ತುಮಕೂರು: ದೇವಸ್ಥಾನ ಸ್ವಚ್ಛಗೊಳಿಸಿದ ಶಾಸಕ ಜ್ಯೋತಿ ಗಣೇಶ್‌

| Published : Jan 21 2024, 01:31 AM IST

ತುಮಕೂರು: ದೇವಸ್ಥಾನ ಸ್ವಚ್ಛಗೊಳಿಸಿದ ಶಾಸಕ ಜ್ಯೋತಿ ಗಣೇಶ್‌
Share this Article
  • FB
  • TW
  • Linkdin
  • Email

ಸಾರಾಂಶ

ತುಮಕೂರಿನಲ್ಲಿ ದೇಗುಲ ಸ್ವಚ್ಛಗೊಳಿಸಿದ ಶಾಸಕ ಜ್ಯೋತಿಗಣೇಶ್‌

ಕನ್ನಡಪ್ರಭ ವಾರ್ತೆ ತುಮಕೂರು

ಅಯೋಧ್ಯೆಯಲ್ಲಿ ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಸಮಾರಂಭದ ಹಿನ್ನೆಲೆಯಲ್ಲಿ ಎಲ್ಲಾ ದೇವಸ್ಥಾನಗಳ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನೀಡಿದ ಸಂದೇಶದ ಹಿನ್ನೆಲೆಯಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್ ಶನಿವಾರ ನಗರದ ದಿಬ್ಬೂರಿನ ನರಸಿಂಹಸ್ವಾಮಿ ದೇವಸ್ಥಾನ ಸ್ವಚ್ಛಗೊಳಿಸಿದರು.

ಸ್ಥಳೀಯ ಮುಖಂಡರೊಂದಿಗೆ ನರಸಿಂಹಸ್ವಾಮಿಗೆ ಪೂಜೆ ಸಲ್ಲಿಸಿದ ಶಾಸಕರು ನಂತರ ಪೊರಕೆ ಹಿಡಿದು ದೇವಸ್ಥಾನ ಪ್ರಾಂಗಣ ಗುಡಿಸಿ ಸ್ವಚ್ಛಗೊಳಿಸಿದರು. ಶಾಸಕರಿಂದ ಪ್ರೇರಣೆಗೊಂಡ ನಾಗರೀಕ ಮುಖಂಡರು ಸ್ವಚ್ಛತಾಕಾರ್ಯದಲ್ಲಿ ಭಾಗಿಯಾದರು.

ಈ ವೇಳೆ ಮಾತನಾಡಿದ ಶಾಸಕ ಜಿ.ಬಿ. ಜ್ಯೋತಿಗಣೇಶ್, ಈ ತಿಂಗಳ 22 ರಂದು ಅಯೋಧ್ಯೆಯಲ್ಲಿ ಶ್ರೀ ರಾಮ ಮೂರ್ತಿಯ ಪ್ರಾಣಪ್ರತಿಷ್ಠಾನ ಕಾರ್ಯಕ್ರಮ ಭಕ್ತಿ ಸಂಭ್ರಮದಿಂದ ನೆರವೇರುತ್ತಿದೆ. ಇದರ ಅಂಗವಾಗಿ ನಗರದಲ್ಲಿ ಅಯೋಧ್ಯೆ ಮಂತ್ರಾಕ್ಷತೆ ವಿತರಣೆ, ದೇವಸ್ಥಾನ ಸ್ವಚ್ಛತೆಯಂತಹ ಹಲವಾರು ಕಾರ್ಯಕ್ರಮಗಳನ್ನು ನಾಗರಿಕರು ಕೈಗೊಂಡಿದ್ದಾರೆ.

ಪ್ರಧಾನಿ ಮೋದಿಯವರು ದೇವಸ್ಥಾನ ಸ್ವಚ್ಛತೆಗೆ ಸಂದೇಶ ನೀಡಿರುವುದು ಕೇವಲ ದೇವಸ್ಥಾನ ಮಾತ್ರವಲ್ಲ, ನಮ್ಮ ಸುತ್ತಲಿನ ಪರಿಸರ, ರಸ್ತೆ, ಪಾರ್ಕ್ಗಳ ಸ್ವಚ್ಛತೆ ಮೂಲಕ ಸ್ವಚ್ಛ ಪರಿಸರ ಕಾಪಾಡಿಕೊಳ್ಳುವ ಸ್ವಚ್ಛ ಭಾರತ ಅಭಿಯಾನ ಎಂದು ಹೇಳಿದ ಶಾಸಕರು, ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾನೆ ಸಂದರ್ಭದಲ್ಲಿ ನಗರದ ದೇವಸ್ಥಾನಗಳ ಅಲಂಕಾರ, ವಿಶೇಷ ಪೂಜೆ, ಅನ್ನಸಂತರ್ಪಣೆ, ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತರು ಹಮ್ಮಿಕೊಂಡಿದ್ದಾರೆ ಎಂದರು.

ಬಿಜೆಪಿ ನಗರ ಅಧ್ಯಕ್ಷ ಹನುಮಂತರಾಜು, ಮುಖಂಡ ಮನೋಹರಗೌಡ ಮಾತನಾಡಿ, ಪ್ರಧಾನಿ ಮೋದಿಯವರ ಸಂದೇಶ ಪಾಲಿಸಿ ಸಂಕ್ರಾಂತಿಯಿಂದ ಸ್ಥಳೀಯ ನಾಗರಿಕರ ಜೊತೆಗೆ ಬಿಜೆಪಿ ಮುಖಂಡರು ಪಾಲ್ಗೊಂಡು ನಗರದ ಎಲ್ಲಾ ದೇವಸ್ಥಾನಗಳ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿದ್ದಾರೆ. ಇಡೀ ಪ್ರಪಂಚವೇ ಭಾರತದತ್ತ ತಿರುಗಿ ನೋಡುವಂತಹ ಐತಿಹಾಸಿಕ ಕಾರ್ಯಕ್ರಮವಾಗಿ ಅಯೋಧ್ಯೆಯಲ್ಲಿ ಶ್ರೀ ರಾಮ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರುತ್ತಿದೆ ಎಂದರು.

ದಿಬ್ಬೂರಿನ ವಿವಿಧ ಸಂಘಟನೆಗಳ ಮುಖಂಡರು, ನಾಗರೀಕರು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು.