ವರದಿ ಶೀಘ್ರವಾಗಿ ಪಡೆದುಕೊಂಡು ಸರ್ಕಾರ ಈಗಾಗಲೇ ನೀಡಿರುವ ಶೇ.17ರಷ್ಟು ಮಧ್ಯಂತರ ಪರಿಹಾರ ಭತ್ಯೆ ಸೇರಿದಂತೆ ಶೇ.40ರಷ್ಟು ಫಿಟ್‌ಮೆಂಟ್ ಸೌಲಭ್ಯ ನೀಡಬೇಕು. ಈಗಾಗಲೇ ಪಂಜಾಬ್, ರಾಜಸ್ಥಾನ, ಛತೀಸ್‌ಗಢ, ಜಾರ್ಖಂಡ ಮತ್ತು ಹಿಮಾಚಲ ಪ್ರದೇಶ ಸರ್ಕಾರ ಜಾರಿಗೆ ತಂದಿರುವಂತೆ ಎನ್‌ಪಿಎಸ್ ಯೋಜನೆ ರದ್ದು ಪಡಿಸಿ ಕರ್ನಾಟಕದಲ್ಲಿಯೂ ಹಳೆ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.ರಾಜ್ಯ ಪರಿಷತ್ ಸದಸ್ಯ ಕೆ.ಸಿ.ಶಶಿಧರ್ ಮಾತನಾಡಿ, ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ವರ್ಗದವರಿಗೆ ನಗದು ರಹಿತ ಚಿಕಿತ್ಸೆ ನೀಡುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೆ ತರಬೇಕು ಎಂದು ಹೇಳಿದರು.
ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ರಾಜ್ಯ ಸರ್ಕಾರಿ ನೌಕರರ ಸಂಘದ ಬೇಡಿಕೆ ಸರ್ಕಾರದ ಗಮನಕ್ಕೆ ತರಲಾಗುವುದು. ನೌಕರರ ಶ್ರೇಯೋಭಿವೃದ್ಧಿಗಾಗಿ ನಿಮ್ಮ ಜೊತೆ ಇರುವುದಾಗಿ ಹೇಳಿದರು.ಈ ವೇಳೆ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಬಿ.ಆರ್.ಜಯಣ್ಣ, ರಾಜ್ಯ ಸಂಘದ ಜಂಟಿ ಕಾರ್ಯದರ್ಶಿ ಎಂ.ಆರ್.ಶಾಂತಪ್ಪ, ಸಹ ಕಾರ್ಯದರ್ಶಿ ಆರ್.ಲಕ್ಷ್ಮಯ್ಯ, ಖಜಾಂಚಿ ನಾಗರಾಜ್, ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಪ್ರಶಾಂತ್, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಂತೇಶ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುತ್ತಿಗಟ್ಟೆ ಪ್ರಕಾಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಆರ್.ಮಂಜುನಾಥ್, ಧನಂಜಯ ಮೆಂಗಸಂದ್ರ, ಶಶಿಧರ್, ಶ್ರೀಧರ್ ಮೂರ್ತಿ, ವಿವಿಧ ಸಂಘದ ಪದಾಧಿಕಾರಿಗಳು, ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.